 
                
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಮೂಡಿಗೆರೆ ತಾಲ್ಲೂಕು ಸಮಿತಿ ವತಿಯಿಂದ ಪ್ರಾರಂಭಿಸಿರುವ ತಿಂಗಳ ಅತಿಥಿ ಚರ್ಚೆ ಮತ್ತು ಮಾಹಿತಿ ಕಾರ್ಯಕ್ರಮದ ಅಂಗವಾಗಿ ಮೂಡಿಗೆರೆ ತಹಸೀಲ್ದಾರ್ ರಾಜಶೇಖರ ಮೂರ್ತಿಯವರೊಂದಿಗೆ ಮುಖಾಮುಖಿ ಚರ್ಚೆ ನಡೆಸಲಾಯಿತು.
ಮೂಡಿಗೆರೆ ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಹಾಗೂ ಮಲೆನಾಡು ಮಿಂಚು ಪತ್ರಿಕೆಯ ಸಂಪಾದಕ ಪ್ರಸನ್ನ ಕುಮಾರ್ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರತಿ ತಿಂಗಳು ತಾಲ್ಲೂಕಿನ ಹಿರಿಯ ಅಧಿಕಾರಿಗಳು, ಜನಪ್ರತಿನಿಧಿಗಳೊಂದಿಗೆ ಸಂವಾದ ಕಾರ್ಯಕ್ರಮ ಏರ್ಪಡಿಸುವುದಾಗಿ ತಿಳಿಸಿದರು.
ಮೂಡಿಗೆರೆ ತಹಸೀಲ್ದಾರ್ ಅವರು ವಿವಿಧ ಸಂಘಸಂಸ್ಥೆಗಳ ಪ್ರತಿನಿಧಿಗಳು ಮತ್ತು ಪತ್ರಕರ್ತರಿಂದ ಬಂದಂತಹ ಪ್ರಶ್ನೆಗಳಿಗೆ ಉತ್ತರಿಸಿದರು. ಪ್ರಮುಖವಾಗಿ ತಾಲ್ಲೂಕಿನಲ್ಲಿ ನಿವೇಶನ ರಹಿತರಿಗೆ ನಿವೇಶನ ನೀಡಲು ಇರುವ ತೊಡಕುಗಳು, ಅರ್ಹ ಫಲಾನುಭವಿಗಳಿಗೆ ಭೂ ಮಂಜೂರಾತಿ ಮಾಡುವ ಬಗ್ಗೆ, ಮಾಜಿ ಸೈನಿಕರಿಗೆ ಭೂಮಿ ನೀಡುವ ಬಗ್ಗೆ, ತಾಲ್ಲೂಕು ಕಛೇರಿ ಆಡಳಿತ ವ್ಯವಸ್ಥೆ ಹಾಗೂ ಶೌಚಾಲಯದ ಕೊರತೆಯ ಬಗ್ಗೆ, ಮೂಡಿಗೆರೆ ಪಟ್ಟಣದ ಟ್ರಾಫಿಕ್ ಸಮಸ್ಯೆ, ಅರಣ್ಯ ಮತ್ತು ಕಂದಾಯ ಭೂಮಿಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ, ರೈತರ ಜಮೀನಿಗೆ ತೆರಳಲು ದಾರಿ ಸಮಸ್ಯೆ ಬಗ್ಗೆ, ಕಾಡು ಪ್ರಾಣಿಗಳ ಹಾವಳಿ ಬಗ್ಗೆ, ಪತ್ರಕರ್ತರ ಸಂಘಕ್ಕೆ ನಿವೇಶನ ನೀಡುವ ಬಗ್ಗೆ, ಪಲ್ಪರ್ ನೀರನ್ನು ನದಿಮೂಲಗಳಿಗೆ ಬಿಡುತ್ತಿರುವ ಬಗ್ಗೆ..ಹೀಗೆ ತಾಲ್ಲೂಕಿಗೆ, ರೈತರಿಗೆ, ಸಾರ್ವಜನಿಕರಿಗೆ ಸಂಬಂಧಿಸಿದ ಹತ್ತು ಹಲವು ಪ್ರಶ್ನೆಗಳನ್ನು ಕೇಳಲಾಯಿತು.
ಪ್ರಶ್ನೆಗಳಿಗೆ ಉತ್ತರಿಸಿದ ತಹಸೀಲ್ದಾರ್ ರಾಜಶೇಖರಮೂರ್ತಿಯವರು ; ಬಗರ್ ಹುಕುಂ ಹೊಸ ನಿಯಮದ ಪ್ರಕಾರ ಪ್ಲಾಂಟೇಷನ್ ಬೆಳೆಗಳನ್ನು ಬೆಳೆದಿರುವ ಭೂಮಿಯನ್ನು ಮಂಜೂರು ಮಾಡಲು ಅವಕಾಶವಿಲ್ಲ. ಇದರಿಂದ ತಾಲ್ಲೂಕಿನಲ್ಲಿ ಶೇಕಡಾ 98 ರಷ್ಟು ಅರ್ಜಿಗಳು ತಿರಸ್ಕೃತವಾಗುತ್ತವೆ. ಇದರ ಬಗ್ಗೆ ಸರ್ಕಾರ ನಿಯಮ ಬದಲಾವಣೆ ಮಾಡಿದರೆ ಕಾಫಿ ಬೆಳೆದಿರುವ ಭೂಮಿಯನ್ನು ಮಂಜೂರು ಮಾಡಲು ಸಾಧ್ಯವಾಗುತ್ತದೆ.
ಫಾರಂ ನಂಬರ್ 94ಸಿ ಅಡಿಯಲ್ಲಿ ಸರ್ಕಾರಿ ಭೂಮಿಯಲ್ಲಿ ಮನೆಕಟ್ಟಿಕೊಂಡಿರುವವರಿಗೆ ನಿವೇಶನಕ್ಕೆ ಹಕ್ಕುಪತ್ರ ನೀಡಲು ಆದ್ಯತೆ ನೀಡಲಾಗುತ್ತಿದೆ. ಡೀಮ್ಡ್ ಫಾರೆಸ್ಟ್ ಸಮಸ್ಯೆಯಿಂದ ಅರಣ್ಯ ಇಲಾಖೆ ಅನುಮೋದನೆ ಸಿಗದೇ ಅನೇಕ ಕಡೆ ಸಮಸ್ಯೆಯಾಗಿದೆ. ನಿವೇಶನ ರಹಿತರಿಗೆ ನಿವೇಶನ ನೀಡಲು ಆದ್ಯತೆ ನೀಡಲಾಗುತ್ತಿದೆ. ಪಟ್ಟಣದ ಸುತ್ತಮುತ್ತಲಿನ ಪ್ರದೇಶದಲ್ಲಿ ಒತ್ತುವರಿಯಾಗಿರುವ ಭೂಮಿಯನ್ನು ಗುರುತಿಸಿ ಸರ್ಕಾರದ ವಶಕ್ಕೆ ಪಡೆದು ನಿವೇಶನ ರಹಿತರಿಗೆ ಹಂಚಿಕೆ ಮಾಡಲು ಕ್ರಮ ವಹಿಸಲಾಗುತ್ತದೆ ಎಂದರು. ಬಡವರಿಗೆ, ಪರಿಶಿಷ್ಟ ಜಾತಿ ಮತ್ತು ಪಂಗಡದ ಭೂರಹಿತರಿಗೆ ನಿವೇಶನ ಮತ್ತು ಭೂಮಿ ಮಂಜೂರಿಗೆ ಆದ್ಯತೆಯ ಮೇಲೆ ಕೆಲಸ ಮಾಡುವುದಾಗಿ ತಿಳಿಸಿದರು.
ಜಮೀನಿಗೆ ತೆರಳಲು ನಕಾಶೆ ಕಂಡ ರಸ್ತೆಗೆ ಯಾರೂ ಅಡ್ಡಿಪಡಿಸುವಂತಿಲ್ಲ. ಹಾಗೆ ಅಡ್ಡಿಪಡಿಸಿದರೆ ತಮ್ಮ ಗಮನಕ್ಕೆ ತಂದೆ ಅಂತಹ ರಸ್ತೆಯನ್ನು ಬಿಡಿಸಿಕೊಡಲು ಕ್ರಮ ವಹಿಸುವುದಾಗಿ ತಿಳಿಸಿದರು. ಮೂಡಿಗೆರೆ ತಾಲ್ಲೂಕು ಕಛೇರಿ ಕಟ್ಟಡ ದುರಸ್ಥಿಗೆ ಕ್ರಮ ವಹಿಸಲಾಗುತ್ತಿದೆ. ಕಛೇರಿ ಒಳಗಿನ ಶೌಚಾಲಯವನ್ನು ಬಳಕೆಗೆ ಯೋಗ್ಯವಾಗುವಂತೆ ಮಾಡಲಾಗಿದೆ. ಕಛೇರಿ ಆವರಣದಲ್ಲಿರುವ ಶೌಚಾಲಯವನ್ನು ದುರಸ್ಥಿ ಮಾಡಿ ಸಾರ್ವಜನಿಕ ಉಪಯೋಗಕ್ಕೆ ಬಳಕೆಯಾಗುವಂತೆ ಕ್ರಮವಹಿಸುವುದಾಗಿ ತಿಳಿಸಿದರು. ಕಛೇರಿಯಲ್ಲಿ ಸಾರ್ವಜನಿಕ ಕೆಲಸಗಳು ವಿಳಂಬವಾಗದಂತೆ ಕೆಲಸ ಮಾಡಲು ನೌಕರರಿಗೆ ಸೂಕ್ತ ಮಾರ್ಗದರ್ಶನ ನೀಡಲಾಗುತ್ತಿದೆ. ಸಾರ್ವಜನಿಕರು ತಮ್ಮ ಯಾವುದೇ ಸಮಸ್ಯೆಗಳಿದ್ದರೂ ಮುಕ್ತವಾಗಿ ತಹಸೀಲ್ದಾರ್ ಗಮನಕ್ಕೆ ತರಬಹುದಾಗಿದೆ ಎಂದರು.
ಚರ್ಚಾ ಕಾರ್ಯಕ್ರಮದಲ್ಲಿ ರೈತಸಂಘದ ಮುಖಂಡ ಬಿ.ಸಿ. ದಯಾಕರ್, ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಿ.ಕೆ.ಲಕ್ಷ್ಮಣಗೌಡ, ಕೆಂಪೇಗೌಡ ಒಕ್ಕಲಿಗರ ಸಂಘದ ಅಧ್ಯಕ್ಷ ಬ್ರಿಜೇಶ್ ಕಡಿದಾಳು, ಜೇಸಿಐ ಅಧ್ಯಕ್ಷ ಪ್ರದೀಪ್ ಕುನ್ನಹಳ್ಳಿ, ಮಾಜಿ ಸೈನಿಕರ ಸಂಘದ ಅಧ್ಯಕ್ಷ ಎಂ.ಕೆ. ಚಂದ್ರೇಶ್, ಬಿಎಸ್ಪಿ ಮುಖಂಡ ಬಕ್ಕಿ ಮಂಜುನಾಥ್, ಪತ್ರಕರ್ತರ ಸಂಘದ ಕಾರ್ಯದರ್ಶಿ ಪ್ರಕಾಶ್ ಬಕ್ಕಿ, ಪತ್ರಕರ್ತರಾದ ಪ್ರಸನ್ನ ಗೌಡಹಳ್ಳಿ, ಅಮರನಾಥ್, ಗಣೇಶ್ ಮಗ್ಗಲಮಕ್ಕಿ, ಉಮಾಶಂಕರ್, ಕಿರಣ್ ಬೆಟ್ಟಗೆರೆ, ಮನ್ಸೂರ್, ವಸಂತ ಹಾರ್ಗೋಡು, ಪ್ರಸನ್ನ ತಳವಾರ ಮುಂತಾದವರು ಉಪಸ್ಥಿತರಿದ್ದರು.


 
 

 
                                                         
                                                         
                                                         
                                                         
                                                         
                                                         
                                                        