
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕಿನ ಬಲ್ಲಾಳರಾಯನ ದುರ್ಗಾ ಅರಣ್ಯದಲ್ಲಿ ಟ್ರಕ್ಕಿಂಗ್ ಗೆಂದು ಬಂದಿದ್ದ ಮೆಡಿಕಲ್ ಕಾಲೇಜಿನ 11 ವಿದ್ಯಾರ್ಥಿಗಳು ದಾರಿ ತಪ್ಪಿದ ಘಟನೆ ನಡೆದಿದೆ.
ಬಲ್ಲಾಳರಾಯನ ದುರ್ಗಾ ಕಾಡಲ್ಲಿ ದಾರಿ ತಪ್ಪಿ ನಿತ್ರಾಣಗೊಂಡಿದ್ದ 11 ವಿದ್ಯಾರ್ಥಿಗಳು ಕೊನೆಗೂ ಮಧ್ಯರಾತ್ರಿ ಪತ್ತೆಯಾಗಿದ್ದಾರೆ.
ಚಿತ್ರದುರ್ಗದ ಬಸವೇಶ್ವರ ಮೆಡಿಕಲ್ ಕಾಲೇಜಿನ 5 ಹುಡುಗರು, 5 ಹುಡುಗಿಯರು ಟ್ರಕ್ಕಿಂಗ್ ಬಂದಿದ್ದರು. ಬಲ್ಲಾಳರಾಯನ ದುರ್ಗಾ ಕಡೆಯಿಂದ ಟಿಕೆಟ್ ಬುಕ್ ಮಾಡಿ, ಬೆಳ್ತಂಗಡಿ ತಾಲ್ಲೂಕಿನ ಬಂಡಾಜೆ ಭಾಗದಿಂದ ಟ್ರಕ್ಕಿಂಗ್ ಆರಂಭಿಸಿದ್ದರು. ತಾವು ಬಂದಿದ್ದ ಟಿಟಿ ವಾಹನವನ್ನು ಕೊಟ್ಟಿಗೆಹಾರ ಬಾಳೂರು ಮಾರ್ಗವಾಗಿ ಬಲ್ಲಾಳರಾಯನದುರ್ಗ ಭಾಗಕ್ಕೆ ಹೋಗಿ ಕಾಯುತ್ತಿರುವಂತೆ ಹೇಳಿದ್ದರು. ಮಧ್ಯ ಕಾಡಿಗೆ ಬಂದಾಗ ದಾರಿ ತಿಳಿಯದೆ ಕಾಡಲ್ಲಿ ಅತಂತ್ರವಾಗಿ ನಿತ್ರಾಣ ಗೊಂಡಿದ್ದರು.
ಕ್ಷೀಣವಾಗಿದ್ದ ಮೊಬೈಲ್ ನೆಟ್ವರ್ಕ್ ನಿಂದ ಹೊರ ಪ್ರಪಂಚದ ಸಂಪರ್ಕ ಸಾಧ್ಯವಾಗಿರಲಿಲ್ಲ. ಕೊನೆಗೆ ಓರ್ವ ವಿದ್ಯಾರ್ಥಿಯ ಮೊಬೈಲ್ ಗೆ ಕೊಂಚ ನೆಟ್ವರ್ಕ್ ಸಿಕ್ಕಿ ಬೆಂಗಳೂರಿನ ತನ್ನ ಸ್ನೇಹಿತರಿಗೆ ಕರೆ ಮಾಡಿ ವಿಷಯ ಮುಟ್ಟಿಸಿದ್ದ. ಬೆಂಗಳೂರಿನ ವ್ಯಕ್ತಿ ಈ ಹಿಂದಿನ ಪರಿಚಯದ ಮೇರೆಗೆ ಬಣಕಲ್ ನ ಸಮಾಜ ಸೇವಕ ಆರೀಫ್ ಅವರಿಗೆ ಕರೆ ಮಾಡಿ ಮಾಹಿತ ನೀಡಿದ್ದ.
ನಂತರ ಪೊಲೀಸರು-ಸ್ಥಳಿಯರು-ಅರಣ್ಯ ಇಲಾಖೆ ಸಿಬ್ಬಂದಿ ಸತತ 6 ಗಂಟೆ ಹುಡುಕಾಟ ನಡೆಸಿ ಮಧ್ಯರಾತ್ರಿ ವಿದ್ಯಾರ್ಥಿಗಳನ್ನು ಪತ್ತೆ ಹಚ್ಚಿದ್ದಾರೆ.
ಬಾಳೂರು ಠಾಣಾಧಿಕಾರಿ ದಿಲೀಪ್ ಕುಮಾರ್ ಹಾಗೂ ಪೊಲೀಸರ ಜೊತೆ ಸ್ನೇಕ್ ಆರೀಫ್, ಮಧ್ಯರಾತ್ರಿ 2 ಗಂಟೆವರೆಗೂ ಶೋಧಿಸಿದ್ದಾರೆ.
ಕಾಡಲ್ಲಿ ಸಿಕ್ಕ ಅವರನ್ನ ಸುರಕ್ಷತವಾಗಿ ಕರೆ ತಂದು ವಾಪಸ್ ಕಳುಹಿಸಿದ್ದಾರೆ