
ಕಂದಾಯ, ಅರಣ್ಯ , ಡೀಮ್ಡ್, ಒತ್ತುವರಿ, ಭೂ ಮಂಜೂರಾತಿ ಸೇರಿದಂತೆ ರೈತ-ಅರಣ್ಯ ಇಲಾಖೆ ಸಂಘರ್ಷ ತಪ್ಪಿಸಿ ಮಲೆನಾಡಿನ ಜನಜೀವನ ಉಳಿಸುವಂತೆ ಆಗ್ರಹಿಸಿ ಜಿಲ್ಲಾ ನಾಗರೀಕ ಮತ್ತು ರೈತ ಹೋರಾಟ ಸಮಿತಿ, ಕರ್ನಾಟಕ ಬೆಳೆಗಾರರ ಒಕ್ಕೂಟ, ರೈತ ಹಿತರಕ್ಷಣಾ ವೇದಿಕೆ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಸೋಮವಾರ ಚಿಕ್ಕಮಗಳೂರಿನಲ್ಲಿ ಹಮ್ಮಿಕೊಂಡಿದ್ದ ಬೃಹತ್ ರೈತ ಸಮಾವೇಶದಲ್ಲಿ ಜಿಲ್ಲೆಯ ರೈತರ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಒಕ್ಕೊರಲ ಅಭಿಪ್ರಾಯ ವ್ಯಕ್ತವಾಯಿತು.
ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಸಿಪಿಐ, ಬಿಎಸ್ಪಿ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳು ಹಾಗೂ ವಿವಿಧ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಪಕ್ಷಾತೀತವಾಗಿ ಸಮಾವೇಶದಲ್ಲಿ ಭಾಗವಹಿಸಿದ್ದರು. ಕೊಪ್ಪ, ಶೃಂಗೇರಿ, ಮೂಡಿಗೆರೆ, ಚಿಕ್ಕಮಗಳೂರು, ಸಕಲೇಶಪುರ ತಾಲೂಕಿನಿಂದ ಸಹಸ್ರಾರು ಜನ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಹಸಿರು ಸಾಲು ಹೊದ್ದು ಮಹಿಳೆಯರು ಸೇರಿದಂತೆ ಸಹಸ್ರಾರು ರೈತರು ನಗರದ ಹನುಮಂತಪ್ಪ ವೃತ್ತದಿಂದ ಎಂಜಿ ರಸ್ತೆ ಮೂಲಕ ಆಜಾದ್ ಪಾರ್ಕ್ ವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಮಲೆನಾಡಿನ ರೈತರ ಸಮಸ್ಯೆಗಳ ಬಗ್ಗೆ ಹೋರಾಟ ಸಮಿತಿ ಅಧ್ಯಕ್ಷ ಎಸ್.ವಿಜಯ್‌ಕುಮಾರ್ ಪ್ರಾಸ್ತಾವಿಕ ಭಾಷಣದಲ್ಲಿ ಜಿಲ್ಲೆಯ ರೈತರ ಸುದೀರ್ಘ ಕಾಲದ ಸಮಸ್ಯೆಗಳನ್ನು, ಅವುಗಳನ್ನು ಬಗೆಹರಿಸಲು ಸರ್ಕಾರಗಳು ತೋರುತ್ತಿರುವ ನಿರ್ಲಕ್ಷ್ಯದ ಬಗ್ಗೆ ಮತ್ತು ರೈತ ಸಮಾವೇಶದಲ್ಲಿ ಪ್ರಮುಖವಾಗಿ ಪ್ರಸ್ತಾಪಿಸಿದ ಐದು ಬೇಡಿಕೆಗಳ ಬಗ್ಗೆ ಎಳೆಎಳೆಯಾಗಿ ಬಿಡಿಸಿಟ್ಟರು. ‘ಸೆಕ್ಷನ್ –4(ಪ್ರಸ್ತಾವಿತ ಅರಣ್ಯ), ಡೀಮ್ಡ್ (ಪರಿಭಾವಿತ) ಅರಣ್ಯ, ಜಿಲ್ಲಾಧಿಕಾರಿ ಘೋಷಿತ ಅರಣ್ಯದ ಹೆಸರಿನಲ್ಲಿ ರೈತರು ಪ್ರತಿನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ ಎಂದರು. ಈ ಎಲ್ಲಾ ಸಮಸ್ಯೆಗಳನ್ನು ಸರ್ಕಾರಕ್ಕೆ ತಲುಪಿಸಿ ಪರಿಹಾರ ಕಂಡುಕೊಳ್ಳುವ ಜವಾಬ್ದಾರಿ ಜಿಲ್ಲೆಯ ಜನಪ್ರತಿನಿಧಿಗಳ ಮೇಲಿದೆ. ಜಿಲ್ಲೆಯ ರೈತರ ಪರವಾಗಿ ಜನಪ್ರತಿನಿಧಿಗಳು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಮುಂದೆ ಧ್ವನಿ ಎತ್ತಬೇಕು’ ಎಂದು ಒತ್ತಾಯಿಸಿದರು.
ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ ಜಿಲ್ಲೆಯ ದೊಡ್ಡ ಬೆಳೆಗಾರರು ಭೂ ಒತ್ತುವರಿಗಾಗಿ ಹೋರಾಟ ಮಾಡುತ್ತಿದ್ದಾರೆ ಎಂಬುದು ರಾಜ್ಯ ಮಟ್ಟದ ಅಕಾರಿಗಳ ಧೋರಣೆಯಾಗಿದೆ. ಆದರೆ, ಇಲ್ಲಿ ಶೇ.90 ರಷ್ಟು ಸಣ್ಣ ಬೆಳೆಗಾರು 1-5 ಎಕರೆ ಸಾಗುವಳಿ ಮಾಡಿ ಹಕ್ಕುಪತ್ರಕ್ಕೆ ಕಾಯುತ್ತಿದ್ದಾರೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಅರಣ್ಯ ಸಚಿವರ ಸಮ್ಮುಖದಲ್ಲಿ 5 ಮಂದಿ ಜಿಲ್ಲೆಯ ಶಾಸಕರು ಸಭೆ ನಡೆಸಿದ್ದೇವೆ. ಅರಣ್ಯ ಕಾಯಿದೆಗೆ ತಿದ್ದುಪಡಿ ತರುವ ಬಗ್ಗೆ, 4(1) ಅಧಿಸೂಚನೆ ಪುನರ್ ಪರಿಶೀಲನೆ, ಎಫ್‌ಎಸ್‌ಒ ಗಳ ವರದಿ ಅಂತಿಮ, ಇದಕ್ಕೆ ಡಿಸಿಎಫ್ ಸಹಿ ಬೇಕು ಎಂಬುದನ್ನು ತೆಗೆದುಹಾಕಬೇಕು ಎಂದು ಒತ್ತಾಯಿಸಿದ್ದೇವೆ. ಎಫ್‌ಎಸ್‌ಒ ಗಳು ಸ್ಥಳ ಪರಿಶೀಲನೆ ಮಾಡುವಾಗ ಒತ್ತವರಿಯಾಗದೆ ಉಳಿದಿರುವ ಭೂಮಿಯನ್ನು ಎ ಬ್ಲಾಕ್ ಎಂತಲೂ, ಒತ್ತುವರಿಯಾಗಿ ಗೊಂದಲವಿರುವ ಭೂಮಿಯನ್ನು ಬಿ ಬ್ಲಾಕ್ ಎಂದು ಪರಿಗಣಿಸಿ ಈ ಬಗ್ಗೆ ಸುಪ್ರೀಂ ಕೋರ್ಟಿಗೆ ವರದಿ ನೀಡಬೇಕು ಎಂಬುದನ್ನು ಮನವರಿಕೆ ಮಾಡಿದ್ದೇವೆ ಎಂದರು.
ವಿಧಾನ ಪರಿಷತ್ ಉಪ ಸಭಾಪತಿ ಎಂ.ಕೆ.ಪ್ರಾಣೇಶ್ ಮಾತನಾಡಿ ಶಾಸಕಾಂಗ, ಕಾರ್ಯಾಂಗ ಇದ್ದಾಗ್ಯೂ ಎಲ್ಲದಕ್ಕೂ ನ್ಯಾಯಾಂಗದ ಮೇಲೆ ಬೊಟ್ಟು ಮಾಡುವ ಕೆಲಸ ನಡೆಯುತ್ತಿದೆ. ಶಾಸಕಾಂಗ ಹೇಳಿದ್ದನ್ನು ಕಾರ್ಯಾಂಗ ಮಾಡದಿರುವುದೇ ಸಮಸ್ಯೆಗಳಿಗೆ ಕಾರಣ ಎಂದರೆ ತಪ್ಪಲ್ಲ. ಒತ್ತುವರಿ ಭೂಮಿ ಗುತ್ತಿಗೆ ನೀಡುವ ಬಿಲ್ ಸದನದಲ್ಲಿ ಪಾಸ್ ಮಾಡಿದ್ದೇವೆ ಅದನ್ನು ಅನುಷ್ಠಾನ ಗೊಳಿಸುವ ಕೆಲಸ ಎಲ್ಲ ಶಾಸಕರ ಮೇಲಿದೆ. ಸದನದಲ್ಲಿ ಎಲ್ಲರೂ ಪಕ್ಷಾತೀತವಾಗಿ ಜಿಲ್ಲೆಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳೋಣ ಎಂದರು.
ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಮಾತನಾಡಿ ಕೆಂದ್ರಕ್ಕೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಕೇಂದ್ರ ಸಚಿವರ ಬಳಿ ನಿಯೋಗ ಕರೆದೊಯ್ದು ಚರ್ಚೆ ಮಾಡಿಸುತ್ತೇನೆ. ಸದ್ಯದಲ್ಲೇ ನಡೆಯಲಿರುವ ದಿಶಾ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗುವುದು ಎಂದು ಹೇಳಿದರು.
ಶಾಸಕ ಸಿ.ಟಿ.ರವಿ ಮಾತನಾಡಿ ನಮೂನೆ 57 ರಲ್ಲಿ ಕೃಷಿ ಜತೆಗೆ ತೋಟಗಾರಿಕೆ ಬೆಳೆಯ ಸಾಗುವಳಿಯನ್ನು ಸೇರಿಸಿ ತಿದ್ದುಪಡಿ ತಂದಲ್ಲಿ ಈಗಿರುವ ಸಮಸ್ಯೆ ಪರಿಹಾರವಾಗಲಿದೆ. ನಮೂನೆ 50-53 ರಲ್ಲಿ ಆಗಿರುವ ಅಕ್ರಮವನ್ನು ಜಿಲ್ಲಾಕಾರಿಗಳು ಕಾಲಮಿತಿಯಲ್ಲಿ ತನಿಖೆಮಾಡಿ ನ್ಯಾಯಯುತವಾದದನ್ನು ಮಂಜೂರು ಮಾಡಿ, ಅಕ್ರಮವಾದುದನ್ನು ರದ್ದುಪಡಿಸಬಹುದು.
ಡೀಮ್ಡ್ ಫಾರೆಸ್ಟ್ ಎಂಬ ಪರಿಕಲ್ಪನೆ ಒಪ್ಪುವಂತದಲ್ಲ, ಇದನ್ನು ಅರಣ್ಯ ಎಂದು ಪರಿಗಣಿಸುವಂತಿಲ್ಲಎಂದು ಹೈಕೋರ್ಟ್ ಹೇಳಿದೆ. ನ್ಯಾಯಾಲಯದ ಆದೇಶ ಇಟ್ಟುಕೊಂಡು ಈಗಿರುವ ಅಡೆತಡೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಎಫ್‌ಎಸ್‌ಒ ಗಳು ಅರೆ ನ್ಯಾಯಾಶರಾಗಿರುತ್ತಾರೆ. ಅವರ ವರದಿಯೇ ಅಂತಿಮವಾಗಬೇಕು. ಡಿಸಿಎಫ್ ಸಹಿ ಇರಬೇಕು ಎಂಬುದನ್ನು ರದ್ದುಪಡಿಸುವ ಬಗ್ಗೆ ಸದನದಲ್ಲಿ ಚರ್ಚೆ ನಡೆಸೋಣ ಎಂದರು
ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ ಅರಣ್ಯ ಕಾಯಿದೆಗಳನ್ನು ಮಲೆನಾಡಿನ ರೈತರ ಮೇಲೆ ಹೇರಲಾಗುತ್ತಿದೆ. ಮೂಲ ಸೌಕರ್ಯ ಮತ್ತಿತರೆ ಉದ್ದೇಶಕ್ಕೆ ಸಂವಿಧಾನಕ್ಕೆ ತಿದ್ದುಪಡಿ ತಂದಿರುವಾಗ ಅರಣ್ಯ ಕಾಯಿದೆಗೆ ಏಕೆ ತಿದ್ದುಪಡಿ ತರಬಾರದು ಎಂದು ಕೇಳಿದ್ದೇವೆ. ನಮೂನೆ 57 ರಲ್ಲಿ ಪ್ಲಾಂಟೇಶನ್ ಕೃಷಿಗೆ ಅವಕಾಶ ನೀಡದಿದ್ದರೆ ಲೀಸ್‌ಗಾದರೂ ನೀಡಬೇಕು ಎಂದು ಸಚಿವರಲ್ಲಿ ಒತ್ತಾಯಿಸಿದ್ದೇವೆ. ಮಲೆನಾಡಿನ ಡೀಮ್ಡ್ ಫಾರೆಸ್ಟ್ ಪ್ರಸ್ತಾಪ ವಾಪಸ್ಸು ಪಡೆಯಬೇಕು. ಅರಣ್ಯ ಮಂತ್ರಿಗಳು, ಮೇಲಾಕಾರಿಗಳ ಆದೇಶವನ್ನು ಜಿಲ್ಲೆಯ ಅರಣ್ಯ ಅಕಾರಿಗಳು ಪಾಲಿಸಬೇಕು ಇಲ್ಲದಿದ್ದರೆ ನಮ್ಮ ಹೋರಾಟ ಇದ್ದೇ ಇದೆ ಎಂದರು.
ಮೂಡಿಗೆರೆ ಶಾಸಕಿ ನಯನ ಮೋಟಮ್ಮ ಮಾತನಾಡಿ ಡೀಮ್ಡ್ ರೀ ಸರ್ವೆ ಮಾಡಬೇಕು. ನಮೂನೆ 50-53 ರ ಅರ್ಜಿ ವಿಚಾರದಲ್ಲಿ ದಾಖಲಾತಿ ಸರಿಯಿದ್ದರೆ ಅರ್ಜಿದಾರರ ಪರ ನಾನಿರುತ್ತೇನೆ ಅವರಿಗೆ ಹಕ್ಕುಪತ್ರ ಕೊಡಿಸುತ್ತೇನೆ.ಲೀಸ್ ಅರ್ಜಿ ಸಲ್ಲಿಸುವ ಅವ ವಿಸ್ತರಣೆಗೆ ಅರಣ್ಯ ಸಚಿವರಲ್ಲಿ ಮನವಿ ಮಾಡಿದ್ದೇವೆ, ಜಿಲ್ಲೆಯ ರೈತರ ಪರವಾಗಿ ಜಿಲ್ಲೆಯ ಶಾಸಕರೆಲ್ಲಾ ಸೇರಿ ಪಕ್ಷಾತೀತವಾಗಿ ಪ್ರಯತ್ನ ನಡೆಸುತ್ತೇವೆ ಎಂದರು.
ತರೀಕೆರೆ ಶಾಸಕ ಜಿ.ಎಚ್.ಶ್ರೀನಿವಾಸ್ ಮಾತನಾಡಿ, ಭದ್ರಾ ಮತ್ತು ತುಂಗಾ ಜಲಾಶಯದಲ್ಲಿ ನೆಲೆ ಕಳೆದುಕೊಂಡ ಸಂತ್ರಸ್ತರಿಗೆ ತರೀಕೆರೆ ತಾಲ್ಲೂಕಿನಲ್ಲಿ ಸರ್ಕಾರವೇ ಭೂಮಿ ನೀಡಿದೆ. ಈಗ ಆ ಜಾಗ ನಮಗೆ ಸೇರಿದ್ದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆ. 35–40 ವರ್ಷಗಳಿಂದ ಜೀವನ ನಡೆಸುತ್ತಿರುವ ರೈತರು ಈಗ ಎಲ್ಲಿಗೆ ಹೋಗಬೇಕು’ ಎಂದು ಪ್ರಶ್ನೆ ಮಾಡಿದರು.
ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಹಳಸೆ ಶಿವಣ್ಣ ಮಾತನಾಡಿ ; ಜಿಲ್ಲೆಯಲ್ಲಿ ಫಾ.ನಂ50 ಮತ್ತು 53ಯಲ್ಲಿ ಸರಕಾರವೇ ರೈತರಿಗೆ ಮಂಜೂರು ಮಾಡಿದ್ದ ಕೃಷಿ ಭೂಮಿಯನ್ನು ಕಿತ್ತುಕೊಂಡು ಸಣ್ಣ ರೈತರನ್ನು ಬೀದಿಗೆ ತರುವ ಕೆಲಸ ಮಾಡುತ್ತಿರುವುದು. ರೈತ – ಬೆಳೆಗಾರರ ಕೃಷಿ ಭೂಮಿಯನ್ನು ದಿಢೀರನೆ ಸೆಕ್ಷನ್ 4(1) ಅಡಿಯಲ್ಲಿ ತಂದಿದ್ದು, ಶತಮಾನಗಳಿಂದ ಸಾಗುವಳಿ ಮಾಡಿಕೊಂಡು ಬಂದ ಭೂಮಿಯನ್ನು “ಡೀಮ್ಡ್ ಫಾರೆಸ್ಟ್” ಹೆಸರಿನಲ್ಲಿ ದಾಖಲಿಸಿರುವುದು, ವನ್ಯಜೀವಿಗಳ ಹಾವಳಿ, ಪ್ಲಾಂಟೇಶನ್ ಬೆಳೆಗಾರರ ಅನಧಿಕೃತ ಸಾಗುವಳಿಯನ್ನ ಲೀಸ್ ಮೂಲಕ ನೀಡಲು ಪಡೆದ ಅರ್ಜಿಗಳ ವಿಲೇವಾರಿ ಮಾಡಲು ವಿಳಂಬ ಮಾಡುತ್ತಿರುವುದು, ಮಲೆನಾಡಿನ ವಸತಿ ರಹಿತರಿಗೆ ನಿವೇಶನ ಹಂಚಲು ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿರುವುದು, ನಗರ ಪ್ರದೇಶದ ಸುತ್ತ ಮಂಜೂರಾಗಿರುವ ಭೂಮಿಯನ್ನು ಪೋಡಿ ಮಾಡಲು ಸರ್ಕಾರದ ನಿಯಮಗಳು ಅಡ್ಡಿಯಾಗಿರುವುದು, ಇವಲ್ಲದೇ ಇನ್ನೂ ಅನೇಕ ರೀತಿಯ ಸಮಸ್ಯೆಗಳ ಬಗ್ಗೆ ಗಮನ ಸೆಳೆದರು.
ಮೂಡಿಗೆರೆ ಬೆಳೆಗಾರರ ಸಂಘದ ಬಿ.ಆರ್. ಬಾಲಕೃಷ್ಣ ನಿರೂಪಿಸಿದರು. ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ದೇವರುಂದ, ಮಾಜಿ ಸಚಿವ ಬಿ.ಬಿ.ನಿಂಗಯ್ಯ, ಶಾಸಕ ಎಂ.ಪಿ.ಕುಮಾರಸ್ವಾಮಿ, ಗಾಯತ್ರಿಶಾಂತೇಗೌಡ, ಜಗನ್ನಾಥ್ ಅತ್ತಿಕಟ್ಟೆ, ಎಚ್.ಎಚ್.ದೇವರಾಜ್, ಬಿ.ಕೆ. ಲಕ್ಷ್ಮಣಕುಮಾರ್, ಡಾ. ಡಿ.ಎಲ್. ವಿಜಯಕುಮಾರ್, ಡಾ. ಜೆ.ಪಿ.ಕೃಷ್ಣೇಗೌಡ, ಕೆ.ಟಿ. ರಾಧಕೃಷ್ಣ, ದೀಪಕ್ ದೊಡ್ಡಯ್ಯ, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ರಾಜಶೇಖರ್, ಕಲಾವತಿ ರಾಜಣ್ಣ, ಕೆಳವಳ್ಳಿ ಕಳಸಪ್ಪ, ಬ್ರಿಜೇಶ್ ಕಡಿದಾಳು ಸೇರಿದಂತೆ ವಿವಿಧ ರೈತ, ದಲಿತ, ಕನ್ನಡ ಪರ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.
ಚಿಕ್ಕಮಗಳೂರು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಯಶಪಾಲ್ ಕ್ಷೀರಸಾಗರ, ಡಿಸಿಎಫ್ ರಮೇಶ್‌ಬಾಬು, ನಂದೀಶ್ ಸ್ಥಳಕ್ಕೆ ಬಂದು ಬೆಳೆಗಾರರ ಮನವಿ ಸ್ವೀಕರಿಸಿದರು.