ಚಿಕ್ಕಮಗಳೂರು ಭದ್ರಾ ಅಭಯಾರಣ್ಯ ಹುಲಿ ಮೀಸಲು ವ್ಯಾಪ್ತಿಯ ಲಕ್ಕವಳ್ಳಿ ವಲಯದ ಹಿನ್ನೀರು ಪ್ರದೇಶ ಬೈರಾಪುರ ಸರ್ವೇ ನಂಬರ್ 37ರಲ್ಲಿ ಆನೆಯನ್ನು ಕೊಂದು ದಂತ ಅಪಹರಣ ಪ್ರಕರಣಕ್ಕೆ ತಿರುವು ಸಿಕ್ಕಿದೆ.
ಪ್ರಕರಣದಲ್ಲಿ ಅಲ್ಲಿನ ಸಿಬ್ಬಂದಿ ಭಾಗಿ ಆಗಿರುವ ಬಗ್ಗೆ ತನಿಖೆಯಲ್ಲಿ ಖಚಿತವಾದ ಹಿನ್ನೆಲೆಯಲ್ಲಿ ಡಿ ಆರ್ ಎಫ್ ಓ ಕುಮಾರ್ ನಾಯಕ್ ಮತ್ತು ಫಾರೆಸ್ಟ್ ಗಾರ್ಡ್ ದೇವರಾಜ್ ಅವರನ್ನು ಅಮಾನತು ಮಾಡಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಉಪೇಂದ್ರ ಪ್ರತಾಪ್ ಸಿಂಗ್ ಅವರು ಆದೇಶಿಸಿದ್ದಾರೆ.
ಆನೆ ಹತ್ಯೆ ಹಲವು ಸಂಶಯಗಳಿಗೆ ಕಾರಣವಾಗಿದೆ. ಜೂನ್ 2024ರಲ್ಲೇ ಆನೆ ಕಳೇಬರ ಅಲ್ಲಿನ ಬೀಟ್ ಸಿಬ್ಬಂದಿಗೆ ಸಿಕ್ಕಿದೆ. ಆಗ ಅದರಲ್ಲಿ ದಂತ ಇರುವುದು ಕಂಡುಬಂದಿದೆ. ಇದನ್ನು ಮೇಲಾಧಿಕಾರಿಗಳಿಗೆ ತಿಳಿಸದೆ ದಂತ ಕಳವು ಮಾಡಿರುವ ಸಾಧ್ಯತೆ ಇರುವುದು ಮೇಲ್ನೋಟಕ್ಕೆ ಖಚಿತವಾಗಿದೆ. ಆನೆ ಕಳೇಬರದ ಮರಣೋತ್ತರ ಪರೀಕ್ಷೆ ಕಾಟಾಚಾರಕ್ಕೆ ಮಾಡಿಸಿ ಹೆಣ್ಣು ಆನೆ ಎಂದು ಮುಚ್ಚಿಹಾಕುವ ವ್ಯವಸ್ಥಿತ ಹುನ್ನಾರ ಮಾಡಿದ ಆರೋಪವಿದೆ.

ಇದರಲ್ಲಿ ಸರ್ಕಾರೇತರ ಸಂಸ್ಥೆ ಸದಸ್ಯರೊಬ್ಬರು ಭಾಗಿ ಆಗಿ ಸಿಬ್ಬಂದಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಎನ್ನಲಾಗಿದ್ದು ಸರ್ಕಾರಿ ಪಶು ವೈದ್ಯರು ಬಾರದೆ ಇಲಾಖೆಯ ಗುತ್ತಿಗೆ ವೈದ್ಯರೇ ಮರಣೋತ್ತರ ಪರೀಕ್ಷೆ ಮಾಡಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ.
ಮಾಧ್ಯಮ ವರದಿ, ಸಾಮಾಜಿಕ ಪರಿಸರ ಕಾರ್ಯಕರ್ತರು ದೂರು ನೀಡಿದ ಮೇಲೆ ಅರಣ್ಯ ಸಚಿವರು ತನಿಖೆ ಮಾಡುವಂತೆ ಆದೇಶ ಮಾಡಿದ್ದರು.
ಇಲಾಖೆ ಹಿರಿಯ ಅಧಿಕಾರಿಗಳು ತನಿಖೆ ಮಾಡಿ ಆನೆ ಕೊಂದು ದಂತ ನಾಪತ್ತೆ ಅಗಿದೆ ಎಂದು ಒಪ್ಪಿಕೊಂಡಿದ್ದಾರೆ . ಅಧೀನ ಸಿಬ್ಬಂದಿಯನ್ನು ಅಮಾನತು ಮಾಡಿ ಹಿರಿಯ ಅಧಿಕಾರಿಗಳನ್ನು ರಕ್ಷಿಸುವ ಯತ್ನ ಮಾಡಲಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ.
ಅಮಾಯಕರ ತಲೆಗೆ ಆರೋಪ ಹೊರಿಸಲು ಸಂಚು
ಪ್ರಕರಣದ ತನಿಖೆ ತಮ್ಮ ಬುಡಕ್ಕೆ ಬರುತ್ತಿರುವುದನ್ನು ಕಂಡು ಕುಮಾರ್ ನಾಯಕ್ ಹಾಗೂ ದೇವರಾಜು ಅವರು ತಮ್ಮ ಕೆಲಸ ಕಳೆದುಕೊಳ್ಳುವ ಭಯದಲ್ಲಿ ಸಿಂಗನ ಮನೆ, ಶಾಂತಿನಗರದ ಕೆಲವು ಯುವಕರನ್ನು ಪದೆ ಪದೆ ವಿಚಾರಣೆ ನೆಪದಲ್ಲಿ ಕಿರುಕುಳ ನೀಡುತ್ತಿದ್ದಲ್ಲದೆ, ಅವರೆ ಆರೋಪಿಗಳು ಎಂದು ಒಪ್ಪಿಕೊಳ್ಳುವ ರೀತಿಯಲ್ಲಿ ಹಣದ ಆಮೇಶ ಹೊಡ್ಡಿ, ಕಳೆದ ಇಪ್ಪತ್ತು ದಿನಗಳ ಹಿಂದೆ ಕುಟುಂಬಸ್ಥರಿಗೆ ವಿಚಾರ ತಿಳಿಸದೆ ನಾಲ್ಕು ಹುಡುಗರನ್ನು ಸಂಜೆ ಭದ್ರ ಡ್ಯಾಮ್ ಮೇಲಿರುವ ಅರಣ್ಯ ಇಲಾಖೆ ಐ,ಬಿ, ಯಲ್ಲಿರಿಸಿ ತಡ ರಾತ್ರಿ ದೈಹಿಕವಾಗಿ ಕಿರುಕುಳ ನೀಡಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಇಡಿ ರಾತ್ರಿ ಕುಟುಂಬಸ್ಥರು ಕೂಡ ರಾತ್ರಿ ಚಳಿಯಲ್ಲಿಯೇ ಹೊರಗಡೆ ಕಾದು ಕುಳಿತಿರುವ ಘಟನೆ ಬೆಳಕಿಗೆ ಬಂದಿದೆ.
ಕುಟುಂಬಸ್ಥರು ಹಾಗೂ ಗ್ರಾಮಸ್ಥರೆಲ್ಲರೂ ಪ್ರತಿಭಟನೆಗೆ ಮುಂದಾದಾಗ ಮಾದ್ಯಮದವರು ಸ್ಥಳದಲ್ಲಿದ್ದ ಕಾರಣ
ಬೆಳಗಿನ ಜಾವಾ 7 ಗಂಟೆ ನಂತರ ಲಕ್ಕವಳಿ ಗ್ರಾಮದಲ್ಲಿರುವ ಕಚೇರಿಗೆ ಆ ವ್ಯಕ್ತಿಗಳನ್ನು ಕರೆತಂದಿದ್ದಾರೆ, ನಂತರ ಮೇಲಾಧಿಕಾರಿಗಳು ತನಿಖೆ ಮುಂದುವರೆಸಿ ಮನೆಗಳಿಗೆ ಶ್ವನಾ ದಳ ತಪಾಸಣೆ ನಡೆಸಿ, ಅಮಾಯಕ ನಿರಪರಾಧಿಗಳನ್ನು ಬಿಡುಗಡೆ ಗೊಳಿಸಿದ್ದಾರೆ.



