
ನ್ಯೂಜಿಲೆಂಡ್ ವಿರುದ್ಧ ನಡೆದ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ 4 ವಿಕೆಟ್‌ಗಳ ಗೆಲುವು ಸಾಧಿಸುವ ಮೂಲಕ ಭಾರತ 3ನೇ ಬಾರಿಗೆ ಚಾಂಪಿಯನ್ಸ್ ಟ್ರೋಫಿ ಕಿರೀಟ ಮುಡಿಗೇರಿಸಿಕೊಂಡಿದೆ. 2024ರಲ್ಲಿ ರೋಹಿತ್ ಶರ್ಮಾ ನಾಯಕತ್ವದಲ್ಲಿ ಟಿ20 ವಿಶ್ವಕಪ್ ಗೆದ್ದಿದ್ದ ಭಾರತಕ್ಕಿದು ಸತತ 2ನೇ ಐಸಿಸಿ ಟ್ರೋಫಿ ಆಗಿರುವುದು ವಿಶೇಷ.
ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ನ್ಯೂಜಿಲೆಂಡ್ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 251 ರನ್ ಗಳಿಸಿತ್ತು. ಸ್ಪರ್ಧಾತ್ಮಕ ಮೊತ್ತದ ಗುರಿ ಬೆನ್ನಟ್ಟಿದ ಭಾರತ 49 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 254 ರನ್ ಗಳಿಸಿ ಗೆಲುವು ಸಾಧಿಸಿತು.
ಚೇಸಿಂಗ್ ಆರಂಭಿಸಿದ ಟೀಂ ಇಂಡಿಯಾ ಪರ ನಾಯಕ ರೋಹಿತ್ ಶರ್ಮಾ, ಶುಭಮನ್ ಗಿಲ್ ಸ್ಫೋಟಕ ಇನ್ನಿಂಗ್ಸ್ ಕಟ್ಟುವಲ್ಲಿ ಯಶಸ್ವಿಯಾದರು. 112 ಎಸೆತಗಳಲ್ಲಿ ಈ ಜೋಡಿ 105 ರನ್‌ಗಳ ಜೊತೆಯಾಟ ನೀಡಿತು. ಈ ಮೂಲಕ ಚಾಂಪಿಯನ್ಸ್ ಟ್ರೋಫಿ ಇತಿಹಾಸದಲ್ಲೇ ಫೈನಲ್ ಪಂದ್ಯದಲ್ಲಿ ಶತಕದ ಜೊತೆಯಾಟ ಎಂಬ ದಾಖಲೆಗೂ ರೋಹಿತ್ ಗಿಲ್ ಪಾತ್ರರಾದರು. ಗಿಲ್ 50 ಎಸೆತಗಳಲ್ಲಿ 31 ರನ್ ಗಳಿಸಿ ಔಟಾದರು. ಈ ಬೆನ್ನಲ್ಲೇ ವಿರಾಟ್ ಕೊಹ್ಲಿ ಕೇವಲ 1 ರನ್ ಗಳಿಸಿ ಎಲ್‌ಬಿಡಬ್ಲ್ಯೂಗೆ ತುತ್ತಾದರು. ಆ ಬಳಿಕವೂ ಕಿವೀಸ್ ಬೌಲರ್‌ಗಳನ್ನು ಕಾಡಿದ ರೋಹಿತ್ 76 ರನ್ (83 ಎಸೆತ, 3 ಸಿಕ್ಸರ್, 7 ಬೌಂಡರಿ) ಗಳಿಸಿ ಪೆವಿಲಿಯನ್‌ಗೆ ಮರಳಿದರು.
26.1 ಓವರ್‌ಗಳಲ್ಲಿ 122 ರನ್‌ಗಳಿಗೆ ಭಾರತ 3 ವಿಕೆಟ್ ಕಳೆದುಕೊಂಡಿದ್ದಾಗ ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಇನ್ನಿಂಗ್ಸ್ ಕಟ್ಟುವಲ್ಲಿ ಶ್ರೇಯಸ್ ಅಯ್ಯರ್ ಯಶಸ್ವಿಯಾದರು. 62 ಎಸೆತಗಳಲ್ಲಿ 48 ರನ್ (2 ಸಿಕ್ಸರ್, 2 ಬೌಂಡರಿ) ಬಾರಿಸಿದ್ರು. ಇದೇ ವೇಳೆ ಶ್ರೇಯಸ್‌ಗೆ ಜೊತೆಯಾಗಿ ಎಚ್ಚರಿಕೆಯ ಆಟವಾಡಿದ ಅಕ್ಷರ್ ಪಟೇಲ್ 40 ಎಸೆತಗಳಲ್ಲಿ 29 ರನ್ (1 ಸಿಕ್ಸರ್, 1 ಬೌಂಡರಿ) ಕೊಡುಗೆ ನೀಡಿದರು.
ಕನ್ನಡಿಗ ಕೆ.ಎಲ್ ರಾಹುಲ್ ಸೆಮಿಫೈನಲ್‌ನಂತೆ ಫೈನಲ್ ಪಂದ್ಯದಲ್ಲೂ ಎಚ್ಚರಿಕೆಯ ಆಟವಾಡಿದರು. 33 ಎಸೆತಗಳಲ್ಲಿ 1 ಸಿಕ್ಸರ್, 1 ಬೌಂಡರಿ ಸಹಿತ 34 ರನ್ ಗಳಿಸಿ ಟೀಂ ಇಂಡಿಯಾ ಗೆಲುವಿಗೆ ನೆರವಾದರು. ಇದರೊಂದಿಗೆ ಪಾಂಡ್ಯ ಜವಾಬ್ದಾರಿಯುತ 18 ರನ್, ರವೀಂದ್ರ ಜಡೇಜಾ 3 ರನ್‌ಗಳ ಕೊಡುಗೆ ನೀಡಿದರು. ಹೆಚ್ಚುವರಿಯಾಗಿ 8 ರನ್ ತಂಡಕ್ಕೆ ಸೇರ್ಪಡೆಯಾಯ್ತು.
ಇದಕ್ಕೂ ಮುನ್ನ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಮಿಚೆಲ್ ಸ್ಯಾಂಟ್ನರ್ ನಾಯಕತ್ವದ ಕಿವೀಸ್, ಫೀಲ್ಡಿಂಗ್ ಮಾಡುವ ಅವಕಾಶವನ್ನು ಭಾರತಕ್ಕೆ ಬಿಟ್ಟುಕೊಟ್ಟಿತು. ಆರಂಭಿಕರಾಗಿ ಕಣಕ್ಕಿಳಿದ ರಚಿನ್ ರವೀಂದ್ರ ಹಾಗೂ ವಿಲ್ ಯಂಗ್ ಜೋಡಿ ಸ್ಪೋಟಕ ಇನ್ನಿಂಗ್ಸ್ ಕಟ್ಟುವ ಪ್ರಯತ್ನಕ್ಕೆ ಮುಂದಾದರು. ಅಂತೆಯೇ ಮೊದಲ ವಿಕೆಟ್‌ಗೆ 47 ಎಸೆತಗಳಲ್ಲಿ 57 ರನ್‌ಗಳ ಜೊತೆಯಾಟ ನೀಡಿತ್ತು. ಆದ್ರೆ ವಿಲ್ ಯಂಗ್ ವಿಕೆಟ್ ಬೀಳುತ್ತಿದ್ದಂತೆ ಅಗ್ರ ಕ್ರಮಾಂಕದ ಆಟಗಾರರು ಪೆವಿಲಿಯನ್ ಪರೇಡ್ ನಡೆಸಿದರು. ರಚಿನ್ ರವೀಂದ್ರ, ಕೇನ್ ವಿಲಿಯಮ್ಸನ್ ಬ್ಯಾಕ್ ಟು ಬ್ಯಾಕ್ ವಿಕೆಟ್ ಒಪ್ಪಿಸಿದ್ರು.
ರೋಹಿತ್ ಶರ್ಮಾ ಪಂದ್ಯಶ್ರೇಷ್ಠ ಪ್ರಶಸ್ತಿ ಗಳಿಸಿದರೆ, ಸರಣಿಯಲ್ಲಿ 2 ಶತಕಗಳ ಸಹಿತ ಅತಿಹೆಚ್ಚು ರನ್ ಗಳಿಸಿದ ಮತ್ತು 3 ವಿಕೆಟ್ ಗಳಿಸಿ ಅಲ್ರೌಂಡ್ ಆಟ ಪ್ರದರ್ಶಿಸಿದ ಬೆಂಗಳೂರು ಮೂಲದ ನ್ಯೂಜಿಲೆಂಡ್ ಆಟಗಾರ ರಚಿನ್ ರವೀಂದ್ರ ಸರಣಿಶ್ರೇಷ್ಠ ಪ್ರಶಸ್ತಿ ಗಳಿಸಿದರು.
ಇದುವರೆಗೆ ಚಾಂಪಿಯನ್ಸ್ ಟ್ರೋಪಿ ವಿಜೇತರ ವಿವರ
1998-99ರ ಚೊಚ್ಚಲ ಆವೃತ್ತಿಯಲ್ಲೇ ದಕ್ಷಿಣ ಆಫ್ರಿಕಾ ಟ್ರೋಫಿ ಮುಡಿಗೇರಿಸಿಕೊಂಡಿತ್ತು. 2000-01ರ ಆವೃತ್ತಿಯಲ್ಲಿ ನ್ಯೂಜಿಲೆಂಡ್ ಟ್ರೋಫಿ ಗೆದ್ದುಕೊಂಡಿತ್ತು. ಆದ್ರೆ 2002-03ರ ಆವೃತ್ತಿಯಲ್ಲಿ 2 ದಿನ ಫೈನಲ್ ನಡೆದರೂ ಮಳೆಗೆ ಪಂದ್ಯ ಬಲಿಯಾಯ್ತು. ಆದ್ದರಿಂದ ಭಾರತ ಮತ್ತು ಶ್ರೀಲಂಕಾವನ್ನ ಜಂಟಿಯಾಗಿ ಚಾಂಪಿಯನ್ಸ್ ಎಂದು ಘೋಷಿಸಲಾಯಿತು. ಇನ್ನೂ 2004ರಲ್ಲಿ ವೆಸ್ಟ್ ಇಂಡೀಸ್, 2006, 2009 ರಲ್ಲಿ ಆಸ್ಟ್ರೇಲಿಯಾ, 2013ರಲ್ಲಿ ಭಾರತ, 2017ರಲ್ಲಿ ಪಾಕಿಸ್ತಾನ ಚಾಂಪಿಯನ್ ಆಗಿತ್ತು. 2000, 2017ರಲ್ಲಿ ಭಾರತ ಫೈನಲ್ ತಲುಪಿದ್ರೂ ಟ್ರೋಫಿ ಗೆಲ್ಲುವ ಅವಕಾಶ ಕಳೆದುಕೊಂಡಿತ್ತು. 2000 ಇಸವಿಯಲ್ಲಿ ಕಿವೀಸ್ ವಿರುದ್ಧ, 2017ರಲ್ಲಿ ಪಾಕಿಸ್ತಾನದ ವಿರುದ್ಧ ಫೈನಲ್‌ನಲ್ಲಿ ಸೋತು ನಿರಾಸೆ ಅನುಭವಿಸಿತ್ತು. ಸದ್ಯ 25 ವರ್ಷಗಳ ಬಳಿಕ ಚಾಂಪಿಯನ್ಸ್ ಟ್ರೋಫಿಯಲ್ಲಿ ಕಿವೀಸ್ ವಿರುದ್ಧ ಗೆದ್ದು ಭಾರತ ಸೇಡು ತೀರಿಸಿಕೊಂಡಿದೆ.