
ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಇತ್ತೀಚೆಗೆ ಕಳಸ ನ್ಯಾಯಾಲಯದ ಆವರಣದಲ್ಲಿ ವನ ಮಹೋತ್ಸವ ಕಾರ್ಯಕ್ರಮ ಆಚರಿಸಲಾಯಿತು.
ಕಳಸ ಅರಣ್ಯ ಇಲಾಖೆಯ ಸಹಯೋಗದಲ್ಲಿ ಮಾನ್ಯ ಜೆ ಎಂ ಎಫ್ ಸಿ ನ್ಯಾಯಾಧೀಶೆ ಕಾವ್ಯ ಇವರು ಗಿಡ ನೆಡುವುದರ ಮೂಲಕ ಕಾರ್ಯಕ್ರಮ ನೆರವೇರಿಸಿದರು. ಇವರೊಂದಿಗೆ ಹಿರಿಯ ವಕೀಲರು, ವಲಯ ಅರಣ್ಯಾಧಿಕಾರಿ ನಿಶ್ಚಿತ್, ಶಿಕ್ಷಕರು, ವಿದ್ಯಾರ್ಥಿಗಳು, ಅರಣ್ಯ ಮತ್ತು ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಪಾಲ್ಗೊಂಡಿದ್ದರು.
ಆನಂತರ ಕಳಸ ಕೆ.ಪಿ.ಎಸ್ ಶಾಲೆ ಪ್ರೌಢಶಾಲಾ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ನೆಲ್ಲಿ, ಹಲಸು, ಮಾವು, ಪುನಾರ್ಪುಳಿ, ಮುಂತಾದ ಹಣ್ಣಿನ ಗಿಡಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಉಪ ವಲಯ ಅರಣ್ಯಾಧಿಕಾರಿಗಳಾದ ಹರೀಶ್. N.R. ಹಾಗೂ ವೆಂಕಟೇಶ್ ಮಾತನಾಡಿ ವನಮಹೋತ್ಸವದ ಉದ್ದೇಶ ಮತ್ತು ಪ್ರಸ್ತುತ ದಿನಗಳಲ್ಲಿ ಪರಿಸರ ಸಂರಕ್ಷಣೆಯ ಪ್ರಾಮುಖ್ಯತೆಯ ಬಗ್ಗೆ ಅರಿವು ಮೂಡಿಸಿದರು.
ಶಿಕ್ಷಕ ಲೋಕೇಶ್ ಸತೀಶ್ , ಪರಿಸರಕ್ಕೆ ಮಾರಕವಾದ ಪ್ಲಾಸ್ಟಿಕ್ ಬಳಸದಂತೆ ಕರೆ ನೀಡಿದರು.
ಸುಧೀರ್ ಅಬ್ಬುಗುಡಿಗೆ ಮಾತನಾಡಿ, ಪರಿಸರಕ್ಕೆ ಸೂಕ್ತವಲ್ಲದ ಅಕೇಶಿಯಾ ತೆರವಿನ ನಂತರ ಆ ಜಾಗದಲ್ಲಿ ಹಣ್ಣಿನ ಗಿಡಗಳನ್ನೇ ನೆಡಲು ಮತ್ತು ಅಂತಹ ಗಿಡಗಳನ್ನೇ ವಿತರಿಸಲು ಅರಣ್ಯ ಇಲಾಖೆಯು ಮುಂದಾಗಿರುವುದು ಉತ್ತಮ ಕಾರ್ಯವೆಂದರು.
ಶಿಕ್ಷಕರಾದ ಶೃಂಗೇಶ್ವರ್, ಸಂದೇಶ್, ಲೋಕೇಶ್, ಸತೀಶ್, ಸ್ಥಳೀಯರಾದ ರಾಮಚಂದ್ರ ಹೆಬ್ಬಾರ್, ಸುಧೀರ್ ಅಬ್ಬುಗುಡಿಗೆ, ಅರಣ್ಯ ಇಲಾಖೆಯ ಸಿಬ್ಬಂದಿಗಳು, ಎಲ್ಲಾ ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.