
ಚಿಕ್ಕಮಗಳೂರು ತಾಲ್ಲೂಕಿನ ಆಲ್ದೂರು ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರಾಗಿ ಯುವ ಮುಖಂಡ ಎ.ಬಿ. ಭರತ್ ಬುಧವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನೂತನ ಉಪಾಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿದ ಉಪಸಭಾಪತಿ ಎಂ.ಕೆ.ಪ್ರಾಣೇಶ್ ಪಂಚಾಯಿತಿ ಸ್ಥಾನ ಹೊತ್ತಿರುವ ನೂತನ ಉಪಾಧ್ಯಕ್ಷರ ಮೇಲೆ ಮಹತ್ತರ ಜವಾಬ್ದಾರಿಯಿದೆ. ಗ್ರಾಮಸ್ಥರ ನಿರೀಕ್ಷೆಗೂ ಮೀರಿ ಕೆಲಸ ಮಾಡಲಾಗದಿದ್ದರೂ ಜನತೆಯ ಮನಸ್ಸನ್ನು ಗೆಲ್ಲುವಂತ ನಿಟ್ಟಿನಲ್ಲಿ ಅವಧಿ ಪೂರೈಸಬೇಕು ಎಂದರು.
ಸರ್ವ ಸದಸ್ಯರು ಹಾಗೂ ಗ್ರಾಮಸ್ಥರ ಸಹಕಾರದಿಂದ ಅನುದಾನವನ್ನು ಇತಿಮಿತಿಯಲ್ಲಿ ಬಳಸಿಕೊಂಡು ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ಮೂಲಭೂತ ಸೌಕರ್ಯ ಒದಗಿಸುವುದು ಪ್ರತಿನಿಧಿಗಳ ಕರ್ತ ವ್ಯ. ಹೀಗಾಗಿ ಹಂತ ಹಂತವಾಗಿ ಅಪೂರ್ಣ ಕಾಮಗಾರಿ ಪೂರ್ಣಗೊಳಿಸಿ ಸಾಗಬೇಕಿದೆ ಎಂದು ಹೇಳಿದರು.
ಇಂದು ಪಂಚಾಯಿತಿಯಲ್ಲಿ ಹಿರಿಯರು-ಕಿರಿಯರ ಸಮ್ಮೀಲನವಾಗಿದೆ. ನೂತನ ಉಪಾಧ್ಯಕ್ಷರು ಅಂದಿನಿಂದಲೂ ಭಾಜಪದಲ್ಲಿ ಗುರುತಿಸಿಕೊಂಡು ಗ್ರಾ.ಪಂ. ಸದಸ್ಯರಾಗಿ ಇದೀಗ ಉಪಾಧ್ಯಕ್ಷ ಸ್ಥಾನ ಗಳಿಸಲು ಜನ ಸಂಪರ್ಕವೇ ಕಾರಣ. ಬಾಲ್ಯದಲ್ಲಿ ಇದೇ ಗ್ರಾ.ಪಂ.ಗೆ ಪತ್ರಿಕೆ ಹಂಚುವ ಯುವಕ ಇದೀಗ ಉಪಾಧ್ಯಕ್ಷ ಸ್ಥಾನ ಕ್ಕೇರಿರುವ ಹಾದಿ ಸಾಮಾನ್ಯವಲ್ಲ ಎಂದರು.
ಭಾಜಪ ಆಲ್ದೂರು ಮಂಡಲ ಅಧ್ಯಕ್ಷ ರವಿ ಬಸರವಳ್ಳಿ ಮಾತನಾಡಿ 26 ಸದಸ್ಯರನ್ನು ಒಳಗೊಂಡಿರುವ ಅತಿದೊಡ್ಡ ಗ್ರಾ.ಪಂ. ಆಲ್ದೂರು ಸಂಪೂರ್ಣ ಮಲೆನಾಡು ಭಾಗದಿಂದ ಕೂಡಿದೆ. ಜೊತೆಗೆ ವಸತಿ, ನಿವೇಶನ ರಹಿತರ ಸಮಸ್ಯೆಗಳಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಆದ್ಯತೆಯನ್ನು ಉಪಾಧ್ಯಕ್ಷರು ಬಡವರ್ಗ ಕ್ಕೆ ನೀಡಲಿ ಎಂದು ಆಶಿಸಿದರು.
ನೂತನ ಉಪಾಧ್ಯಕ್ಷ ಎ.ಬಿ.ಭರತ್ ಮಾತನಾಡಿ ಅತ್ಯಧಿಕ ಮತಗಳಿಂದ ಗ್ರಾ.ಪಂ. ಸದಸ್ಯನಾದ ತಮಗೆ ಸರ್ವ ಪಕ್ಷಗಳ ಒಪ್ಪಂದ ಮೇರೆಗೆ ಉಪಾಧ್ಯಕ್ಷ ಸ್ಥಾನ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಪಂಚಾಯಿತಿ ಭ್ರಷ್ಟಮುಕ್ತ ಗ್ರಾ.ಪಂ.ವಾಗಿ ನಿರ್ಮಿಸಲು ಸದಾಕಾಲ ಕಾರ್ಯನಿರ್ವಹಿಸುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷೆ ಶ್ರೀದೇವಿ ಕುಮಾರಸ್ವಾಮಿ, ಧರ್ಮಗುರುಗಳಾದ ರಾಘವೇಂದ್ರ, ಫಾದರ್ ಸಂತೋಷ್, ಬ್ಯಾರಿ ಮಸೀದಿ ಮೌಲಾನ, ಮುಖಂಡರುಗಳಾದ ಕೆ.ಟಿ.ರಾಧಾಕೃಷ್ಣ, ಕುರುವಂಗಿ ವೆಂಕಟೇಶ್, ಕೆ.ಆರ್.ಅನಿಲ್‌ಕುಮಾರ್, ಸಂತೋಷ್ ಕೋಟ್ಯಾನ್, ಸೀತರಾಮಭರಣ್ಯ, ನವರಾಜ್, ಗ್ರಾ.ಪಂ. ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.