 
                
2021ರಲ್ಲಿ ವಿಧಾನ ಪರಿಷತ್‍ಗೆ ನಡೆದಿದ್ದ ಚುನಾವಣೆಯ ಮರು ಮತ ಎಣಿಕೆಯನ್ನು ಕೋರ್ಟ್ ಆದೇಶದಂತೆ ಇಂದು ಫೆಬ್ರವರಿ 28ರಂದು ನಡೆಯಲಿದೆ. ಮರು ಮತ ಎಣಿಕೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ತಿಳಿಸಿದ್ದಾರೆ.
ಈಗಾಗಲೇ ಅಭ್ಯರ್ಥಿಗಳಿಗೆ ಜಿಲ್ಲಾಡಳಿತ ನೋಟಿಸ್ ನೀಡಿದೆ. ಮರು ಮತ ಎಣಿಕೆ ಕಾರ್ಯಕ್ಕೆ ಚುನಾವಣಾ ಆಯೋಗದಿಂದ ವೀಕ್ಷಕರ ನೇಮಕ ಮಾಡಲಾಗಿದೆ. ಮರು ಮತ ಎಣಿಕೆಯ ವೀಕ್ಷಕರಾಗಿ ಉಜ್ವಲ್ ಕುಮಾರ್ ಅವರನ್ನು ನೇಮಿಸಲಾಗಿದೆ ಎಂದು ತಿಳಿಸಿದ್ದಾರೆ.
ಮರು ಮತ ಎಣಿಕೆ ಕಾರ್ಯದ ಸಂಪೂರ್ಣ ವಿಡಿಯೋ ಚಿತ್ರೀಕರಣ ಮಾಡಲಾಗುತ್ತದೆ. ಮತ ಎಣಿಕೆಯ ಫಲಿತಾಂಶವನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಲಾಗುತ್ತದೆ. ಅಭ್ಯರ್ಥಿಗಳು ಹಾಗೂ ಅಭ್ಯರ್ಥಿಗಳ ಪರ ಓರ್ವ ಏಜೆಂಟ್‍ಗೆ ಮಾತ್ರ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.
2021ರಲ್ಲಿ ನಡೆದಿದ್ದ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿಯಿಂದ ಹಾಲಿ ವಿಧಾನಪರಿಷತ್ ಉಪಸಭಾಪತಿ ಎಂ.ಕೆ. ಪ್ರಾಣೇಶ್, ಕಾಂಗ್ರೆಸ್ಸಿನಿಂದ ಗಾಯತ್ರಿ ಶಾಂತೇಗೌಡ ಸ್ಪರ್ಧಿಸಿದ್ದರು. 6 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಸೋಲು ಕಂಡಿದ್ದರು. ನಾಮನಿರ್ದೇಶಿತ 12 ಮತಗಳನ್ನು ಗಣನೆಗೆ ತೆಗೆದುಕೊಳ್ಳಬಾರದು ಎಂದು ಪರಾಜಿತ ಅಭ್ಯರ್ಥಿ ಹೈಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ರಾಜ್ಯ ಉಚ್ಚ ನ್ಯಾಯಾಲಯ ನಾಮನಿರ್ದೇಶಿತರ ಮತಗಳನ್ನ ಬಿಟ್ಟು ಎಣಿಕೆ ಮಾಡುವಂತೆ ಸೂಚಿಸಿತ್ತು. ಈ ತೀರ್ಪನ್ನು ಸುಪ್ರೀಂ ಕೋರ್ಟ್ ಸಹ ಎತ್ತಿಹಿಡಿದಿದೆ.
ನಗರದ ಐ.ಡಿ.ಎಸ್.ಜಿ. ಕಾಲೇಜಿನಲ್ಲಿ ಶುಕ್ರವಾರ ಮರು ಮತ ಎಣಿಕೆ ಕಾರ್ಯ ನಡೆಯಲಿದೆ.


 
 

 
                                                         
                                                         
                                                         
                                                         
                                                         
                                                        