ಮೂಡಿಗೆರೆ ತಾಲೂಕಿನ ಬಹುತೇಕ ಕಡೆಗಳಲ್ಲಿ ಬಹಳ ಹಿಂದೆ ಕಟ್ಟಿದ ಸರ್ಕಾರಿ ಶಾಲಾ ಕಟ್ಟಡಗಳು ಸರಿಯಾದ ನಿರ್ವಹಣೆ ಕಾಣದೆ ಶಿಧಿಲಾವಸ್ತೆಗೆ ತಲುಪಿ ಕುಸಿಯುವ ಹಂತ ತಲುಪಿದೆ. ಅಂತಹ ಶಾಲೆಗಳಿಗೆ ಹೊಸತಾಗಿ ಮತ್ತೊಂದು ಕೊಠಡಿ ನಿರ್ಮಿಸುವ ಬದಲು ಎಲ್ಲ ಸೌಕರ್ಯಗಳನ್ನೊಳಗೊಂಡ ಹೊಸ ಸುಸಜ್ಜಿತವಾದ ಕಟ್ಟಡ ನಿರ್ಮಿಸಿದಲ್ಲಿ ಅದು ಮತ್ತಷ್ಟು ಕಾಲ ಬಳಸುವಂತಾಗುವುದಲ್ಲದೆ ಸರ್ಕಾರಿ ಶಾಲೆಗಳ ಬಗ್ಗೆ ವಿಧ್ಯಾರ್ಥಿ ಮತ್ತು ಪೋಷಕರಲ್ಲಿ ಆತ್ಮಾಭಿಮಾನ ಹೆಚ್ಚಾಗಲಿದೆ ಎಂದು ವಿಧಾನಪರಿಷತ್ ಉಪ ಸಭಾಪತಿ ಎಂ.ಕೆ.ಪ್ರಾಣೇಶ್ ತಿಳಿಸಿದರು.
ಅವರು ಮಂಗಳವಾರ ತಾಲೂಕಿನ ಜಾವಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬೇಟಿ ನೀಡಿದಾಗ ಶಾಲೆಯ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿ, ಭಾರತೀಯ ಶಿಕ್ಷಣ ವ್ಯವಸ್ಥೆ ಆಧುನಿಕ ತಂತ್ರಜ್ಞಾನ ಯುಗದತ್ತ ದಾಪುಗಾಲಿಟ್ಟಿದೆ. ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ವಿಧ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ, ಶೈಕ್ಷಣಿಕ ಪರಿಕರಗಳು ಸಮವಸ್ತ್ರ ಎಲ್ಲವನ್ನೂ ಸರ್ಕಾರ ನೀಡುತ್ತಿದೆ.ಆದರೆ ಸುಸಜ್ಜಿತ ಕಟ್ಟಡ ನಿರ್ಮಾಣವಾಗುತ್ತಿಲ್ಲ. ವಿಧ್ಯಾರ್ಥಿಗಳ ಹಿತದೃಷ್ಟಿಯಿಂದ ಸರ್ಕಾರಿ ಶಾಲೆಗಳಿಗೆ ಅತ್ಯುತ್ತಮವಾದ ಕಟ್ಟಡದ ಅಗತ್ಯವಿದೆ. ಈ ಬಗ್ಗೆ ಆಧಿವೇಶನದಲ್ಲಿ ಚರ್ಚಿಸಿ ಸರ್ಕಾರದ ಗಮನ ಸೆಳೆಯಲಾಗಿದೆ. ಈ ಶಾಲೆಯ ಕಟ್ಟಡ ದುರಸ್ತಿಗಾಗಿ ತಮ್ಮ ಅನುದಾನದಿಂದ 2 ಲಕ್ಷ ರೂ ನೀಡುವುದಾಗಿ ಘೋಷಿಸಿದರು.
ಬಿಜೆಪಿ ಮುಖಂಡ ಪರೀಕ್ಷಿತ್ ಜಾವಳಿ ಮಾತನಾಡಿ, ಜಾವಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಕುಸಿಯುವ ಹಂತಕ್ಕೆ ಬಂದಿದೆ. ಮುಕ್ಕಾಲು ಶತಮಾನ ಪೂರೈಸಿದ ಈ ಕಟ್ಟಡವನ್ನು ತೆರೆವುಗೊಳಿಸಿ ಹೊಸ ಕಟ್ಟಡ ನಿರ್ಮಿಸಬೇಕು. ಶಾಲೆಯಲ್ಲಿ 74ವಿಧ್ಯಾರ್ಥಿಗಳಿದ್ದು 3ಶಿಕ್ಷಕರಿದ್ದಾರೆ. ಇಲಾಖೆಯಿಂದ ಓರ್ವ ಅತಿಥಿ ಶಿಕ್ಷಕರನ್ನು ನೇಮಿಸಲಾಗಿದೆ. ಇಬ್ಬರು ಶಿಕ್ಷಕರನ್ನು ಎಸ್‍ಡಿಎಂಸಿ ವತಿಯಿಂದ ನೇಮಿಸಿಕೊಳ್ಳಲಾಗಿದೆ. ಮುಖ್ಯಶಿಕ್ಷಕರ ಹುದ್ದೆ ಖಾಲಿಯಿದೆ. ಖಾಲಿ ಉಳಿದಿರುವ ಶಿಕ್ಷಕರನ್ನು ಭರ್ತಿ ಗೊಳಿಸುವಂತೆ ಮನವಿ ಮಾಡಿದರು.
ಈ ವೇಳೆ ಗ್ರಾ.ಪಂ.ಅಧ್ಯಕ್ಷ ಪ್ರದೀಪ್, ಎಸ್‍ಡಿಎಂಸಿ ಅಧ್ಯಕ್ಷ ಸುರೇಶ್, ಬಾಳೂರು ಹೋಬಳಿ ಬಿಜೆಪಿ ಅಧ್ಯಕ್ಷ ಮಂಜುನಾಥ್, ಮುಖಂಡರಾದ ಶಶಿಧರ್, ಕೃಷ್ಣ ಟೈಲರ್, ಮನೋಜ್, ಶಿಕ್ಷಕರಾದ ಆದಿತ್ಯ, ಆಶಾ, ತೇಜಸ್ವಿನಿ, ಗಂಗಮ್ಮ ಮತ್ತಿತರರಿದ್ದರು.



