
ಜನವಸತಿ ಪ್ರದೇಶಕ್ಕೆ ಬಂದಿದ್ದ ಕಾಡುಬೆಕ್ಕು(ಕಬ್ಬೆಕ್ಕು) ಒಂದನ್ನು ರಕ್ಷಿಸಿ ಅರಣ್ಯ ಇಲಾಖೆಗೆ ಹಸ್ತಾಂತರಿಸಿದ ಘಟನೆ ಮೂಡಿಗೆರೆ ಪಟ್ಟಣದಲ್ಲಿ ನಡೆದಿದೆ. ಮೂಡಿಗೆರೆ ಪಟ್ಟಣದ ಸುಶಾಂತ್ ನಗರದ ಜನವಸತಿ ಪ್ರದೇಶಕ್ಕೆ ಬಂದಿದ್ದ ಕಾಡುಬೆಕ್ಕು ಒಂದರ ಮೇಲೆ ಬೀದಿನಾಯಿಗಳು ದಾಳಿ ಮಾಡುತ್ತಿದ್ದವು. ಬೀದಿನಾಯಿಗಳಿಂದ ತಪ್ಪಿಸಿಕೊಳ್ಳಲು ಬೆಕ್ಕು ಸುಶಾಂತ್ ನಗರದ ವಾಸಿ ಊರುಬಗೆ ಪ್ರವೀಣ್ ಅವರ ಮನೆಯ ಬಳಿ ಬಂದಿತ್ತು. ಅದನ್ನು ಗಮನಿಸಿದ ಪ್ರವೀಣ್ ಅವರ ಪತ್ನಿ ಸವಿತಾ ಹಾಗೂ ಸುಶಾಂತ್ ನಗರ ವಾಸಿ ಸುಧೀರ್ ಅವರು ಬೆಕ್ಕನ್ನು ನಾಯಿಗಳಿಂದ ರಕ್ಷಣೆ ಮಾಡಿದ್ದರು.
ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಮೂಡಿಗೆರೆ ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಗಾಯಗೊಂಡಿದ್ದ ಕಾಡುಬೆಕ್ಕನ್ನು ಸುರಕ್ಷಿತವಾಗಿ ಹಿಡಿದು ಪಶುವೈದ್ಯರಿಂದ ಚಿಕಿತ್ಸೆ ಕೊಡಿಸಿ ನಂತರ ಅರಣ್ಯಕ್ಕೆ ಬಿಟ್ಟಿರುತ್ತಾರೆ.
ಕಾಡುಬೆಕ್ಕನ್ನು ರಕ್ಷಣೆ ಮಾಡಿದ ಸ್ಥಳೀಯ ನಿವಾಸಿಗಳಿಗೆ ಅರಣ್ಯ ಸಿಬ್ಬಂದಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.