
ಐಪಿಎಲ್-2025 ಟೂರ್ನಿಯ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಮಣಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಚೊಚ್ಚಲ ಐಪಿಎಲ್ ಟ್ರೋಫಿ ಎತ್ತಿ ಹಿಡಿದಿದೆ.
ಅಹ್ಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 6 ರನ್ ಗಳ ಅಂತರದಲ್ಲಿ ಮಣಿಸಿ 18 ವರ್ಷಗಳ ಬಳಿಕ ಮೊದಲ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿದೆ.
ಐಪಿಎಲ್ 2025 ರ ಫೈನಲ್‌ನಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೊದಲು ಬ್ಯಾಟ್ ಮಾಡಿ 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 190 ರನ್ ಗಳಿಸಿತು. ವಿರಾಟ್ ಕೊಹ್ಲಿ ಆರ್‌ಸಿಬಿ ಪರ ಅತಿ ಹೆಚ್ಚು ರನ್ ಗಳಿಸಿದರು. ಅವರು 35 ಎಸೆತಗಳಲ್ಲಿ 43 ರನ್ ಬಾರಿಸಿದರು. ಇದಲ್ಲದೆ, ಜಿತೇಶ್ ಶರ್ಮಾ 10 ಎಸೆತಗಳಲ್ಲಿ 24 ರನ್‌ಗಳ ತ್ವರಿತ ಇನ್ನಿಂಗ್ಸ್ ಆಡಿದರು.
ನಾಯಕ ರಜತ್ ಪಟಿದಾರ್ 26 ರನ್ ಗಳಿಸಿ ಪೆವಿಲಿಯನ್ಗೆ ಮರಳಿದರು. ಮಯಾಂಕ್ ಅಗರ್ವಾಲ್ 24 ರನ್ ಗಳಿಸುವ ಮೂಲಕ ಯುಜ್ವೇಂದ್ರ ಚಹಾಲ್ಗೆ ಬಲಿಯಾದರು. ಪಂಜಾಬ್ ಪರ ಕೈಲ್ ಜೇಮಿಸನ್ ಮತ್ತು ಅರ್ಶ್‌ದೀಪ್ ಸಿಂಗ್ ತಲಾ ಮೂರು ವಿಕೆಟ್ ಪಡೆದರು.
ಆರ್ ಸಿಬಿ ನೀಡಿದ 191 ರನ್ ಗಳ ಸವಾಲಿನ ಗುರಿ ಬೆನ್ನು ಹತ್ತಿದ ಪಂಜಾಬ್ ಕಿಂಗ್ಸ್ ತಂಡ ನಿಗಧಿತ 20 ಓವರ್ ನಲ್ಲಿ 7 ವಿಕೆಟ್ ನಷ್ಟಕ್ಕೆ 184 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು.
ಪಂಜಾಬ್ ಪರ ಪ್ರಿಯಾಂಶ್ ಆರ್ಯ 24 ರನ್ ಗಳಿಸಿದರೆ, ಪ್ರಭ್ ಸಿಮ್ರನ್ ಸಿಂಗ್ 26 ರನ್ ಗಳಿಸಿ ಔಟಾದರು. ನಾಯಕ ಶ್ರೇಯಸ್ ಅಯ್ಯರ್ ಕೇವಲ 1 ರನ್ ಗಳಿಸಿ ರೊಮಾರಿಯೋ ಶೆಫರ್ಡ್ ಗೆ ವಿಕೆಟ್ ಒಪ್ಪಿಸಿದರು. ಪಂಜಾಬ್ ಇನ್ನಿಂಗ್ಸ್ ಗೆ ಬಲ ನೀಡಿ ಗೆಲುವಿನ ಭರವಸೆ ಮೂಡಿಸಿದ್ದ ಜಾಶ್ ಇಂಗ್ಲಿಸ್ 23 ಎಸೆತಗಳಲ್ಲಿ 39 ರನ್ ಗಳಿಸಿದರು. ಆದರೆ ಕೃನಾಲ್ ಪಾಂಡ್ಯಾಗೆ ವಿಕೆಟ್ ಒಪ್ಪಿಸಿದರು.
ಈ ಹಂತದಲ್ಲಿ ಪಂಜಾಬ್ ಇನ್ನಿಂಗ್ಸ್ ಜೀವ ತುಂಬಿದ್ದು ನೇಹಲ್ ವಧೇರಾ (15). ಆದರೆ ಅವರ ರನ್ ಗಳಿಕೆ ಕೂಡ 15ಕ್ಕೇ ಸೀಮಿತವಾಯಿತು. ಅಪಾಯಕಾರಿ ಪರಿಣಮಿಸಿದ್ದ ವಧೇರಾರನ್ನು ಭುವನೇಶ್ವರ್ ಕುಮಾರ್ ಔಟ್ ಮಾಡಿದರು. ಬಳಿಕ ಕ್ರೀಸ್ ಗೆ ಬಂದ ಮಾರ್ಕಸ್ ಸ್ಟಾಯ್ನಿಸ್ ಸಿಕ್ಸರ್ ಭಾರಿಸಿ 2ನೇ ಎಸೆತದಲ್ಲೇ ಭುವನೇಶ್ವರ್ ಕುಮಾರ್ ಗೆ ವಿಕೆಟ್ ಒಪ್ಪಿಸಿದರು.
ಇನ್ನು ಈ ಇನ್ನಿಂಗ್ಸ್ ನಲ್ಲಿ ಪಂಜಾಬ್ ಪರ ಅಂತಿಮ ಹಂತದಲ್ಲಿ ಹೋರಾಟ ನಡೆಸಿದ್ದು ಶಶಾಂಕ್ ಸಿಂಗ್, ಕೇವಲ 30 ಎಸೆತಗಳಲ್ಲಿ 6 ಸಿಕ್ಸರ್ ಮತ್ತು 3 ಬೌಂಡರಿ ನೆರವಿನಿಂದ ಅಜೇಯ 61 ರನ್ ಗಳಿಸಿದರೂ ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಿಲಿಲ್ಲ. ಅಂತಿಮವಾಗಿ ಪಂಜಾಬ್ ನಿಗಧಿತ 20 ಓವರ್ ನಲ್ಲಿ 7 ವಿಕೆಟ್ ನಷ್ಟಕ್ಕೆ 184 ರನ್ ಗಳಿಸಿ ಕೇವಲ 6 ರನ್ ಅಂತರದಲ್ಲಿ ಸೋಲು ಕಂಡಿತು.
ಆರ್ ಸಿಬಿ ಪರ ಭುವನೇಶ್ವರ್ ಕುಮಾರ್ ಮತ್ತು ಕೃನಾಲ್ ಪಾಂಡ್ಯ ತಲಾ 2 ವಿಕೆಟ್ ಪಡೆದರೆ, ಯಶ್ ದಯಾಳ್, ಜಾಶ್ ಹೇಜಲ್ ವುಡ್ ಮತ್ತು ರೊಮಾರಿಯೋ ಶೆಫರ್ಡ್ ತಲಾ 1 ವಿಕೆಟ್ ಪಡೆದರು. 4 ಓವರ್ ಗಳಲ್ಲಿ ಕೇವಲ 17 ರನ್ ನೀಡಿ 2 ಅಮೂಲ್ಯ ವಿಕೆಟ್ ಗಳನ್ನು ಪಡೆದ ಕೃನಾಲ್ ಪಾಂಡ್ಯ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಮುಂಬೈ ತಂಡದ ಸೂರ್ಯಕುಮಾರ್ ಯಾದವ್ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
18 ವರ್ಷಗಳ ಕಾಯುವಿಕೆಯ ನಂತರ ಐಪಿಎಲ್ ಕನಸು ನನಸು ಮಾಡಿಕೊಂಡ ವಿರಾಟ್ ಕೊಹ್ಲಿ ಗೆಲುವು ಖಚಿತವಾಗುತ್ತಿದ್ದಂತೆ ಮೈದಾನದಲ್ಲಿ ಕಣ್ಣಿರು ಹಾಕಿ ತೀವ್ರ ಭಾವುಕರಾದರು. ಈ ಸಂದರ್ಭದಲ್ಲಿ ಆರ್ ಸಿ ಬಿ ಮಾಜಿ ಆಟಗಾರರಾದ ಎ.ಬಿ. ಡಿವಿಲಿಯರ್ಸ್ ಮತ್ತು ಕ್ರಿಸ್ ಗೇಲ್ ಕೋಹ್ಲಿ ಜೊತೆ ಸೇರಿ ಸಂಭ್ರಮಿಸಿದರು. ಮೂವರು ಒಟ್ಟಾಗಿ ಈ ಸಲ ಕಪ್ ನಮ್ದೆ ಎಂದು ಕನ್ನಡದಲ್ಲಿ ಹೇಳಿ ಮನಗೆದ್ದರು.