
ಮಲೆನಾಡಿನಲ್ಲಿ ಕಾಡಾನೆ ದಾಳಿಗೆ ಮನುಷ್ಯರು ಬಲಿಯಾಗುವ ಸಾವಿನ ಸರಣಿ ಮುಂದುವರಿದಿದೆ. ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನಲ್ಲಿ ಮತ್ತೊಂದು ಜೀವ ಕಾಡಾನೆಗೆ ಬಲಿಯಾಗಿದೆ. ಬೇಲೂರು ತಾಲ್ಲೂಕಿನ ಅರೇಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಕೃಷಿಕ ಮಹಿಳೆಯೋರ್ವರನ್ನು ಕಾಡಾನೆ ದಾಳಿ ಮಾಡಿ ಸಾಯಿಸಿದೆ.
ಬೇಲೂರು ತಾಲ್ಲೂಕು ಬೆಳ್ಳಾವರ ಸಮೀಪದ ಕಣಗುಪ್ಪೆ ಗ್ರಾಮದಲ್ಲಿ ದನಗಳನ್ನು ಹುಡುಕಲು ಹೋದ ಕೃಷಿಕ ಮಹಿಳೆಯನ್ನು ಕಾಡಾನೆ ತುಳಿದು ಸಾಯಿಸಿದೆ.
ಕಣಗುಪ್ಪೆ ಗ್ರಾಮದ ಕೃಷಿಕರಾದ ತಿಮ್ಮೇಗೌಡ ಎಂಬುವವರ ಪತ್ನಿ ದ್ಯಾವಮ್ಮ (72 ವರ್ಷ) ಕಾಡಾನೆ ದಾಳಿಗೆ ಬಲಿಯಾಗಿರುವ ಮಹಿಳೆ.
ಗುರುವಾರ ಬೆಳಿಗ್ಗೆ ದನಗಳನ್ನು ಹುಡುಕಿಕೊಂಡು ಹೋದವರು ಮರಳಿ ಮನೆಗೆ ಬಂದಿರಲಿಲ್ಲ. ನಂತರ ಅವರನ್ನು ಹುಡುಕಿಕೊಂಡು ಹೋದಾಗ ಜಮೀನಿನ ಸಮೀಪ ಮುಳ್ಳಿನ ಪೊದೆಯಲ್ಲಿ ಅವರ ಶವ ಪತ್ತೆಯಾಗಿದೆ. ಕಾಡಾನೆ ದಾಳಿಯಿಂದ ಅವರು ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದರು.
ನಂತರ ಅರಣ್ಯ ಮತ್ತು ಪೊಲೀಸ್ ಇಲಾಖೆ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದರು. ಕಾಡಾನೆ ದಾಳಿಯಿಂದ ಮಹಿಳೆ ಮೃತಪಟ್ಟಿದ್ದು, ಸ್ಥಳೀಯರು ಅರಣ್ಯ ಇಲಾಖೆ ವಿರುದ್ಧ ಪ್ರತಿಭಟನೆ ನಡೆಸಿದರು.
ಈ ಭಾಗದಲ್ಲಿ ಕಾಡಾನೆ ದಾಳಿ ವಿಪರೀತವಾಗಿದ್ದು, ನಿರಂತರವಾಗಿ ಜನರ ಜೀವಕ್ಕೆ ಮತ್ತು ಬೆಳೆಗಳಿಗೆ ಹಾನಿಯುಂಟುಮಾಡುತ್ತಿವೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಇತ್ತೀಚಿನ ಕೆಲ ದಿನಗಳಲ್ಲಿ ಎರಡು ಜೀವಗಳು ಕಾಡಾನೆಗೆ ಬಲಿಯಾಗಿದ್ದು, ಇದೀಗ ಪಕ್ಕದ ಹಾಸನ ಜಿಲ್ಲೆಯಲ್ಲಿ ಮತ್ತೊಂದು ಜೀವ ಕಾಡಾನೆ ದಾಳಿಗೆ ಬಲಿಯಾಗಿದೆ.
ಕಾಡಾನೆ ದಾಳಿಯಿಂದ ಮೃತಪಟ್ಟ ವಿಷಯ ಹೊರಬೀಳುತ್ತಿದ್ದಂತೆ ಗ್ರಾಮಸ್ಥರು ಹಾಗೂ ಕುಟುಂಬಸ್ಥರು ಸ್ಥಳಕ್ಕೆ ಆಗಮಿಸಿ ಕಾಡಾನೆ ದಾಳಿಗೆ ತುತ್ತಾದ ಕುಟುಂಬಕ್ಕೆ ಸೂಕ್ತ ಪರಿಹಾರ ಹಾಗು ಕಾಡನೆಗಳಿಂದ ಶಾಶ್ವತ ಪರಿಹಾರ ಕಲ್ಪಿಸುವವರೆಗೂ ಮೃತ ದೇಹವನ್ನು ಮುಟ್ಟಬಾರದು ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ ಈ ವೇಳೆ ಸ್ಥಳಕ್ಕೆ ಪೊಲೀಸ್ ಹಾಗೂ ವಲಯ ಅರಣ್ಯಾಧಿಕಾರಿ ಯತೀಶ್ ಬೇಟಿ ನೀಡಿ ಮುಂದಿನ ಕ್ರಮ ಮಹಿಸಲು ಮರಣೋತ್ತರ ಪರೀಕ್ಷೆಗಾಗಿ ಮೃತ ದೇಹವನ್ನು ಸಾಗಿಸಲು ಅವಕಾಶ ನೀಡಿ ಎಂದು ಮನವಿ ಮಾಡಿದ್ದಾದರೂ ಅದಕ್ಕೊಪ್ಪದ ಗ್ರಾಮಸ್ಥರು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಶಾಸಕರು ಸ್ಥಳಕ್ಕೆ ಆಗಮಿಸಿ ಸೂಕ್ತ ಪರಿಹಾರ ಹಾಗೂ ಕಾಡನೆಗಳಿಂದ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಪಟ್ಟು ಹಿಡಿದು ಆಂಬುಲೆನ್ಸ್ ವಾಹನವನ್ನು ವಾಪಸ್ಸು ಕಳುಹಿಸಿದ್ದರು. ಕೊನೆಗೆ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಆಗಮಿಸಬೇಕು ಎಂದು ಸ್ಥಳೀಯರ ಶಾಸಕರು ಮತ್ತು ಜನರು ಪಟ್ಟು ಹಿಡಿದು ಕುಳಿತರು. ಜಿಲ್ಲಾಧಿಕಾರಿ ಸತ್ಯಭಾಮ ಅವರು ಸ್ಥಳಕ್ಕೆ ಆಗಮಿಸಿದ ನಂತರ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಯಿತು.