
ಮೈಸೂರು ಸಮೀಪ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂಡಿಗೆರೆ ಮೂಲದ ಯುವಕ ಸಾವನ್ನಪ್ಪಿರುವ ಘಟನೆ ಬುಧವಾರ ನಡೆದಿದೆ.
ಮೈಸೂರು ಕೆ.ಆರ್. ನಗರ ಸಮೀಪ ಈ ಅಪಘಾತ ಸಂಭವಿಸಿದ್ದು, ವಾಹನವೊಂದನ್ನು ಓವರ್ ಟೇಕ್ ಮಾಡುವ ಪ್ರಯತ್ನದಲ್ಲಿ ಕೆ.ಎಸ್.ಆರ್.ಟಿ.ಸಿ. ಬಸ್ ಕಾರಿಗೆ ಡಿಕ್ಕಿ ಹೊಡೆದು ಕಾರಿನಲ್ಲಿ ಸಂಚರಿಸುತ್ತಿದ್ದ ಸುನಿಲ್(35 ವರ್ಷ) ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಸುನಿಲ್ ಮೂಡಿಗೆರೆ ತಾಲ್ಲೂಕು ಬಣಕಲ್ ಹೋಬಳಿ ಬಿ.ಹೊಸಳ್ಳಿ ಗ್ರಾಮದವರು. ಬಿ.ಹೊಸಳ್ಳಿ ಮೇಗಲಮನೆ ಹೆಚ್.ಜಿ. ಕೃಷ್ಣೇಗೌಡ ಎಂಬುವವರ ಪುತ್ರ.
ಮೈಸೂರಿನಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಸುನಿಲ್ ತನ್ನ ಸ್ನೇಹಿತರೊಬ್ಬರ ಜೊತೆ ಮೈಸೂರಿನಿಂದ ಬೇಲೂರಿಗೆ ತಮ್ಮ ಸಂಬಂಧಿಕರ ಗೃಹ ಪ್ರವೇಶಕ್ಕೆ ಆಗಮಿಸುತ್ತಿದ್ದರು ಎನ್ನಲಾಗಿದೆ.
ಚಿಕ್ಕಮಗಳೂರಿನಿಂದ ಮೈಸೂರು ಕಡೆಗೆ ತೆರಳುತ್ತಿದ್ದ ಸಾರಿಗೆ ಬಸ್ ಬುಧವಾರ ಬೆಳಿಗ್ಗೆ ಕೆ.ಆರ್.ನಗರ ಸಮೀಪ ವಾಹನವೊಂದನ್ನು ಓವರ್ ಟೇಕ್ ಮಾಡಿಕೊಂಡು ಹೋಗಿ ಕಾರಿಗೆ ಡಿಕ್ಕೆ ಹೊಡೆದಿದೆ ಎನ್ನಲಾಗಿದೆ. ನಂತರ ಬಸ್ ಕಾರಿನ ಮೇಲೆಯೇ ಉರುಳಿ ಬಿದ್ದಿತ್ತು ಎನ್ನಲಾಗಿದೆ. ಡಿಕ್ಕಿಯ ರಭಸಕ್ಕೆ ಕಾರು ನಜ್ಜುಗುಜ್ಜಾಗಿದೆ.
ಕಾರಿನಲ್ಲಿದ್ದ ಸುನಿಲ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ಅವರ ಸಂಬಂಧಿ ಮಾಧಾಪುರದ ರಮೇಶ್ ಎನ್ನುವವರ ಸ್ಥಿತಿ ಗಂಭಿರವಾಗಿದೆ ಎಂದು ತಿಳಿದುಬಂದಿದೆ.
ಸುನಿಲ್ ತಂದೆ ತಾಯಿ, ಸಹೋದರಿ ಮತ್ತು ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಒಬ್ಬನೇ ಮಗನನ್ನು ಕಳೆದುಕೊಂಡು ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಮೃತದೇಹದ ಮರಣೋತ್ತರ ಪರೀಕ್ಷೆ ನಂತರ ಬುಧವಾರ ರಾತ್ರಿ ಹುಟ್ಟೂರು ಬಿ.ಹೊಸಳ್ಳಿಗೆ ಮೃತದೇಹವನ್ನು ತರಲಾಗಿದ್ದು, ಇಂದು ಗುರುವಾರ ಮಧ್ಯಾಹ್ನ ಸ್ವಗ್ರಾಮದಲ್ಲಿ ಅಂತಿಮ ಸಂಸ್ಕಾರ ನೆರವೇರಲಿದೆ.