
ಕರ್ನಾಟಕ ಗ್ರೋಯರ್ಸ್ ಫೆಡರೇಶನ್, ಜಿಲ್ಲೆಯ ಎಲ್ಲಾ ತಾಲ್ಲೂಕು ಮತ್ತು ಹೋಬಳಿ ಬೆಳೆಗಾರರ ಸಂಘಗಳು, ಜಿಲ್ಲಾ ನಾಗರೀಕ ಮತ್ತು ರೈತಹೋರಾಟ ಸಮಿತಿ ಹಾಗೂ ಸಮಾನ ಮನಸ್ಕ ಸಂಘಟನೆಗಳ ವತಿಯಿಂದ ಜೂನ್ 9 ಸೋಮವಾರದಂದು ಚಿಕ್ಕಮಗಳೂರಿನಲ್ಲಿ ಬೃಹತ್ ರೈತ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಈ ಸಮಾವೇಶಕ್ಕೆ ಜಿಲ್ಲೆಯ ಎಲ್ಲ ಪ್ರಗತಿಪರ ಸಂಘ-ಸಂಸ್ಥೆಗಳು ಬೆಂಬಲ ವ್ಯಕ್ತಪಡಿಸಿವೆ. ಈ ಸಮಾವೇಶದ ಮೂಲಕ ಮಲೆನಾಡಿನ ರೈತರು ಅನುಭವಿಸುತ್ತಿರುವ ದೀರ್ಘ ಸಮಯದ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ನಡೆಸಲಾಗುತ್ತಿದೆ. ಈ ಸಮಾವೇಶದಲ್ಲಿ ಕಾಫಿಬೆಳೆಯುವ ಪ್ರದೇಶಗಳ ಎಲ್ಲಾ ರೈತರು, ಉದ್ಯಮಿಗಳು ಮತ್ತು ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಹಳಸೆ ಶಿವಣ್ಣ ಮನವಿ ಮಾಡಿದ್ದಾರೆ.
ಈ ಬಗ್ಗೆ ಮಾಧ್ಯಮದ ಜೊತೆ ಮಾತನಾಡಿರುವ ಅವರು ಸಮಾವೇಶದಲ್ಲಿ ಪ್ರಮುಖವಾಗಿ ಫಾರಂ 50 ಹಾಗೂ 53 ರಲ್ಲಿ ನ್ಯಾಯಯುತವಾಗಿ ಮಂಜೂರಾದ ಜಮೀನುಗಳನ್ನು ವಿನಾಕಾರಣ ರದ್ದು ಮಾಡಿರುವುದು. ರೈತ – ಬೆಳೆಗಾರರ ಕೃಷಿ ಭೂಮಿಯನ್ನು ದಿಢೀರನೆ ಸೆಕ್ಷನ್ 4(1) ಅಡಿಯಲ್ಲಿ ತಂದಿದ್ದು, ಶತಮಾನಗಳಿಂದ ಸಾಗುವಳಿ ಮಾಡಿಕೊಂಡು ಬಂದ ಭೂಮಿಯನ್ನು “ಡೀಮ್ಡ್ ಫಾರೆಸ್ಟ್” ಹೆಸರಿನಲ್ಲಿ ದಾಖಲಿಸಿರುವುದು, ದಿನೇ ದಿನೇ ಕಾಡಾನೆ ಕಾಡುಕೋಣ ಮುಂತಾದ ವನ್ಯಜೀವಿಗಳ ಹಾವಳಿಯಿಂದ ಕೃಷಿ ಕಾರ್ಯಕ್ಕೆ ತೀವ್ರ ನಷ್ಟ ಮತ್ತು ಅಡ್ಡಿಯುಂಟುಮಾಡುತ್ತಿರುವುದು, ಪ್ಲಾಂಟೇಶನ್ ಬೆಳೆಗಾರರ ಅನಧಿಕೃತ ಸಾಗುವಳಿಯನ್ನ ಲೀಸ್ ಮೂಲಕ ನೀಡಲು ಪಡೆದ ಅರ್ಜಿಗಳ ವಿಲೇವಾರಿ ಮಾಡಲು ವಿಳಂಬ ಮಾಡುತ್ತಿರುವುದು, ಮಲೆನಾಡಿನ ವಸತಿ ರಹಿತರಿಗೆ ನಿವೇಶನ ಹಂಚಲು ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿರುವುದು, ಇವಲ್ಲದೇ ಇನ್ನೂ ಅನೇಕ ರೀತಿಯ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲಾಗುವುದು.
ಕಾಫಿ ಉದ್ದಿಮೆ ಇಂದು ರಾಜ್ಯದ ಆರ್ಥಿಕ ಚಟುವಟಿಕೆಗೆ ಪ್ರಮುಖ ಕ್ಷೇತ್ರವಾಗಿದ್ದು, ಕಾಫಿ ತೋಟಗಳಲ್ಲಿ ರಾಜ್ಯ ಮತ್ತು ಹೊರರಾಜ್ಯದ ಲಕ್ಷಾಂತರ ಮಂದಿ ಉದ್ಯೋಗ ಕಂಡುಕೊಂಡಿದ್ದಾರೆ. ದೇಶದ ಬೊಕ್ಕಸಕ್ಕೆ ನೂರಾರು ಕೋಟಿ ಆದಾಯವನ್ನು ತಂದುಕೊಡುತ್ತಿದೆ. ಆದರೆ ಕಾಫಿ ಬೆಳೆಗಾರರಿಗೆ ಸರ್ಕಾರದ ಅನೇಕ ಕಾನೂನುಗಳು ಮಾರಕವಾಗಿ ಪರಿಣಮಿಸುತ್ತಿವೆ. ವಿಶೇಷವಾಗಿ ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಬೆಳೆಗಾರರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕಾಫಿ ಬೆಳೆಗಾರರ ಬಗ್ಗೆ ಸರ್ಕಾರ ತೋರುತ್ತಿರುವ ನಿರ್ಲಕ್ಷ್ಯ ಮನೋಭಾವನೆಯ ಬಗ್ಗೆ ಒಗ್ಗಟ್ಟಿನಿಂದ ಗಮನ ಸೆಳೆಯುವ ಸಂದರ್ಭ ಒದಗಿ ಬಂದಿದೆ.
ಈ ಎಲ್ಲ ಅಂಶಗಳನ್ನು ಚರ್ಚಿಸಿ ಮುಂದಿನ ಹೋರಾಟಕ್ಕೆ ಸ್ಪಷ್ಟವಾದ ದಿಕ್ಕನ್ನು ಸೂಚಿಸುವ ಸಲುವಾಗಿ ಈ ಬೃಹತ್ ಸಮಾವೇಶ ನಡೆಯಲಿದೆ. ಜೂನ್ 9 ರಂದು ಬೆಳಿಗ್ಗೆ ಚಿಕ್ಕಮಗಳೂರು ತಾಲ್ಲೂಕು ಕಛೇರಿ ಆವರಣದಿಂದ ಅಜಾದ್ ಪಾರ್ಕ್ ವರೆಗೆ ಮೆರವಣಿಗೆ ನಡೆಸಿ ಸಮಾವೇಶ ನಡೆಸಲಾಗುತ್ತಿದ್ದು,
ಸಮಾವೇಶದಲ್ಲಿ ಮುಖ್ಯ ಅತಿಥಿಗಳಾಗಿ ವಿಧಾನಪರಿಷತ್ ಉಪಸಭಾಪತಿಗಳಾದ ಎಂ.ಕೆ. ಪ್ರಾಣೇಶ್, ಸಂಸದರಾದ ಕೋಟಾ ಶ್ರೀನಿವಾಸ ಪೂಜಾರಿ, ಶಾಸಕರಾದ ಹೆಚ್.ಡಿ. ತಮ್ಮಯ್ಯ, ಟಿ.ಡಿ.ರಾಜೇಗೌಡ, ನಯನಾ ಮೋಟಮ್ಮ, ಜಿ.ಹೆಚ್. ಶ್ರೀನಿವಾಸ್, ಕೆ.ಎಸ್.ಆನಂದ್, ಸಿ.ಟಿ.ರವಿ, ಎಸ್.ಎಲ್. ಬೋಜೇಗೌಡ ಸೇರಿದಂತೆ ಅನೇಕ ಮಂದಿ ಜನಪ್ರತಿನಿಧಿಗಳು, ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಲಿದ್ದಾರೆ.
ಇದು ಮಲೆನಾಡಿನ ಸ್ವಾಭಿಮಾನಿ ರೈತ ಬೆಳೆಗಾರರ ಅಸ್ತಿತ್ವದ ಪ್ರಶ್ನೆಯಾಗಿದೆ. ಈ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಲು ಕಾಫಿನಾಡಿನ ಜನರು ಒಮ್ಮನಸ್ಸಿನಿಂದ ನಮ್ಮದೇ ಬದುಕಿನ ಉಳಿವಿಗಾಗಿ ಈ ರೈತ ಸಮಾವೇಶದಲ್ಲಿ ಅತೀ ಹೆಚ್ಚು ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಕೆ.ಜಿ.ಎಫ್. ಅಧ್ಯಕ್ಷ ಹಳಸೆ ಶಿವಣ್ಣ, ಕಾರ್ಯದರ್ಶಿ ಸುರೇಂದ್ರ ಮತ್ತು ಪದಾಧಿಕಾರಿಗಳು ಮನವಿ ಮಾಡಿದ್ದಾರೆ.