 
                
ಪ್ರಜಾಪಿತ ಬ್ರಹ್ಮಕುಮಾರೀಸ್ ಈಶ್ವರೀಯ ವಿಶ್ವವಿದ್ಯಾಲಯದ ಸ್ಥಳೀಯ ಸೇವಾ ಕೇಂದ್ರದ ಸುವರ್ಣ ಮಹೋತ್ಸವದ ಹಿನ್ನೆಲೆಯಲ್ಲಿ ಮಾರ್ಚ್ 1 ರಂದು ಚಿಕ್ಕಮಗಳೂರು ನಗರದಲ್ಲಿ ಪ್ರಥಮ ಬಾರಿಗೆ ಸ್ವಾಸ್ಥ್ಯ, ಸಾಮರಸ್ಯ ಹಾಗೂ ಸಂತೋಷ ಜೀವನದ ಜಾಗೃತಿ ಉಪನ್ಯಾಸ ಕಾರ್ಯಕ್ರಮ ಆಯೋಜಿಸಿದ್ದು ಸಾರ್ವಜನಿಕರು, ಆಧ್ಯಾತ್ಮಿಕ ಒಲವಿರುವವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಸಂಸ್ಥೆಯ ಜಿಲ್ಲಾ ಸಂಚಾಲಕಿ ಭಾಗ್ಯ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಈ ಬಗ್ಗೆ ಮಾಹಿತಿ ನೀಡಿದ ಅವರು, ನಗರದ ಜಿಲ್ಲಾ ಆಟದ ಮೈದಾನದಲ್ಲಿ ಬೆಳಗ್ಗೆ 9.30ಕ್ಕೆ ಆರಂಭವಾಗುವ ಆಧ್ಯಾತ್ಮಿಕ ಉಪನ್ಯಾಸ ಕಾರ್ಯಕ್ರಮವನ್ನು ಪ್ರೇರಣಾದಾಯಿ ಚಿಂತಕಿ, ಅಂತರಾಷ್ಟ್ರೀಯ ಆಧ್ಯಾತ್ಮಿಕ ಪ್ರೇರಣಯುಕ್ತ ಮಾರ್ಗದರ್ಶಕರೂ ಹಾಗೂ ರಾಷ್ಟ್ರಪತಿ ಅವರಿಂದ ನಾರಿಶಕ್ತಿ ಪ್ರಶಸ್ತಿ ಪುರಸ್ಕೃತರಾದ ಬ್ರಹ್ಮಕುಮಾರಿ ಶಿವಾನಿ ದೀದೀಜಿ ಅವರು ನಡೆಸಿಕೊಡಲಿದ್ದಾರೆ ಎಂದರು.
ದೀದೀಜಿ ಅವರು ಬ್ರಹ್ಮಕುಮಾರೀಸ್ ಸಂಸ್ಥೆಯ ರಾಯಭಾರಿಯೂ ಹೌದು. ಆಧ್ಯಾತ್ಮಿಕ ಶಕ್ತಿಯನ್ನು ಜಗತ್ತಿಗೆ ಪಸರಿಸುವಲ್ಲಿ ಮುಂಚೂಣಿಯಲ್ಲಿದ್ದಾರೆ. ಅವರ ಆಗಮನ ತ್ರಿವೇಣಿ ಸಂಗಮ ಎಂದರೆ ತಪ್ಪಾಗದು ಎಂದರು. ಶ್ರೀ ಶಿವಾನಿ ದೀದೀಜಿ ಅವರು ಬಾಲ್ಯದಿಂದ ಆಧ್ಯಾತ್ಮಿಕ ಒಲವು ಹೊಂದಿದವರೇನಲ್ಲ. ಅವರ ತಾಯಿ ಬ್ರಹ್ಮ ಕುಮಾರೀಸ್ ಸಂಸ್ಥೆಗೆ ತರಬೇತಿಗೆ ಹೋಗುತ್ತಿದ್ದಾಗ ದೀದೀಜಿಯೂ ಹೋಗುತ್ತಿದ್ದರು. ತದನಂತರ ಸಂಪೂರ್ಣ ತಮ್ಮ ಜೀವನವನ್ನೇ ಆಧ್ಯಾತ್ಮಿಕತೆಗೆ ತೊಡಗಿಸಿಕೊಂಡಿದ್ದಾರೆ. ಇಂದು ಎಷ್ಟೋ ಮಂದಿ ಬೆಳಗ್ಗೆ ಅವರ ಆಧ್ಯಾತ್ಮಿಕ ಪ್ರವಚನವನ್ನು ಯೂಟ್ಯೂಬ್‌ನಲ್ಲೇ ಕೇಳಿಯೇ ದೈನಂದಿನ ದಿನಚರಿ ಮುಂದುವರಿಸುವರಿದ್ದಾರೆ.
ಸಮಸ್ಯೆಗಳಿಗೆ ಸರಳ ಸೂತ್ರ ಅವರು ಹೇಳಿಕೊಡುತ್ತಾರೆ. ಎಲ್ಲ ವಿಷಯಗಳಲ್ಲೂ ಸಮಗ್ರ ಪರಿಣತಿ ಹೊಂದಿದ್ದು, ಆಧ್ಯಾತ್ಮಿಕ ಶಕ್ತಿ ತುಂಬಲಿದ್ದಾರೆ. ಅವರು ನಮ್ಮ ಜಿಲ್ಲೆಗೆ ಬಂದಿರುವುದೇ ನಮ್ಮ ಭಾಗ್ಯ. 5 ಸಾವಿರಕ್ಕೂ ಹೆಚ್ಚು ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ, ಈಗಾಗಲೇ ಹಲವರು ನೋಂದಣಿ ಮಾಡಿಕೊಂಡಿದ್ದಾರೆ.
ಅಂದು ಕೆಲವು ಮಠಾಧೀಶರು ಆಗಮಿಸಲಿದ್ದಾರೆ. ಬೆಳಗ್ಗೆ ಸರಿಯಾಗಿ 9.30 ಕ್ಕೆ ಉಪನ್ಯಾಸ ಆರಂಭವಾಗಲಿದೆ. ಅದಕ್ಕೂ ಮುನ್ನ ಸಂಸ್ಥೆಯ ವಿದ್ಯಾರ್ಥಿಗಳಿಗೆ ರಾಜಯೋಗ ಕಾರ್ಯಕ್ರಮ ಇರುತ್ತದೆ. ಮಾ.2, 3 ಮತ್ತು4 ರಂದು ಬೆಳಗ್ಗೆ ಮತ್ತು ಸಂಜೆ ಬ್ರಹ್ಮಾಕುಮಾರಿ ವೀಣಾ ಅಕ್ಕನವರಿಂದ ಮೂರುದಿನ ಉಚಿತ ರಾಜಯೋಗ ಶಿಬಿರ ಬಸವನಹಳ್ಳಿ ಜ್ಞಾನ ಪ್ರಕಾಶ ಭವನದಲ್ಲಿ ನಡೆಯಲಿದ್ದು, ಅದರ ಪ್ರಯೋಜನವನ್ನೂ ಪಡೆಯಬಹುದಾಗಿದೆ ಎಂದರು.
ಸಂಸ್ಥೆಯ ಕೊಪ್ಪ ಸಂಚಾಲರಾದ ಪುಷ್ಪ, ನಂದಕುಮಾರ್ ಗೋಷ್ಠಿಯಲ್ಲಿದ್ದರು.


 
 

 
                                                         
                                                         
                                                         
                                                         
                                                         
                                                        