ಲಾರಿ ಸಮೇತ ಕೋಟ್ಯಂತರ ಮೌಲ್ಯದ ಅಡಿಕೆ ಕಳ್ಳತನ ಮಾಡಿದ್ದ ಐವರು ಅಂತರ್ ರಾಜ್ಯ ಕಳ್ಳರನ್ನು ಚಿಕ್ಕಮಗಳೂರು ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲ್ಲೂಕಿನ ಬೀರೂರಿನ ಬಾಲಾಜಿ ರೋಡ್ ವೇಸ್ ನ ಮಾಲೀಕ ದುಲಾರಾಮ್ ರವರ ಬೀರೂರಿನ ದೇವಗಿರಿ ಟ್ರೇಡರ್ಸ್ ನಲ್ಲಿ ಡಿಸೆಂಬರ್ 12ರಂದು ತಲಾ 70 ಕೆ.ಜಿ ತೂಕದ 350 ಚೀಲಗಳು ಲೋಡ್ ಆಗಿದ್ದು ಗುಜರಾತ್ ಗೆ ತಲುಪಬೇಕಾಗಿತ್ತು. ಲಾರಿಯ ಚಾಲಕ ಮೊಹಮ್ಮದ್ ಸುಬಾನ್ ಹಾಗೂ ಲಾರಿ ಕಂಡಕ್ಟರ್ ಮೊಹಮ್ಮದ್ ಫಯಾಜ್ ಸೇರಿಕೊಂಡು ಅಡಿಕೆಯನ್ನು ಗುಜರಾತ್ ಗೆ ತೆಗೆದುಕೊಂಡು ಹೋಗದೆ ವಂಚಿಸಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದರು.
ಬೀರೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ವಿಶೇಷ ತಂಡವನ್ನು ರಚಿಸಿ ತನಿಖೆ ನಡೆಸಿದ್ದು, ಖಚಿತ ಮಾಹಿತಿ ಆದರಿಸಿ ಬೆಂಗಳೂರಿನಲ್ಲಿ ಐವರು ಆರೋಪಿಗಳನ್ನು ಬಂಧಿಸಲಾಗಿದೆ.

ತೀರ್ಥಹಳ್ಳಿಯ ಅಮೀರ್ ಅಹಮ್ಮದ್, ಶಿವಮೊಗ್ಗ ಟಿಪ್ಪು ನಗರದ ಮೊಹಮ್ಮದ್ ಗೌಸ್ ಖಾನ್, ಹಳೆ ತೀರ್ಥಹಳ್ಳಿ ರಸ್ತೆಯ ಮೊಹಮ್ಮದ್ ಸುಭಾನ್ ಗಬ್ಬರ್, ಸವಾರಿ ಪಾಳ್ಯದ ಮೊಹಮ್ಮದ್ ಫಯಾಜ್ , ಕಡೂರಿನ ಮೊಹಮ್ಮದ್ ಸಾದಿಕ್ ರನ್ನು ಬಂಧಿಸಲಾಗಿದೆ.
ಪ್ರಕರಣದಲ್ಲಿ ಆರೋಪಿತರ ಪತ್ತೆಗಾಗಿ ಕ್ಷಿಪ್ರ ಕಾರ್ಯಾಚರಣೆ ನಡೆಸಲು ಪೊಲೀಸ್ ಅಧೀಕ್ಷಕ ಡಾ|| ವಿಕ್ರಂ ಅಮಟೆ ತರೀಕೆರೆ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ವಿ.ಎಸ್.ಹಾಲಮೂರ್ತಿರಾವ್ ನೇತೃತ್ವದಲ್ಲಿ ತಂಡ ರಚಿಸಿ ಆರೋಪಿಗಳ ಪತ್ತೆ ಮಾಡಲು ವ್ಯೂಹ ರಚಿಸಿದ್ದರು.
ಜಿಲ್ಲಾ ತಾಂತ್ರಿಕ ವಿಭಾಗದ ಸಿಬ್ಬಂಧಿಗಳಾದ ನಯಾಜ್ ಅಂಜುಮ್ ಮತ್ತು ರಬ್ಬಾನಿ ಹಾಗೂ ಬೀರೂರು ಪೊಲೀಸ್ ಠಾಣೆಯ ರಾಧ ಇವರುಗಳ ತಾಂತ್ರಿಕ ಸಹಯೋಗದೊಂದಿಗೆ ವಿವಿಧ ಆಯಾಮಗಳಲ್ಲಿ ಮಾಹಿತಿಯನ್ನು ಸಂಗ್ರಹಿಸಿ ವೈಜ್ಞಾನಿಕವಾಗಿ ತನಿಖೆ ನಡೆಸಿ ಆರೋಪಿತರುಗಳ ಪತ್ತೆಯ ಬಗ್ಗೆ ನಿಖರ ಮಾಹಿತಿಯನ್ನು ಕಲೆಹಾಕಿ ನಂತರ ಆರೋಪಿತರ ಇರುವಿಕೆಯ ಬಗ್ಗೆ ಖಚಿತ ಮಾಹಿತಿ ಪಡೆದುಕೊಂಡು ಬೆಂಗಳೂರಿನ ತಿರುಪಾಳ್ಯದ ಸ್ಕೋಂಡೋ 2 ಅಪಾರ್ಟ್‌ಮೆಂಟ್ ಬಳಿ ಆರೋಪಿಗಳನ್ನು ದಸ್ತಗಿರಿ ಮಾಡಿದ್ದರು.
ಅಡಿಕೆ ತುಂಬಿದ್ದ ಲಾರಿಯನ್ನು ಗುಜರಾತಿಗೆ ಕೊಂಡೊಯ್ಯದೇ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆಯಲ್ಲಿ ಅನ್ ಲೋಡ್ ಮಾಡಿದ್ದಾರೆ ಇನ್ನೊಬ್ಬ ಆರೋಪಿ ತಲೆಮರೆಸಿಕೊಂಡಿರುತ್ತಾನೆ.
ಪೊಲೀಸ್ ತಂಡವು ಆರೋಪಿಗಳಿಂದ ರೂ. 1.05 ಕೋಟಿ ಮೌಲ್ಯದ 335 ಚೀಲ ಅಡಿಕೆ, ರೂ. 15 ಲಕ್ಷ ಮೌಲ್ಯದ ಲಾರಿ ಮತ್ತು ರೂ. 2.30 ಲಕ್ಷ ನಗದು ವಶಪಡಿಸಿಕೊಂಡಿರುತ್ತಾರೆ.
ಆರೋಪಿಗಳು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕೊಲೆ, ಕಳ್ಳತನ ಮತ್ತು ಸುಲಿಗೆ ಪ್ರಕರಣಗಳಲ್ಲಿ ಭಾಗಿಯಾಗಿರುತ್ತಾರೆ. ಬೀರೂರು ಠಾಣಾ ವ್ಯಾಪ್ತಿಯ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗುವುದರ ಜೊತೆಗೆ ಹಾಸನ, ಶಿವಮೊಗ್ಗ, ತುಮಕೂರು, ಉಡುಪಿ, ಉತ್ತರ ಕನ್ನಡ, ವಿಜಯನಗರ, ಬೆಂಗಳೂರು ಸೇರಿದಂತೆ ಹೊರ ರಾಜ್ಯಗಳಲ್ಲೂ ಆರೋಪಿಗಳು ಕಳ್ಳತನ ಮಾಡಿದ್ದರು ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.

ಪೊಲೀಸ್ ತಂಡದಲ್ಲಿ ಸಿಪಿಐ ಕಡೂರು ರಫೀಕ್, ಪಿಎಸ್ಐ ಗಳಾದ ಸಜಿತ್ ಕುಮಾರ್ ಜಿ ಆರ್, ಡಿ ವಿ ತಿಪ್ಪೇಶ್, ಶಶಿಕುಮಾರ್ ವೈ ಎನ್, ಗಣಪತಿ ಎಸ್ ಶೇರುಗಾರ ಹಾಗೂ ಪೊಲೀಸ್ ಸಿಬ್ಬಂದಿಗಳಾದ ಹೇಮಂತ್ ಕುಮಾರ್ ಡಿ ವಿ, ಕೃಷ್ಣಮೂರ್ತಿ ಬಿ ಪಿ, ರಾಜಪ್ಪ, ನಾಗರಾಜ ವೈ, ಚಂದ್ರನಾಯ್ಕ ಮತ್ತು ಶ್ರೀಮತಿ ರಾಧ ರವರು ಕಾರ್ಯನಿರ್ವಹಿಸಿರುತ್ತಾರೆ.
ಆರೋಪಿಗಳನ್ನು ಹಡೆಮುರಿಕಟ್ಟಿ ಪ್ರಕರಣವನ್ನು ಪತ್ತೆಹಚ್ಚಿದ ಪೊಲೀಸ್ ತಂಡಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.



