
ಖಾಸಗಿ ಎಸ್ಟೇಟ್ ವೊಂದರ ಆವರಣದಲ್ಲಿ ವಿದ್ಯುತ್ ಸ್ಪರ್ಶಿಸಿ ಕಾಡಾನೆಯೊಂದು ಮೃತಪಟ್ಟಿರುವ ಘಟನೆ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನಲ್ಲಿ ನಡೆದಿದೆ. ಅಕ್ರಮವಾಗಿ ಸೌರ ಬೇಲಿಗೆ ವಿದ್ಯುತ್ ಲೈನ್ ಸಂಪರ್ಕವೇ ಈ ಘಟನೆಗೆ ಕಾರಣ ಎನ್ನಲಾಗಿದೆ. ಈ ಬಗ್ಗೆ ಅರಣ್ಯಾಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಸಿದ್ದಾಪುರ ಸಮೀಪದ ನೆಲ್ಲಿಹುದಿಕೇರಿಯ ಅತಿಮಂಗಲ ಪ್ರದೇಶದ ಖಾಸಗಿ ಎಸ್ಟೇಟ್‌ನಲ್ಲಿ ಸುಮಾರು 43 ವರ್ಷ ಪ್ರಾಯದ ಗಂಡು ಕಾಡಾನೆ ಸತ್ತು ಬಿದ್ದಿರುವುದು ಪತ್ತೆಯಾಗಿದೆ. ಅರಣ್ಯಾಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ಸೌರ ಬೇಲಿಗೆ ಅಕ್ರಮವಾಗಿ ವಿದ್ಯುತ್ ಲೈನ್ ಸಂಪರ್ಕ ಕಲ್ಪಿಸಿದ್ದರಿಂದ ಆನೆಗೆ ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿದೆ ಎಂದು ತಿಳಿದುಬಂದಿದೆ.
ಈ ಹಿನ್ನಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ತೋಟದ ಉಸ್ತುವಾರಿ ಜಾನ್ ವಿರುದ್ಧ ನಿರ್ಲಕ್ಷ್ಯದ ಆರೋಪದಡಿ ಪ್ರಕರಣ ದಾಖಲಿಸಿದ್ದಾರೆ. ಮಡಿಕೇರಿ ವಿಭಾಗದ ಡಿಸಿಎಫ್ ಭಾಸ್ಕರ್, ಎಸಿಎಫ್ ಗೋಪಾಲ್ ಮತ್ತಿತರರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಡಾ.ಶಿಂಧೆ ಆನೆಯ ಮರಣೋತ್ತರ ಪರೀಕ್ಷೆ ನಡೆಸಿ ಅರಣ್ಯದಂಚಿನಲ್ಲೇ ಮೃತದೇಹವನ್ನು ಹೂಳಲಾಯಿತು.
ಈ ಮಧ್ಯೆ ಆವರಣದಾದ್ಯಂತ ಸುತ್ತಾಡುತ್ತಿದ್ದ ಕಾಡಾನೆಗಳ ಹಿಂಡನ್ನು ಕ್ಷಿಪ್ರ ಪ್ರತಿಕ್ರಿಯೆ ತಂಡ (ಆರ್‌ಆರ್‌ಟಿ) ಕಾರ್ಯಾಚರಣೆ ನಡೆಸಿ ಅರಣ್ಯಗೆ ಓಡಿಸಿತು. ಈ ಪ್ರದೇಶದಲ್ಲಿ ಕಾಡಾನೆಗಳ ಓಡಾಟವು ಹೆಚ್ಚಾಗಿದೆ ಎಂದು ಎಸ್ಟೇಟ್‌ಗಳಲ್ಲಿ ಕೆಲಸ ಮಾಡಲು ಕಾರ್ಮಿಕರು ಹಿಂದೇಟು ಹಾಕುತ್ತಿದ್ದಾರೆ.
ಹೆಚ್ಚುತ್ತಿರುವ ಸಂಘರ್ಷದಿಂದ ಮಾನವನರು ಮತ್ತು ಆನೆಗಳು ಸಾವನ್ನಪ್ಪುತ್ತಿವೆ. ಈ ಪ್ರದೇಶದಲ್ಲಿ ವಿದ್ಯುತ್ ಆಘಾತ ಮತ್ತು ಮಾನವ ಹಸ್ತಕ್ಷೇಪದಿಂದಾಗಿ ನಾಲ್ಕು ಆನೆಗಳು ಮೃತಪಟ್ಟಿವೆ ಎಂದು ಗ್ರಾಮಸ್ಥರು ತಿಳಿಸಿದರು.