ಚಿಕ್ಕಮಗಳೂರಿನಿಂದ ಸುಬ್ರಮಣ್ಯಕ್ಕೆ ತೆರಳುತ್ತಿದ್ದ ಕಿಯಾ ಕಂಪನಿಯ ಕಾರೊಂದರಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡು ಸಂಪೂರ್ಣ ಸುಟ್ಟು ಭಸ್ಮವಾಗಿರುವ ಘಟನೆ ನಡೆದಿದೆ.
ಚಿಕ್ಕಮಗಳೂರಿನಿಂದ ಸುಬ್ರಮಣ್ಯಕ್ಕೆ ಪ್ರಯಾಣಿಸುತ್ತಿದ್ದ ಶೇಷಾದ್ರಿ ಮತ್ತು ಅವರ ಪತ್ನಿ ಬೆಲೂರು ತಾಲ್ಲೂಕಿನ ಕಡೆಗರ್ಜೆ ಬಳಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಕಾರನ್ನು ರಸ್ತೆಬದಿಗೆ ನಿಲ್ಲಿಸಿ ಕೆಳಗಿಳಿದಿದ್ದಾರೆ. ನೋಡನೋಡುತ್ತಿದ್ದಂತೆ ಬೆಂಕಿ ಕಾರನ್ನು ಸಂಪೂರ್ಣ ಆವರಿಸಿಕೊಂಡಿದೆ. ಘಟನೆಯಿಂದ ಕಾರು ಸಂಪೂರ್ಣ ಸುಟ್ಟು ಭಸ್ಮವಾಗಿದೆ.
ಬೆಂಕಿ ಕೆಲವೇ ಕ್ಷಣಗಳಲ್ಲಿ ವಾಹನವನ್ನು ಸಂಪೂರ್ಣವಾಗಿ ವ್ಯಾಪಿಸಿಕೊಂಡರೂ ಅದೃಷ್ಟವಶಾತ್, ಕಾರಿನಲ್ಲಿದ್ದ ದಂಪತಿಗಳು ಕಾರಿನಿಂದ ಕೆಳಗೆ ಇಳಿದಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮುಂಜಾನೆಯಾದ್ದರಿಂದ ಅಷ್ಟಾಗಿ ದಾರಿಯಲ್ಲಿ ಯಾರೂ ಸಾಗುತ್ತಿರಲಿಲ್ಲ. ಹಾಗಾಗಿ ಸಹಾಯಕ್ಕೆ ಸ್ಥಳೀಯರು ಧಾವಿಸಿಲ್ಲ. ಕೆಲಕಾಲ ಅಸಹಾಯಕರಾಗಿ ಸ್ಥಳದಲ್ಲೇ ನಿಂತು ನಂತರ ಪೊಲೀಸ್ ಠಾಣೆಗೆ ತೆರಳಿ ದಂಪತಿ ವಿಷಯ ತಿಳಿಸಿದ್ದಾರೆ.
ಸ್ಥಳಕ್ಕಾಗಮಿಸಿದ ಅರೆಹಳ್ಳಿ ಠಾಣೆ ಪೊಲೀಸರು ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದು, ಕಾರಿನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಈ ಅವಘಡ ಸಂಭವಿಸಿರಬಹುದು ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ.



