
ಭಾರತೀಯ ಮೂಲದ ಅಮೆರಿಕದ ಖ್ಯಾತ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರು 286 ದಿನಗಳ ಬಳಿಕ ಇಂದು ಭೂಮಿಗೆ ಯಶಸ್ವಿಯಾಗಿ ಮರಳಿದ್ದಾರೆ.
ಬಾಹ್ಯಾಕಾಶ ಕೇಂದ್ರದಲ್ಲಿ ಸಿಲುಕಿದ್ದ ಸುನಿತಾ ವಿಲಿಯಮ್ಸ್ ಮತ್ತು ನಾಸಾದ ಬಾಹ್ಯಾಕಾಶ ಯಾನಿ ಬುಚ್ ವಿಲ್ಮೋರ್ ಅವರಿದ್ದ ಸ್ಪೇಸ್ ಎಕ್ಸ್ ಡ್ರ್ಯಾಗನ್ ನೌಕೆ ಬುಧವಾರ ಬೆಳಗ್ಗೆ ಅಮೇರಿಕಾದ ಫ್ಲೋರಿಡಾದ ಕರಾವಳಿಯ ಸಮುದ್ರದಲ್ಲಿ ಟಚ್‌ಡೌನ್ ಆಗಿದೆ.
ಸುನಿತಾ, ಬುಚ್ ಜೊತೆಗೆ ರಷ್ಯಾದ ಅಲೆಕ್ಸಾಂಡರ್ ಗೋರ್ಬುನೋವ್ ಮತ್ತು ಅಮೆರಿಕದ ನಿಕ್ ಹೇಗ್ ಅವರನ್ನು ಎಲಾನ್ ಮಸ್ಕ್ ಒಡೆತನದ ಸ್ಪೇಸ್‌ಎಕ್ಸ್ ಕಂಪನಿಯ ಕ್ರ್ಯೂ ಡ್ರ್ಯಾಗನ್ ಕ್ಯಾಪ್ಸೂಲ್ ಭೂಮಿಗೆ ಕರೆತಂದಿದೆ.
ಭಾರತೀಯ ಕಾಲಮಾನ ಮಂಗಳವಾರ ಬೆಳಗ್ಗೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ನಿರ್ಗಮಿಸಿದ ನೌಕೆ ನಿಗದಿಯಂತೆ ಭಾರತೀಯ ಕಾಲಮಾನ ಬುಧವಾರ ಬೆಳಗ್ಗೆ 3:27ಕ್ಕೆ ಭೂಮಿಯನ್ನು ತಲುಪಿದೆ.
ಕ್ರ್ಯೂ ಡ್ರ್ಯಾಗನ್ ಕ್ಯಾಪ್ಸೂಲ್ ಫ್ಲೋರಿಡಾದ ಸಮುದ್ರದ ಮೇಲೆ ಟಚ್‌ಡೌನ್ ಆಗಿದೆ. ಆಕಾಶದಿಂದ ವೇಗವಾಗಿ ಬರುವ ಕ್ಯಾಪ್ಸೂಲ್ ನಿಧಾನವಾಗಿ ಲ್ಯಾಂಡ್ ಆಯ್ತು. ಭೂಮಿ ಪ್ರವೇಶದ ಬಳಿಕ ಕ್ಯಾಪ್ಸೂಲ್‌ನಲ್ಲಿರುವ 4 ಪ್ಯಾರಾಚೂಟ್‌ಗಳು ತೆರೆದುಕೊಂಡಿತ್ತು. ಈ ಪ್ಯಾರಾಚೂಟ್‌ಗಳು ಕ್ಯಾಪ್ಸೂಲ್ ವೇಗವನ್ನು ತಗ್ಗಿಸಿತ್ತು. ವೇಗ ತಗ್ಗಿದಂತೆ ಕ್ಯಾಪ್ಸೂಲ್ ನಿಧಾನವಾಗಿ ಸಮುದ್ರದಲ್ಲಿ ಟಚ್‌ಡೌನ್ ಆಯ್ತು.
ನಂತರ ವಿಶೇಷ ದೋಣಿಯಲ್ಲಿ ಸ್ಪೇಸ್ ಎಕ್ಸ್ ಸಿಬ್ಬಂದಿ ನೌಕೆಯನ್ನು ರೋಪ್ ಬಳಸಿ ಹತ್ತಿರದಲ್ಲೇ ಇದ್ದ ದೊಡ್ಡ ಬೋಟ್ ಬಳಿ ತಂದರು. ಈ ನೌಕೆಯನ್ನು ಕ್ರೇನ್ ಬಳಸಿ ಬೋಟ್ ಒಳಗಡೆ ಇಡಲಾಯಿತು. ಬೋಟ್ ಒಳಗಡೆ ಇಟ್ಟ ನಂತರ ಕ್ಯಾಪ್ಸೂಲ್ ಸುರಕ್ಷಿತವಾಗಿದೆಯೇ ಎಂದು ಪರಿಶೀಲಿಸಿದ ಬಳಿಕ ಕೆಳಗಡೆ ಇರುವ ಬಾಗಿಲು(ಹ್ಯಾಚ್) ತೆರೆಯಲಾಯಿತು. ಈ ಬಾಗಿಲಿನ ಮೂಲಕ ಯಾನಿಗಳನ್ನು ಸ್ಪೇಸ್ ಎಕ್ಸ್ ಸಿಬ್ಬಂದಿ ಹೊರಗೆ ನಿಧಾನವಾಗಿ ಎಳೆದು ವಿಶೇಷವಾಗಿ ವಿನ್ಯಾಸ ಪಡಿಸಲಾಗಿರುವ ವೀಲ್ ಚೇರ್‌ನಲ್ಲಿ ಕುಳ್ಳಿರಿಸಿದರು.
2024ರ ಜೂನ್ 6ರಂದು ಸುನಿತಾ ಮತ್ತು ವಿಲ್ಮೋರ್ ಎಂಟು ದಿನಗಳ ಕಾರ್ಯಾಚರಣೆಗಾಗಿ ಬೋಯಿಂಗ್ ಸ್ಟಾರ್ ಲೈನರ್ ಕ್ಯಾಪ್ಸುಲ್‌ನಲ್ಲಿ ಬಾಹ್ಯಾಕಾಶಕ್ಕೆ ತೆರಳಿದ್ದರು. ಬಾಹ್ಯಾಕಾಶ ನೌಕೆಯ ಸಮಸ್ಯೆ ಹಾಗೂ ತಾಂತ್ರಿಕ ದೋಷಗಳಿಂದಾಗಿ ಹಿಂದಿರುಗಲು ಸಾಧ್ಯವಾಗಿರಲಿಲ್ಲ.
ನಾಸಾದ ಸಹಭಾಗಿತ್ವದಲ್ಲಿ ಬೋಯಿಂಗ್ ರೂಪಿಸಿದ್ದ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯ ಮೊದಲ ಮಾನವ ಸಹಿತ ಪರೀಕ್ಷಾರ್ಥ ಪ್ರಯಾಣದ ಭಾಗವಾಗಿ ಉಪಗ್ರಹ ಉಡಾವಣೆ ಮಾಡಲಾಗಿತ್ತು. ಸುನಿತಾ ಮತ್ತು ಬುಚ್ ಇಬ್ಬರೂ ಗಗನಯಾತ್ರಿಗಳು ಜೂನ್ 5 ರಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಹೋಗಿದ್ದರು. ಎಂಟು ದಿನಗಳ ಕಾಲ ಅಲ್ಲಿದ್ದು ಜೂನ್ 14 ರಂದು ಸ್ಟಾರ್‌ಲೈನರ್ ಮೂಲಕವೇ ಭೂಮಿಗೆ ವಾಪಸ್ ಆಗಬೇಕಿತ್ತು. ಆದರೆ, ತಾಂತ್ರಿಕ ಸಮಸ್ಯೆಗಳ ಕಾರಣದಿಂದ ಅವರು ಬಾಹ್ಯಾಕಾಶದಲ್ಲೇ ಉಳಿಯುವಂತಾಗಿತ್ತು.
ಫ್ಲೋರಿಡಾದಲ್ಲಿರುವ ಕೆನಡಿ ಬಾಹ್ಯಾಕಾಶ ನೆಲೆಯಿಂದ ಮಾರ್ಚ್ 15 ರಂದು ಕ್ರ್ಯೂ ಡ್ರ್ಯಾಗನ್ ಕ್ಯಾಪ್ಸೂಲ್ ಹೊತ್ತುಕೊಂಡು ಫಾಲ್ಕನ್-9 ರಾಕೆಟ್ ಹಾರಿತ್ತು. ಉಡ್ಡಯನಗೊಂಡ 29 ಗಂಟೆಗಳ ಬಳಿಕ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರವನ್ನು ಕ್ರ್ಯೂ ಡ್ರ್ಯಾಗನ್ ತಲುಪಿತ್ತು.
ಇದೀಗ ಅಲ್ಲಿ ಸಿಲುಕಿದ್ದ ಇಬ್ಬರು ಗಗನಯಾತ್ರಿಗಳನ್ನು ಸುರಕ್ಷಿತವಾಗಿ ಭೂಮಿಗೆ ಕರೆತಂದಿದೆ. ಈ ಕಾರ್ಯಾಚರಣೆ ಮಾನವನ ತಾಂತ್ರಿಕ ಸಾಧನೆಯ ಉತೃಷ್ಟತೆಗೆ ಒಂದು ಜೀವಂತ ನಿದರ್ಶನವಾಗಿ ಇತಿಹಾಸದಲ್ಲಿ ದಾಖಲಾಗಿದೆ.