ಚಿಕ್ಕಮಗಳೂರು ತಾಲ್ಲೂಕಿನ ಮೂಗ್ತಿಹಳ್ಳಿಯಿಂದ ಮೂಡಿಗೆರೆ ಹ್ಯಾಂಡ್ ಪೋಸ್ಟ್ ವರೆಗೆ ರಸ್ತೆ ಅಗಲೀಕರಣಕ್ಕೆ 2024 ಮಾರ್ಚ್ ತಿಂಗಳಿನಲ್ಲಿ ಕೇಂದ್ರ ಭೂ ಸಾರಿಗೆ ಸಚಿವರಾದ ನಿತಿನ್ ಗಡ್ಕರಿಯವರು ದ್ವಿಪಥ ರಸ್ತೆ ನಿರ್ಮಾಣಕ್ಕೆ ಅನುದಾನ ಮಂಜೂರು ಮಾಡಿರುತ್ತಾರೆ. ಆದರೆ ಇಲ್ಲಿಯವರೆಗೆ ಹೊಸದಾಗಿ ರಸ್ತೆ ನಿರ್ಮಿಸಲು ಬೇಕಾದ ಪೂರ್ವಭಾವಿ ಕೆಲಸಗಳಾದ ರಸ್ತೆಯ ಅಕ್ಕಪಕ್ಕದ ಜಾಗಗಳನ್ನು ಹೆಚ್ಚುವರಿ ಸೇರಿಸಿಕೊಳ್ಳುವುದು ಮತ್ತು ಸಾಲುಮರಗಳನ್ನು ತೆರವುಗೊಳಿಸುವುದು ಇಂಥ ಕೆಲಸಗಳನ್ನು ಪ್ರಾರಂಭಿಸಿರುವುದಿಲ್ಲ, ರಸ್ತೆ ಕಾಮಗಾರಿಯನ್ನು ಶೀರ್ಘವಾಗಿ ಪ್ರಾರಂಭಿಸಿ ಸಾರ್ವಜನಿಕರ ಓಡಾಟಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಬಿ.ಸಿ.ದಯಾಕರ್ ಆಗ್ರಹಿಸಿದ್ದಾರೆ.
ಅವರು ಶುಕ್ರವಾರ ಮೂಡಿಗೆರೆ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು. ಮಲೆನಾಡು ಭಾಗದಲ್ಲಿ ಬೇಸಿಗೆ ಕಾಲದಲ್ಲಷ್ಟೇ ಕಾಮಗಾರಿಗಳನ್ನು ಮಾಡಲು ಸಾಧ್ಯವಾಗಿರುತ್ತದೆ ಆದರೆ ಅನುದಾನ ಮಂಜೂರಾದ ವರ್ಷವಾಗುತ್ತಾ ಬಂದರೂ ಕಾಮಗಾರಿ ಪ್ರಾರಂಭಿಸಿರುವುದಿಲ್ಲ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಈ ಬಗ್ಗೆ ಆಸಕ್ತಿ ವಹಿಸಿ ಆದಷ್ಟು ಬೇಗ ಕಾಮಗಾರಿಯನ್ನು ಪ್ರಾರಂಭಿಸುವ ನಿಟ್ಟಿನಲ್ಲಿ ಕ್ರಮ ವಹಿಸಬೇಕು. ಈ ರಸ್ತೆ ಜಿಲ್ಲೆಯ ಅಭಿವೃದ್ಧಿಗೆ ಮತ್ತು ಸಾರ್ವಜನಿಕರ ಓಡಾಟಕ್ಕೆ ಅತಿಮುಖ್ಯ ರಸ್ತೆಯಾಗಿದೆ. ಮೂಡಿಗೆರೆ ಪಟ್ಟಣದ ವ್ಯಾಪ್ತಿಯಲ್ಲಿ ಕೆ.ಎಂ. ರಸ್ತೆ ಸಂಪೂರ್ಣ ಹದಗೆಟ್ಟುಹೋಗಿದ್ದು, ಸಾಮಾನ್ಯ ಜನರ ಓಡಾಟಕ್ಕೆ, ವಾಹನ ಸವಾರರಿಗೆ ಬಹಳ ತೊಂದರೆಯುಂಟಾಗಿದೆ. ರಸ್ತೆ ಕಾಮಗಾರಿಯನ್ನು ಹದಿನೈದು ದಿನಗಳ ಓಳಗೆ ಪ್ರಾರಂಭಿಸದೇ ಇದ್ದರೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.
ಹಸಿರುಸೇನೆ ಜಿಲ್ಲಾ ಸಂಚಾಲಕ ಡಿ.ಎಸ್. ರಮೇಶ್ ಗೌಡ ಮಾತನಾಡಿ ; ಚಿಕ್ಕಮಗಳೂರು ಮೂಡಿಗೆರೆ ರಸ್ತೆ ಅಭಿವೃದ್ಧಿಗೆ ಆಗ್ರಹಿಸಿ 2024ರ ಜನವರಿ ತಿಂಗಳಿನಲ್ಲಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಕ್ಕೆ ಒತ್ತಡ ತರಲು ರಾಜ್ಯ ರೈತ ಸಂಘ ಮತ್ತು ಇತರ ಪ್ರಗತಿಪರ ಸಂಘಟನೆಗಳ ನೆರವಿನಿಂದ ಕನ್ನಡ ರಕ್ಷಣಾ ವೇದಿಕೆ ಬೆಂಬಲದೊಂದಿಗೆ ರಸ್ತೆ ತಡೆ ಚಳುವಳಿ ನಡೆಸಲಾಗಿತ್ತು ಹಿಂದಿನ ಲೋಕಸಭಾ ಸದಸ್ಯರಾದ ಶೋಭಾ ಕರಂದ್ಲಾಜೆ ಅವರು ಕೇಂದ್ರ ಮಂತ್ರಿಗಳಲ್ಲಿ ಮನವಿ ಮಾಡಿ ಹಣ ಮಂಜೂರು ಮಾಡಿಸಿರುತ್ತಾರೆ ಆದರೆ ಇಲ್ಲಿಯವರೆಗೂ ಕಾಮಗಾರಿ ಪ್ರಾರಂಭಿಸದೇ ಇರುವುದು ಅಧಿಕಾರಿಗಳು ಮತ್ತು ಗುತ್ತಿಗೆದಾರರ ನಿರ್ಲಕ್ಷ್ಯವನ್ನು ತೋರ್ಪಡಿಸುತ್ತದೆ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪ್ರಾರಂಭಿಸಬೇಕು ಎಂದು ಆಗ್ರಹಿಸಿದ್ದಾರೆ.
ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಅಧ್ಯಕ್ಷ ವಿನೋದ್ ಬಿದರಹಳ್ಳಿ ಮಾತನಾಡಿ ; ಮಲೆನಾಡು ಭಾಗದಲ್ಲಿ ಕಾಡಾನೆ ಮತ್ತು ಕಾಡುಪ್ರಾಣಿಗಳ ಹಾವಳಿ ಅತಿಯಾಗಿದೆ, ಇಲ್ಲಿನ ಜನರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕ್ಷೇತ್ರದ ಜನಪ್ರತಿನಿಧಿಗಳು ಈ ಬಗ್ಗೆ ಹೆಚ್ಚಿನ ಗಮನ ಹರಿಸಿ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ರೈತ ಸಂಘದ ತಾಲ್ಲೂಕು ಕಾರ್ಯದರ್ಶಿ ಎಂ.ಎನ್. ಚಂದ್ರೇಗೌಡ, ತಾಲ್ಲೂಕು ಮಂಡಳಿ ಸದಸ್ಯ ಬಿ.ಆರ್.ಸುಧೀರ್ ಉಪಸ್ಥಿತರಿದ್ದರು.



