ಮೈಕ್ರೊಫೈನಾನ್ಸ್ ಸಂಸ್ಥೆಗಳಿಗೆ ಹೆದರಿ ಯಾರೂ ಜೀವ ಕಳೆದುಕೊಳ್ಳಬೇಡಿ ಮತ್ತು ಅವರ ಪ್ರತಿನಿಧಿಗಳು ಕಿರುಕುಳ ನೀಡಿದರೆ ಅಂತಹ ಸಂಸ್ಥೆಗಳ ವಿರುದ್ಧ ದೂರು ದಾಖಲಿಸಿದರೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ತಿಳಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ಕಿರುಕುಳ ನೀಡುವ ಸಂಸ್ಥೆಗಳ ವಿರುದ್ಧ ಪೊಲೀಸರಿಗೆ ದೂರು ಕೊಡಿ, ಸರ್ಕಾರ ನಿಮ್ಮೊಂದಿಗಿದೆ. ಮೈಕ್ರೋಫೈನಾನ್ಸ್ ಸಂಸ್ಥೆಗಳ ಅಕ್ರಮ ವಸೂಲಿ ಪದ್ಧತಿಯಿಂದ ಯಾರೂ ಆತ್ಮಹತ್ಯೆ ಮಾಡಿಕೊಳ್ಳಬಾರದು. ನೀವು ಯಾವುದೇ ರೀತಿಯ ಕಿರುಕುಳವನ್ನು ಎದುರಿಸಿದರೆ, ಕೂಡಲೇ ದೂರು ನೀಡಿ. ನಾವು ಕಾನೂನು ಕ್ರಮ ಕೈಗೊಳ್ಳುತ್ತೇವೆ’ ಎಂದು ಹೇಳಿದರು.
ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ನಿಯಮಗಳನ್ನು ಉಲ್ಲಂಘಿಸುವ, ಅಧಿಕ ಬಡ್ಡಿ ದರ ವಿಧಿಸುವ ಅಥವಾ ಕಾನೂನುಬಾಹಿರವಾಗಿ ಕಾರ್ಯನಿರ್ವಹಿಸುವ ಮೈಕ್ರೋಫೈನಾನ್ಸ್ ಸಂಸ್ಥೆಗಳ ವಿರುದ್ಧ ರಾಜ್ಯ ಸರ್ಕಾರ ಕಾನೂನು ಕ್ರಮ ಕೈಗೊಳ್ಳಲಿದೆ. ಈ ಸಂಸ್ಥೆಗಳನ್ನು ನಿಯಂತ್ರಿಸಲು ಶೀಘ್ರವೇ ನಿರ್ದೇಶನ ನೀಡಲಾಗುವುದು ಎಂದರು.
ಮೈಕ್ರೋಫೈನಾನ್ಸ್ ಸಂಸ್ಥೆಗಳಿಂದ ಜನರು ಎದುರಿಸುತ್ತಿರುವ ತೊಂದರೆ ಮತ್ತು ರಾಜ್ಯದಲ್ಲಿ ಗೂಂಡಾ ರಾಜ್ ಆಡಳಿತವಿದೆ ಎಂಬ ಬಿಜೆಪಿ ಆರೋಪಗಳಿಗೆ ಪ್ರತಿಕ್ರಿಯಿಸಿದ ಸಿಎಂ, ಜನರು ತಮಗೆ ಲಭ್ಯವಿರುವ ಮೂಲಗಳಿಂದ ಸಾಲ ತೆಗೆದುಕೊಳ್ಳುತ್ತಾರೆ. ಆದರೆ, ಖಾಸಗಿ ಹಣಕಾಸು ಸಂಸ್ಥೆಗಳು ಮತ್ತು ಲೇವಾದೇವಿಗಾರರು ಹೆಚ್ಚಿನ ಬಡ್ಡಿ ದರ ಹೇರುತ್ತಾರೆ ಮತ್ತು ಜನರನ್ನು ಬೆದರಿಸಲು ಗೂಂಡಾಗಳನ್ನು ಬಳಸುತ್ತಾರೆ ಎಂದು ದೂರಿದರು.
‘ಮೈಕ್ರೋಫೈನಾನ್ಸ್ ಸಂಸ್ಥೆಗಳು ವಾರ್ಷಿಕ ಶೇ 28-30 ರಷ್ಟು ಬಡ್ಡಿ ದರವನ್ನು ವಿಧಿಸುತ್ತಿದ್ದು, ಇದರಿಂದ ಸಾಲಗಾರರು ಸಂಕಷ್ಟಕ್ಕೆ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಮೈಕ್ರೋಫೈನಾನ್ಸ್ ಸಂಸ್ಥೆಗಳು ಕೇಂದ್ರ ಸರ್ಕಾರದ ಅಧೀನದಲ್ಲಿರುವ ಆರ್‌ಬಿಐ ಮಾರ್ಗಸೂಚಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುವುದರಿಂದ, ಅವುಗಳನ್ನು ನಿಯಂತ್ರಿಸಲು ಮತ್ತು ಸಾಲಗಾರರಿಗೆ ಕಿರುಕುಳ ನೀಡುವ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ಶೀಘ್ರದಲ್ಲೇ ನಿರ್ದೇಶನ ನೀಡಲಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಮೈಕ್ರೊ ಫೈನಾನ್ಸ್ ಸಂಸ್ಥೆಗಳ ಕಿರುಕುಳ ತಪ್ಪಿಸಲು ಹಾಗೂ ಸಾಲಗಾರರ ಹಿತರಕ್ಷಣೆಗಾಗಿ ಸುಗ್ರೀವಾಜ್ಞೆ ಮೂಲಕ ಹೊಸ ಕಾನೂನು ಜಾರಿಗೆ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ನಿಯಮ ಮೀರಿದ ವ್ಯವಹಾರ ಮತ್ತು ಬಲವಂತದ ಸಾಲ ವಸೂಲಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವ ನಿರ್ಣಯ ಮಾಡಿದೆ ಎಂದರು.



