
ಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದಲ್ಲಿ 3 ದಿನಗಳ ಕಾಲ ಉರುಸ್ ನಡೆಯುವುದರಿಂದ ಚಿಕ್ಕಮಗಳೂರು ಜಿಲ್ಲಾಡಳಿತ ಪ್ರವಾಸಿಗರಿಗೆ ಸಂಪೂರ್ಣ ನಿರ್ಬಂಧ ಹೇರಿದೆ.
ಉರುಸ್ ಅಂಗವಾಗಿ ಜಿಲ್ಲಾಡಳಿತ 3 ದಿನಗಳ ಕಾಲ ಪಶ್ಚಿಮ ಘಟ್ಟಗಳ ತಪ್ಪಲು ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ದತ್ತಪೀಠ, ಮಾಣಿಕ್ಯಾಧಾರ, ಗಾಳಿಕೆರೆ ಸೇರಿ ಪ್ರವಾಸಿ ತಾಣಗಳಿಗೆ ನಿರ್ಬಂಧ ಹೇರಿದೆ. ನಾಳೆ ಮಾರ್ಚ್ 15ರಿಂದ 17ರವರೆಗೆ 3 ದಿನಗಳ ಕಾಲ ಜಿಲ್ಲಾಡಳಿತ ಚಿಕ್ಕಮಗಳೂರು ತಾಲೂಕಿನ ಮುಳ್ಳಯ್ಯನಗಿರಿ-ದತ್ತಪೀಠ ಭಾಗಕ್ಕೆ ಪ್ರವಾಸಿಗರಿಗೆ ಸಂಪೂರ್ಣ ನಿಷೇಧ ಹೇರಿದೆ.
ರಾಜ್ಯದ ನಾನಾ ಭಾಗಗಳಿಂದ ಆಗಮಿಸುವ ಸಾವಿರಾರು ಸಂಖ್ಯೆಯ ಮುಸ್ಲಿಂಮರು ಉರುಸ್ ಆಚರಣೆಯಲ್ಲಿ ಪಾಲ್ಗೊಳ್ಳುವುದರಿಂದ ಯಾವುದೇ ಅಹಿತಕರ ಘಟನೆ ನಡೆಯಬಾರದು. ಟ್ರಾಫಿಕ್ ಜಾಮ್ ಸಮಸ್ಯೆ ಎದುರಾಗಬಾರದು ಎಂದು ಜಿಲ್ಲಾಡಳಿತ ಉರುಸ್ ಬರುವವರನ್ನು ಹೊರತುಪಡಿಸಿ ಉಳಿದ ಪ್ರವಾಸಿಗರಿಗೆ ಸಂಪೂರ್ಣ ನಿಷೇಧ ಹೇರಿದೆ.
ಚಿಕ್ಕಮಗಳೂರಿನಿಂದ ದತ್ತಪೀಠದ ಮಾರ್ಗದ ರಸ್ತೆ ಅತ್ಯಂತ ಚಿಕ್ಕದಾಗಿರುವುದರಿಂದ ಟ್ರಾಫಿಕ್ ಜಾಮ್ ಉಂಟಾಗಬಾರದು ಜೊತೆಗೆ ಭದ್ರತೆಯ ದೃಷ್ಠಿಯಿಂದಲೂ ಪ್ರವಾಸಿಗರಿಗೆ ನಿರ್ಬಂಧ ಹಾಕಲಾಗಿದೆ. ಆದರೆ, ಹೋಂ ಸ್ಟೇ ಹಾಗೂ ರೆಸಾರ್ಟ್ಗಳಿಗೆ ಮೊದಲೇ ಬುಕ್ ಮಾಡಿರುವ ಪ್ರವಾಸಿಗರಿಗೆ ಯಾವುದೇ ನಿರ್ಬಂಧವಿಲ್ಲ. ಪ್ರವಾಸಿಗರು ಬುಕ್ಕಿಂಗ್ ತೋರಿಸಿ ಹೋಂ ಸ್ಟೇ ಹಾಗೂ ರೆಸಾರ್ಟ್‌ಗಳಿಗೆ ಮಾತ್ರ ಹೋಗಬಹುದು.
ಇನ್ನು ಗಿರಿ ಭಾಗದ ಕಾಫಿ ತೋಟಗಳಿಗೆ ಓಡಾಡುವ ಸ್ಥಳೀಯರಿಗೂ ಯಾವುದೇ ನಿರ್ಬಂಧವಿಲ್ಲ. ಉರುಸ್ ಆಚರಣೆ ಹಿನ್ನೆಲೆ ಪೊಲೀಸ್ ಕೂಡ ಜಿಲ್ಲಾದ್ಯಂತ ಹದ್ದಿನ ಕಣ್ಣಿಟ್ಟಿದೆ.
ಬಾಬಾಬುಡನ್ ಹಿನ್ನಲೆಯಲ್ಲಿ ಚಿಕ್ಕಮಗಳೂರು ನಗರ ಹಾಗೂ ಗಿರಿಪ್ರದೇಶದಲ್ಲಿ 800ಕ್ಕೂ ಅಧಿಕ ಪೊಲೀಸರನ್ನು ಬಂದೋಬಸ್ತ್ ಗೆ ನೇಮಿಸಲಾಗಿದೆ.