ಸಾಂದರ್ಭಿಕ ಚಿತ್ರ
ಕಾಫಿ ಕೊಯ್ಲು ಮಾಡುತ್ತಿದ್ದಾಗ ಕಾಡುಕೋಣ ದಾಳಿ ನಡೆಸಿದ ಪರಿಣಾಮ ಕಾರ್ಮಿಕ ಮಹಿಳೆಯೋರ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ.
ಮೂಡಿಗೆರೆ ತಾಲ್ಲೂಕಿನ ಹಳೇಕೋಟೆ ಗ್ರಾಮದಲ್ಲಿ ಬುಧವಾರ ಬೆಳೆಗ್ಗೆ ಈ ದುರ್ಘಟನೆ ನಡೆದಿದೆ. ಹಳೇಕೋಟೆ ಗ್ರಾಮದ ಕಾಫಿ ಬೆಳೆಗಾರರಾದ ಹಳೇಕೋಟೆ ರಮೇಶ್ ಅವರ ಶಾರದಾಂಭ ಎಸ್ಟೇಟ್ ನಲ್ಲಿ ಈ ದುರ್ಘಟನೆ ನಡೆದಿದೆ.
ಇಂದು ಬೆಳಿಗ್ಗೆ ಅಸ್ಸಾಂ ಮೂಲದ ಕಾರ್ಮಿಕರು ರಮೇಶ್ ಅವರ ತೋಟದಲ್ಲಿ ಕಾಫಿ ಕೊಯ್ಲು ಮಾಡುವುದರಲ್ಲಿ ನಿರತರಾಗಿದ್ದರು. ಸುಮಾರು 11 ಗಂಟೆ ಸಮಯದಲ್ಲಿ ಏಕಾಏಕಿ ಕಾಡುಕೋಣವೊಂದು ಕಾರ್ಮಿಕರ ಮೇಲೆ ದಾಳಿ ನಡೆಸಿದೆ. ದಾಳಿಯಲ್ಲಿ ಅಸ್ಸಾಂ ಮೂಲದ ವಿವಾಹಿತ ಮಹಿಳಾ ಕಾರ್ಮಿಕರೊಬ್ಬರು ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಸ್ಸಾಂ ಮೂಲದ ಕಾರ್ಮಿಕ ಮಹಿಳೆ ಬಸೂರಿ ಬೀಬಿ (42 ವರ್ಷ) ಸಾವನ್ನಪ್ಪಿರುವ ದುರ್ದೈವಿ.
ಕಾಡುಕೋಣ ಮಹಿಳೆಯ ಹೊಟ್ಟೆ ಮತ್ತು ಎದೆಯ ಭಾಗದಕ್ಕೆ ತಮ್ಮ ಕೊಂಬಿನಿಂದ ತಿವಿದಿದ್ದು, ತೀವ್ರವಾಗಿ ಗಾಯಗೊಂಡ ಮಹಿಳೆ ಸ್ಥಳದಲ್ಲಿಯೇ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.
ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮೃತದೇಹವನ್ನು ಮೂಡಿಗೆರೆ ಎಂಜಿಎಂ ಆಸ್ಪತ್ರೆಗೆ ಕೊಂಡೊಯ್ದಿದ್ದು, ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ.
ಮಹಿಳೆಯ ಸಾವಿನಿಂದ ಅವರ ಜೊತೆಯಲ್ಲಿದ್ದ ಕುಟುಂಬದವರು ಮತ್ತು ಸಂಬಂಧಿಕರು ತೀವ್ರ ಆಘಾತಕ್ಕೆ ಒಳಗಾಗಿದ್ದಾರೆ.
ಮಲೆನಾಡು ಭಾಗದಲ್ಲಿ ಕಾಡುಕೋಣಗಳು ವಿಪರೀತ ಸಂಖ್ಯೆಯಲ್ಲಿದ್ದು, ನಿರಂತರವಾಗಿ ಕಾಫಿ ತೋಟಗಳಿಗೆ ಲಗ್ಗೆ ಇಡುತ್ತಿವೆ. ಕಾಫಿ ತೋಟಗಳಲ್ಲಿ ಗಿಡಗಳನ್ನು ಕಿತ್ತು ಹಾಕುವುದಲ್ಲದೇ, ಈ ರೀತಿಯ ಜೀವ ಹಾನಿಗೂ ಕಾರಣವಾಗುತ್ತಿವೆ. ಕಾಡುಕೋಣಗಳ ನಿಯಂತ್ರಣಕ್ಕೆ ಅರಣ್ಯ ಇಲಾಖೆ ಸೂಕ್ತ ಕ್ರಮ ವಹಿಸಬೇಕು ಎಂದು ಸ್ಥಳೀಯರು ಆಗ್ರಹಿದ್ದಾರೆ.



