
ಅಖಿಲ ಭಾರತೀಯ ಸಾಹಿತ್ಯ ಪರಿಷದ್ ನಾಲ್ಕನೆಯ ರಾಜ್ಯ ಅಧಿವೇಶನ ಜೂನ್ 7 ಮತ್ತು 8ರಂದು ದಾವಣಗೆರೆಯಲ್ಲಿ ಯಶಸ್ವಿಯಾಗಿ ಸಂಪನ್ನಗೊಂಡಿದ್ದು ಜಿಲ್ಲೆಯ 72 ಪ್ರತಿನಿಧಿಗಳು ಪಾಲ್ಗೊಂಡಿದ್ದರು.
ದಾವಣಗೆರೆಯ ಗುಂಡಿಮಹಾದೇವಪ್ಪ ಕಲ್ಯಾಣ ಮಂದಿರದಲ್ಲಿ ಶನಿವಾರ ಮತ್ತು ಭಾನುವಾರ ಸಾಹಿತ್ಯದಲ್ಲಿ ‘ಸ್ವ’ತ್ವ ಕೇಂದ್ರೀಕೃತವಾಗಿ ನಡೆದ ರಾಜ್ಯ ಅಧಿವೇಶನದಲ್ಲಿ ಚಿಕ್ಕಮಗಳೂರು, ಶೃಂಗೇರಿ ಕೊಪ್ಪ, ನ.ರಾ.ಪುರ, ಕಡೂರು, ಬೀರೂರು, ತರೀಕೆರೆ ಮತ್ತು ಅಜ್ಜಂಪುರ ಸಮಿತಿ ಸದಸ್ಯರುಗಳು ಪಾಲ್ಗೊಂಡಿದ್ದರು. ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡಿರುವ ಕಡೂರಿನ ಹೊಸೂರುಪುಟ್ಟರಾಜು ಅವರನ್ನು ಗೌರವಿಸಲಾಯಿತು. ಕಾವ್ಯಗೋಷ್ಠಿಯಲ್ಲಿ ಶೃಂಗೇರಿಯ ಜಯಶ್ರೀಗಣೇಶ್ ಮತ್ತು ಕೊಪ್ಪದ ಕೆ.ಎಸ್.ನಾಗಭೂಷಣ ಕಾವ್ಯವಾಚನ ಮಾಡಿದರು.
ಸಮ್ಮೇಳನದ ಅಧ್ಯಕ್ಷತೆವಹಿಸಿದ್ದ ಎಸ್.ಜಿ.ಕೋಟೆ ಬಾಗಲಕೋಟೆ ಭಾರತೀಯ ಸಾಹಿತ್ಯದಲ್ಲಿ ‘ಸ್ವ’ ಅಂಶ ಹೆಚ್ಚಾಗಿ ವಿಜೃಂಭಿಸಬೇಕಾಗಿರುವುದು ಪ್ರಸ್ತುತದ ಅಗತ್ಯವೆಂದರು. ಖ್ಯಾತ ಅಂಕಣಕಾರ ಪ್ರೊ.ಪ್ರೇಮಶೇಖರ್ ಅಧಿವೇಶನ ಉದ್ಘಾಟಿಸಿ ಸಹನೆ, ಶಾಂತಿ, ಸಹಬಾಳ್ವೆ ಭಾರತದ ‘ಸ್ವ’ ತ್ವ ಅಂಶಗಳು. ಪಶ್ಚಿಮದಲ್ಲಿ ಕಲಹ-ಯುದ್ಧವೇ ಅವರ ‘ಸ್ವ’ತ್ವ ಎಂಬುದನ್ನು ಮನಗಾಣಬೇಕು. ಆದರೆ ನಮ್ಮ ನೀತಿ, ಆಲೋಚನೆ, ಮನೋಭಾವ, ಸ್ವಭಾವ, ಭೌಗೋಳಿಕ ಪ್ರದೇಶವೂ ಶಾಂತಿಯನ್ನೆ ಪ್ರತಿಪಾದಿಸಿದೆ. ಸಾಹಿತ್ಯ, ಕಲೆ, ಸಂಸ್ಕøತಿಯೂ ಇದಕ್ಕೆ ಹೊರತಲ್ಲ ಎಂಬುದನ್ನು ಗಟ್ಟಿಧ್ವನಿಯಲ್ಲಿ ಸಾರಬೇಕಾಗಿದೆ ಎಂದರು.
ಅಭಾಸಾಪ ರಾಜ್ಯ ಘಟಕ ಪ್ರಕಟಿಸಿರುವ ‘ಅವಲೋಕನ’ ಸೇರಿದಂತೆ ವಿಚಾರ ಪ್ರಚೋದಕ 4ಪುಸ್ತಕಗಳನ್ನು ಖ್ಯಾತ ಭಾಷಾವಿಜ್ಞಾನಿ ಡಾ.ಸಂಗಮೇಶ್ವರ ಸವದತ್ತಿಮಠ್ ಲೋಕಾರ್ಪಣೆಗೊಳಿಸಿ ಮಾತನಾಡಿ ಅಬ್ಬರ ಆಡಂಬರವಿಲ್ಲದ ಶುದ್ಧ ಸಾಹಿತ್ಯದ ಆರಾಧನೆ ಇಲ್ಲಿ ನಡೆದಿದೆ. ‘ಸ್ವ’ ತ್ವ ಕುರಿತಂತೆ ಪಾಶ್ಚತ್ಯದೇಶಗಳಲ್ಲಿ ಸಾಕಷ್ಟು ಚರ್ಚೆ ಆಗಿದ್ದರೂ ಭಾರತದಲ್ಲಿ-ಕನ್ನಡದಲ್ಲಿ ಕಡಿಮೆ. ‘ಸ್ವ’ ತ್ವ. ಕೇವಲ ಸ್ವಂತಿಕೆ-ಅಸ್ಮಿತೆ ಅಷ್ಟೇ ಅಲ್ಲ ಪ್ರತಿಯೊಬ್ಬರ ಜೀವನದ ಭಾಗವೆಂದರೆ ಸೂಕ್ತ ಎಂದರು.
ರೋಹಿತಚಕ್ರವರ್ತಿ ಸಮನ್ವಯಕಾರರಾಗಿ ‘ಸಾಹಿತ್ಯದಲ್ಲಿ ‘ಸ್ವತ್ವ ದ ಅಭಿವ್ಯಕ್ತಿ’ ಕುರಿತಂತೆ ಚರ್ಚಾಗೋಷ್ಠಿ ಅರ್ಥಪೂರ್ಣವಾಗಿ ನಡೆಯಿತು. ಪ್ರಜಾವಾಣಿ ಮುಖ್ಯಉಪಸಂಪಾದಕ ಸೂರ್ಯಪ್ರಕಾಶಪಂಡಿತ್ ಮತ್ತು ಸಾಹಿತಿ ಸಹನಾ ಮಾತುಗಳು ವಿಶೇಷವಾಗಿ ಗಮನ ಸೆಳೆದವು. ಸಾಹಿತ್ಯದ ಮುಖ್ಯಧಾತು ರಸವೇ ಹೊರತು ಸಿರಿವಂತಿಕೆ ಅಲ್ಲ. ವ್ಯಕ್ತಿಯನ್ನು ಅವರ ಕೃತಿಯ ಮೇಲೆ ಅಳೆಯಬೇಕು. ಪ್ರಮಾಣವಿಲ್ಲದೆ ಸ್ವ ಇಲ್ಲ ಎಂಬ ಅಂಶಗಳು ಧ್ವನಿಸಿದವು.
ಮುಸ್ಸಂಜೆಯಲ್ಲಿ ಚಕ್ರವರ್ತಿಸೂಲಿಬೆಲೆ ನೇತೃತ್ವದಲ್ಲಿ ‘ನಮ್ಮ ಕಟ್ಟೆ-ನಮ್ಮ ಮಾತು’ ನವಿರು ಹಾಸ್ಯದ ಕಾರ್ಯಕ್ರಮದಲ್ಲಿ ಎಂ.ಎಸ್.ನರಸಿಂಹಮೂರ್ತಿ ಮತ್ತು ವೈ.ಎನ್.ಗುಂಡೂರಾವ್ ಗಮನಸೆಳೆದರು. ರಾತ್ರಿ ಪ್ರತಿಭಾ ಅಭಿವ್ಯಕ್ತಿ ಜನಮನ ಆಕರ್ಷಿಸಿತು.
ಭಾನುವಾರ ಪೂರ್ವಾಹ್ನ ನಾಡಿನ ವಿವಿಧೆಡೆಯ ಕವಿಗಳ ಕಾವ್ಯಲಹರಿ ವಿಭಿನ್ನವಾಗಿ ಹರಿದಿದ್ದು ನಮ್ಮತನವನ್ನು ಧಾರಾಳವಾಗಿ ಬಿಂಬಿಸಿತು. ಧಾರವಾಡದ ದಿವಾಕರಹೆಗ್ಡೆ ಕೆರೆಹೊಂಡ ಕಾವ್ಯಗೋಷ್ಠಿಯನ್ನು ವಸ್ತುನಿಷ್ಟವಾಗಿ ಅವಲೋಕಿಸಿದರು.
ಬೆಂಗಳೂರಿನ ಸಾಹಿತಿ ಡಾ.ಜಿ.ಬಿ.ಹರೀಶ್ ಸಮಾರೋಪ ಭಾಷಣದಲ್ಲಿ ‘ಸಾಹಿತ್ಯಕ್ಕಿಂತ ವಿಮರ್ಶೆಯೆ ಪ್ರಧಾನವೆನಿಸಿರುವ ಪ್ರಸ್ತುತ ಸಂದರ್ಭವನ್ನು ಉಲ್ಲೇಖಿಸಿದರು. ಕಾಯುವಿಕೆ ಮತ್ತು ಮಾಗುವಿಕೆ ಸತ್ವದ ಮೊದಲ ಗುಣ. ಕಾರುಣ್ಯದ ದರ್ಶನ ಗಮನಿಸಬೇಕು. ನಮ್ಮ ನೆಲೆಯೆ ರಸದ ನೆಲೆ. ಸಾಹಿತ್ಯ ಮತ್ತು ದಾರ್ಶನಿಕ ಚಿಂತನೆ ನಮ್ಮದೆಂಬುದನ್ನು ಅರಿಯಬೇಕೆಂದರು.
ಅಧಿವೇಶನದ ಸರ್ವಾಧ್ಯಕ್ಷ ಎಸ್.ಜಿ.ಕೋಟೆ ಅಭಾಸಾಪ ಸದಸ್ಯತ್ವವನ್ನು ವಿಸ್ತರಿಸಿ ಪ್ರತಿ ಜಿಲ್ಲೆಯಲ್ಲೂ ಸಾವಿರ ಸದಸ್ಯರನ್ನು ನೊಂದಾಯಿಸುವ ಗುರಿ ಹೊಂದಬೇಕೆಂದರು. ಸ್ವಾಗತಿ ಸಮಿತಿ ಅಧ್ಯಕ್ಷರಾಗಿದ್ದ ದಾವಣಗೆರೆ ಜಿಲ್ಲಾ ಕ.ಸಾ.ಪ.ಅಧ್ಯಕ್ಷ ವಾಮದೇವಪ್ಪ ಅಭಾರಮನ್ನಿಸಿ ಮಾತನಾಡಿ ಕಸಾಪ ಸಮ್ಮೇಳನಗಳು ಜಾತ್ರೆಯೊಪಾದಿಯಲ್ಲಿ ನಡೆಯುತ್ತವೆ. ಇಲ್ಲಿ ಸಮಾಜಕ್ಕೆ ಉಪಯುಕ್ತವಾಗುವಂತೆ ಶುದ್ಧ ಸಾಹಿತ್ಯದ ಚಿಂತನೆಗಳು ನಡೆದಿವೆ ಎಂದು ಅಭಿಪ್ರಾಯಿಸಿದರು.
ಅ.ಭಾ.ಸಾ.ಪ ರಾಷ್ಟ್ರೀಯ ಸಂಯುಕ್ತ ಪ್ರಧಾನಕಾರ್ಯದರ್ಶಿ ಲಕ್ನೋನದ ಪವನಪುತ್ರ ಬಾದಲ್ ನೂತನ ರಾಜ್ಯ ಸಮಿತಿ ಘೋಷಿಸಿದರು. ರಾಷ್ಟ್ರೀಯ ಪ್ರತಿನಿಧಿ ನವದೆಹಲಿಯ ಸುಶೀಲಕುಮಾರ್ ತ್ರಿವೇದಿ, ರಾಜ್ಯ ಸಂಘಟನಾ ಕಾರ್ಯದರ್ಶಿ ರಘುನಂದನಭಟ್ ಮತ್ತಿತರರು ಸಂಘಟನೆ ನಡೆದುಬಂದ ಹಾದಿ ಕ್ರಮಿಸಬೇಕಾದ ಗುರಿ ಕುರಿತಂತೆ ಮಾತನಾಡಿದರು.
25ಕ್ಕೂ ಹೆಚ್ಚು ಜಿಲ್ಲೆಗಳಿಂದ 800ಪ್ರತಿನಿಧಿಗಳು ಪಾಲ್ಗೊಂಡಿದ್ದ ರಾಜ್ಯ ಅಧಿವೇಶನ ಶುದ್ಧ ಸಾಹಿತ್ಯ ಚಿಂತನೆಗೆ ಮಾದರಿಯಾಗಿತ್ತು. ಸರ್ಕಾರದ ಅನುದಾನ ಪಡೆಯದೆ, ಓಓಡಿ ಸೌಲಭ್ಯವನ್ನೂ ಬಳಸದೆ ವೇದಿಕೆಯಲ್ಲಿ ಯಾವುದೇ ರಾಜಕಾರಣಿ ಅಥವಾ ಮಠಾಧಿಪತಿಗಳು ಇಲ್ಲದೆ ಸತ್ವಯುತ ಸಾಹಿತ್ಯ ಕುರಿತಂತೆ ಚಿಂತನೆಗೆ ಮೀಸಲಾಗಿತ್ತೆಂದು ವಿಭಾಗೀಯ ಸಂಯೋಜಕ ಪ್ರಭುಲಿಂಗಶಾಸ್ತ್ರಿ ತಿಳಿಸಿದ್ದಾರೆ.
ಚಿತ್ರ: ದಾವಣಗೆರೆ ಅಧಿವೇಶನದಲ್ಲಿ ಪಾಲ್ಗೊಂಡಿದ್ದ ಜಿಲ್ಲೆಯ ಪ್ರಮುಖ ಪ್ರತಿನಿಧಿಗಳನ್ನು ವೇದಿಕೆಯಲ್ಲಿ ಗುರುತಿಸಲಾಯಿತು. ಅಭಾಸಾಪ ರಾಷ್ಟ್ರೀಯ ಪ್ರತಿನಿಧಿ ಸುಶೀಲಕುಮಾರ ತ್ರಿವೇದಿ, ರಾಜ್ಯಅಧ್ಯಕ್ಷ ಎಸ್.ಜಿ.ಕೋಟೆ, ಪ್ರಧಾನಕಾರ್ಯದರ್ಶಿ ರಘುನಂದನಭಟ್, ಶೃಂಗೇರಿ ವಿಭಾಗಿಯ ಸಂಚಾಲಕ ಪ್ರಭುಲಿಂಗಶಾಸ್ತ್ರಿ, ಜಿಲ್ಲಾ ಸಹಕಾರ್ಯದರ್ಶಿ ಸಂಪತಕುಮಾರ್, ವಿಶ್ರಾಂತ ಡಿಡಿಪಿಐ ನಿಂಗಪ್ಪ, ಡಾ.ಸುಲೋಚನಾ ಶಿವಾನಂದಯ್ಯ ಮತ್ತಿತರರು ಚಿತ್ರದಲ್ಲಿದ್ದಾರೆ.
ವರದಿ : ಪ್ರಭುಲಿಂಗಶಾಸ್ತ್ರಿ