
ಮೂಡಿಗೆರೆ ತಾಲೂಕು ಕೂವೆ ಕಲ್ಮನೆ ಗ್ರಾಮದಲ್ಲಿ ಮೀಸಲು ಅರಣ್ಯ ಘೋಷಣೆ ಮಾಡುವಾಗ ಜನವಸತಿ ಮತ್ತು ಕೃಷಿ ಸಾಗುವಳಿ ಮಾಡಿದ ಜಾಗವನ್ನು ಹೊರತುಪಡಿಸಿ ಉಳಿದ ಜಾಗವನ್ನು ಮಾತ್ರ ಮೀಸಲು ಅರಣ್ಯ ಎಂದು ಘೋಷಣೆ ಮಾಡಬೇಕೆಂದು ಕರ್ನಾಟಕ ಬೆಳೆಗಾರರ ಒಕ್ಕೂಟ ಮತ್ತು ಮೂಡಿಗೆರೆ ಬೆಳೆಗಾರರ ಸಂಘದ ವತಿಯಿಂದ ಮಂಗಳವಾರ ಚಿಕ್ಕಮಗಳೂರಿನಲ್ಲಿ ಅರಣ್ಯ ಇಲಾಖೆಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಯಶ್ಪಾಲ್ ಶರ್ಮ ರವರನ್ನು ಭೇಟಿ ಮಾಡಿ ಮನವಿ ಪತ್ರ ನೀಡಲಾಗಿತ್ತು.
ಈ ಮನವಿ ಪತ್ರದಲ್ಲಿ ಮೂಡಿಗೆರೆ ತಾಲೂಕು ಕೂವೆ ಕಲ್ಮನೆ ಗ್ರಾಮದ ಸರ್ವೆ ನಂಬರ್ 49, 51 ರ ಪ್ರದೇಶ ಜನವಸತಿಯಾಗಿದ್ದು ಅದನ್ನು ಮೀಸಲು ಅರಣ್ಯದಿಂದ ಮುಕ್ತ ಮಾಡುವಂತೆ ಮನವಿ ಮಾಡಲಾಗಿತ್ತು, ಸ.ನಂ 46 ನ್ನು ಮೀಸಲು ಅರಣ್ಯ ಮಾಡಲು ಸ್ಥಳೀಯರು ಒಪ್ಪಿಗೆ ಸೂಚಿಸಿದ್ದಾರೆ ಎಂದು ಮನವಿ ಪತ್ರದಲ್ಲಿ ಉಲ್ಲೇಖವಾಗಿತ್ತು.
ಆದರೆ ಸರ್ವೇ ನಂಬರ್ 46ರಲ್ಲಿಯೂ ಸಾಕಷ್ಟು ಜನರು ವಾಸವಾಗಿದ್ದು, ಕೃಷಿ ಸಾಗುವಳಿ ಮಾಡಿದ್ದು, ಇದನ್ನು ಮನಗಂಡು ಬೆಳೆಗಾರರ ಸಂಘಟನೆ ಇಂದು 15-05-2025ರಂದು ಪುನಃ ಚಿಕ್ಕಮಗಳೂರಿನಲ್ಲಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯವರನ್ನು ಭೇಟಿ ಮಾಡಿ ಪರಿಷ್ಕೃತ ಮನವಿ ನೀಡಿದೆ. ಪರಿಷ್ಕೃತ ಮನವಿನಲ್ಲಿ ಸ.ನಂ 46ರಲ್ಲಿ ಜನವಸತಿ ಮತ್ತು ಕೃಷಿ ಸಾಗುವಳಿ ಮಾಡಿರುವ ಜಮೀನನ್ನು ಹೊರತು ಪಡಿಸಿ ಸಾಕಷ್ಟು ಉಳಿಕೆ ಜಾಗವಿದ್ದು, ಅಂತಹ ಜಾಗವನ್ನು ಮಾತ್ರ ಮೀಸಲು ಅರಣ್ಯ ಎಂದು ಘೋಷಣೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
ಮನವಿ ಸ್ವೀಕರಿಸಿ ಅರಣ್ಯ ಇಲಾಖೆಯಿಂದ ಹಿಂಬರಹ ನೀಡಿರುತ್ತಾರೆ.
ಈ ಸಂದರ್ಭದಲ್ಲಿ ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಹಳಸೆ ಶಿವಣ್ಣ, ಮೂಡಿಗೆರೆ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್. ಬಾಲಕೃಷ್ಣ, ಕೆಜಿಎಫ್ ಮಾಜಿ ಅಧ್ಯಕ್ಷ ಬಿ.ಎಸ್. ಜಯರಾಂ ಮುಂತಾದವರು ಇದ್ದರು.