144 ವರ್ಷಗಳಿಗೊಮ್ಮೆ ಬರುವ ಹಿಂದೂ ಧಾರ್ಮಿಕ ಉತ್ಸವ 45 ದಿನ ಇಡೀ ಜಗತ್ತೇ ನಿಬ್ಬೆರಗಾಗುವ ರೀತಿಯಲ್ಲಿ ಉತ್ತರ ಪ್ರದೇಶದ ಪ್ರಯಾಗ್ ರಾಜ್‌ನಲ್ಲಿ ನಡೆದ ಮಹಾಕುಂಭ ಮೇಳಕ್ಕೆ ಬುಧವಾರ ಮಹಾಶಿವರಾತ್ರಿಯಂದು ವಿದ್ಯುಕ್ತ ತೆರೆ ಬಿದ್ದಿದೆ. ಜಗತ್ತಿನ ಅತಿದೊಡ್ಡ ಧಾರ್ಮಿಕ ಉತ್ಸವದಲ್ಲಿ 65 ಕೋಟಿಗೂ ಹೆಚ್ಚು ಭಕ್ತರು ಪುಣ್ಯ ಸ್ನಾನ ಮಾಡಿ ವಿಶ್ವ ದಾಖಲೆ ಬರೆದಿದ್ದಾರೆ.
ಮಹಾ ಶಿವರಾತ್ರಿಯ ಹಿನ್ನೆಲೆಯಲ್ಲಿ ನಡೆದ ಕೊನೆಯ ಅಮೃತಸ್ನಾನದಲ್ಲಿ ಒಂದು ಕೋಟಿಗೂ ಅಧಿಕ ಜನರು ಭಾಗಿಯಾಗಿ ತ್ರಿವೇಣಿ ಸಂಗಮದಲ್ಲಿ ಮಿಂದೆದ್ದು ಪುನೀತರಾದರು. ಎಲ್ಲೆಡೆ ಹರ್ ಹರ್ ಮಹಾದೇವ್ ಎಂಬ ಕೂಗು ಮಾರ್ದನಿಸಿತು.
ರಾತ್ರಿಯಿಂದಲೇ ತ್ರಿವೇಣಿ ಸಂಗಮದಲ್ಲಿ ಬೀಡುಬಿಟ್ಟಿದ್ದ ಕೋಟ್ಯಂತರ ಭಕ್ತರು ಇಂದು ಬ್ರಾಹ್ಮೀ ಮುಹೂರ್ತದಲ್ಲಿ ಪುಣ್ಯಸ್ನಾನ ಮಾಡಿದರು. ಬೆಳಗ್ಗೆ ಎಂಟು ಗಂಟೆಗೆ ಸುಮಾರು 40 ಲಕ್ಷ ಭಕ್ತರು ಅಮೃತ ಸ್ನಾನ ಮಾಡಿದರು. ಸಂಜೆ ಹೊತ್ತಿಗೆಲ್ಲಾ ಈ ಸಂಖ್ಯೆ ಕೋಟಿ ದಾಟಿತು.
ಅಮೃತಸ್ನಾನ ಮಾಡಲು ಬಂದಿದ್ದ ಭಕ್ತರ ಮೇಲೆ ಹೆಲಿಕಾಪ್ಟರ್ ಮೂಲಕ ಪುಷ್ಪವೃಷ್ಟಿ ಸುರಿಸಲಾಯ್ತು. ಮುಂಜಾಗ್ರತಾ ಕ್ರಮಗಿ ಸಾಕಷ್ಟು ಕ್ರಮಗಳನ್ನು ಯುಪಿ ಸರ್ಕಾರ ತೆಗೆದುಕೊಂಡಿತ್ತು. ಸಿಎಂ ಯೋಗಿ ಆದಿತ್ಯನಾಥ್ ಗೋರಖ್‌ಪುರದ ವಾರ್ ರೂಂನಲ್ಲಿ ಕುಳಿತು ಇಡೀ ದಿನ ಮಹಾಕುಂಭಮೇಳವನ್ನು ವೀಕ್ಷಿಸುತ್ತಿದ್ದರು.
ಮಹಾಕುಂಭಮೇಳದ ವಿಶೇಷತೆ
– ಜನವರಿ 13 ರಿಂದ ಆರಂಭಗೊಂಡ ಕುಂಭಮೇಳದಲ್ಲಿ 65 ಕೋಟಿಗೂ ಅಧಿಕ ಭಕ್ತರಿಂದ ಪುಣ್ಯಸ್ನಾನ
– ಜನವರಿ 19 ರ ಮೌನಿ ಅಮಾವಾಸ್ಯೆಯಂದು ಒಂದೇ ದಿನ 10 ಕೋಟಿಗೂ ಹೆಚ್ಚ ಜನರಿಂದ ಎರಡನೇ ಅಮೃತ ಸ್ನಾನ
– 183 ದೇಶಗಳ ಪ್ರತಿನಿಧಿಗಳು, ಲಕ್ಷಾಂತರ ಕೈದಿಗಳಿಂದಲೂ ಅಮೃತಸ್ನಾನ
– ಮಹಾಕುಂಭಕ್ಕೆ ಕೇಂದ್ರ ಮತ್ತು ಉತ್ತರ ಪ್ರದೇಶ ಸರ್ಕಾರದಿಂದ ಒಟ್ಟು 7,500 ಕೋಟಿ ರೂ. ವೆಚ್ಚ. 3 ಲಕ್ಷ ಕೋಟಿ ರೂ. ಆದಾಯ
– ಸ್ಥಳೀಯ ವ್ಯಾಪಾರಸ್ಥರಿಗೆ ಆರ್ಥಿಕವಾಗಿ ಲಾಭ, ದೊಡ್ಡ ದೊಡ್ಡ ಉದ್ಯಮಿಗಳಿಗೂ ಲಾಭ



