 
                
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಾಸಿಸುವ ಪರಿಶಿಷ್ಟ ಜಾತಿ, ಪರಿಶಿಷ್ಟ ಜನಾಂಗದವರ ಮೇಲೆ ನಡೆಯುವ ದೌರ್ಜನ್ಯದ ಬಗ್ಗೆ ಅರಿವು ಮೂಡಿಸುವ ಜೊತೆಗೆ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್‌ರವರ ಆಶಯದಂತೆ ಈ ಸಾಮಾಜಿಕ ಪಿಡುಗನ್ನು ತೊಡೆದುಹಾಕಲು ಬೀದಿನಾಟಕದ ಮೂಲಕ ಸಾರ್ಥಕ ಪ್ರಯತ್ನ ಮಾಡಲಾಗುತ್ತಿದೆ ಎಂದು ತಹಶೀಲ್ದಾರ್ ಸುಮಂತ್ ಶ್ಲಾಘಿಸಿದರು.
ಅವರು ಬುಧವಾರ ಚಿಕ್ಕಮಗಳೂರು ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ತಾಲ್ಲೂಕು ಆಡಳಿತ, ತಾ.ಪಂ, ಸಮಾಜ ಕಲ್ಯಾಣ ಇಲಾಖೆ ಹಾಗೂ ನವಜೀವನ ಚಾರಿಟೇಬಲ್ ಸೇವಾ ಸಂಸ್ಥೆ ಇವರುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ನಾಗರೀಕ ಹಕ್ಕು ರಕ್ಷಣಾ ಕಾಯಿದೆ 1955, 1989 ನಿಯಮ 1995 ತಿದ್ದುಪಡಿ ನಿಯಮಗಳು 2013 ರಂತೆ 17(ಎ) ಮತ್ತು ಪ.ಜಾ, ಪ.ಪಂ(ದೌರ್ಜನ್ಯ ಪ್ರತಿಬಂಧ) ಅಧಿನಿಯಮ ಹಾಗೂ ಇತರೆ ಯೋಜನೆಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಜನರ ಮೇಲೆ ದೌರ್ಜನ್ಯ ಎಸಗುವವರ ವಿರುದ್ಧ ನಿರ್ಧಾಕ್ಷಿಣ್ಯ ಕಠಿಣ ಕ್ರಮ ಕೈಗೊಳ್ಳುವ ಮೂಲಕ ಶಿಕ್ಷೆ ಆಗುವ ನಿಟ್ಟಿನಲ್ಲಿ ಕ್ರಮ ವಹಿಸುವುದಾಗಿ ಭರವಸೆ ನೀಡಿದರು.
ತಾ.ಪಂ ಕಾರ್ಯನಿರ್ವಹಣಾಧಿಕಾರಿ ವಿಜಯಕುಮಾರ್ ಮಾತನಾಡಿ, ಸವರ್ಣೀಯರಿಂದ ಪ.ಜಾ, ಪ.ಪಂ ಜನಾಂಗದವರ ಮೇಲೆ ಆಗುತ್ತಿರುವ ದೌರ್ಜನ್ಯದ ಬಗ್ಗೆ ಬೀದಿನಾಟಕದ ಮೂಲಕ ಅರಿವು ಮೂಡಿಸಲಾಗುತ್ತಿದೆ, ತಾಲ್ಲೂಕಿನ ಎಲ್ಲಾ 20 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರಂತರವಾಗಿ 5 ದಿನಗಳ ಕಾಲ ಈ ಜನಜಾಗೃತಿ ಕಾರ್ಯಕ್ರಮ ಜರುಗಲಿದೆ ಎಂದು ಹೇಳಿದರು.
ಮಹಿಳಾ ಠಾಣೆಯ ಸಬ್ ಇನ್ಸ್‌ಪೆಕ್ಟರ್ ನಂದಿನಿಶೆಟ್ಟಿ ಮಾತನಾಡಿ, ಪ.ಜಾ, ಪ.ಪಂ ಜನಾಂಗದವರ ಮೇಲೆ ದೌರ್ಜನ್ಯ ನಡೆಯುತ್ತಿರುವ ಕುರಿತು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜಾಗೃತಿ ಮೂಡಿಸುವ ಕಾರ್ಯ ಶ್ಲಾಘನೀಯ, ಆದರೂ ದೌರ್ಜನ್ಯ ನಡೆದರೆ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.
ಸರ್ಕಾರದ ನಿಯಮದಂತೆ ಇಲಾಖೆ ವತಿಯಿಂದ ಈ ಜನಾಂಗದವರಿಗೆ ಸಂಪೂರ್ಣ ರಕ್ಷಣೆ ಒದಗಿಸಲು ಬದ್ಧವಾಗಿರುವುದಾಗಿ ತಿಳಿಸಿದರು.
ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಹೆಚ್.ಡಿ ರೇವಣ್ಣ ಮಾತನಾಡಿ, ಪ.ಜಾ, ಪ.ಪಂ ಜನರು ವಾಸಿಸುವ ಎಲ್ಲಾ ಸ್ಥಳಗಳಲ್ಲಿ ಅವರ ಮೇಲೆ ನಡೆಯುವ ದೌರ್ಜನ್ಯಗಳ ಬಗ್ಗೆ ಸರ್ಕಾರದ ಆದೇಶದಂತೆ ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಇಂದು ಚಾಲನೆ ನೀಡಲಾಗಿದೆ ಎಂದರು.
ಇಂದಿನಿಂದ ತಾಲ್ಲೂಕಿನ 20 ಗ್ರಾಮ ಪಂಚಾಯಿತಿಗಳಲ್ಲಿ ಪರಿಶಿಷ್ಟ ಜನಾಂಗದವರು ವಾಸಿಸುವ ಗ್ರಾಮಗಳಲ್ಲಿ ನಡೆಯುವ ದೌರ್ಜನ್ಯಗಳ ಬಗ್ಗೆ ಸವರ್ಣೀಯರಲ್ಲಿ ಅರಿವು ಮೂಡಿಸಲು ಇಂತಹ ಕಾರ್ಯಕ್ರಮ ಸಹಕಾರಿ ಎಂದು ಹೇಳಿದರು.
ನಾಗರೀಕ ಸಮಾಜದಲ್ಲಿ ನಾವೆಲ್ಲಾ ಒಂದೇ ಎಂಬ ಭಾವನೆ ಮೂಡಿಸಲು ಈ ಕಾರ್ಯಕ್ರಮದ ಮೂಲಕ ಜನರಲ್ಲಿ ಅರಿವು, ಜಾಗೃತಿ ಮೂಡಿಸಲು ಕಲಾ ತಂಡಗಳೊಂದಿಗೆ ಬೀದಿನಾಟಕವನ್ನು ಆಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಮಹಿಳಾ ಠಾಣೆಯ ಪೇದೆಗಳಾದ ಗಾಯಿತ್ರಿ, ಮಂಜುಳ ಮತ್ತಿತರರು ಉಪಸ್ಥಿತರಿದ್ದರು


 
 

 
                                                         
                                                         
                                                         
                                                         
                                                         
                                                         
                                                        