November 8, 2025

 

 

ಯೋಗ ಎಂಬಾ ಎರಡು ಅಕ್ಷರಗಳನ್ನು ಅರ್ಥೈಸಿಕೊಳ್ಳುವುದು ಅಷ್ಟೊಂದು ಸುಲಭವಲ್ಲ. ಯೋಗ ಶಬ್ದಕ್ಕೆ ವಿಶೇಷವಾದ ಹಾಗೂ ವಿಶಾಲವಾದ ಅರ್ಥವಿದೆ. ಅದನ್ನು ಅಮೂಲಾಗ್ರವಾಗಿ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಬಹುದು. ಯೋಗವು ಸಂಸ್ಕೃತದ ಮೂಲ ಧಾತುವಾದ ‘ಯುಜ್’ ಎಂಬುದರಿಂದ ವ್ಯುತ್ಪನವಾಗಿದೆ.  ಇದಕ್ಕೆ ಆಂಗ್ಲ ಭಾಷೆಯಲ್ಲಿ Yoke  ಎಂದು ಕರೆಯುತ್ತಾರೆ ಯುಜ್ ಎಂದರೆ ಬಂಧನ, ಸಮ್ಮಿಲನ, ಕೂಡುವಿಕೆ, ಸಂಬಂಧ, ಎಂಬ ಇತ್ಯಾದಿ ಅರ್ಥಗಳಿವೆ.  ಯೋ=ಯೋಗ್ಯವಾದದ್ದನ್ನು, ಗ= ಗಮನವಿಟ್ಟು ಮಾಡುವುದು . ಒಟ್ಟಾರೆಯಾಗಿ ಯೋಗ ಎಂದರೆ ಮಾನಸಿಕ ಹಾಗೂ ಶಾರೀರಿಕ ಪರಿಶುದ್ಧತೆಗೆ ಯೋಗ.
ಇಂದಿನ ಜಾಗತೀಕರಣ ಪ್ರಭಾವದಿಂದ ಮನುಷ್ಯ ಇಂದು ಅಪಾರ ಒತ್ತಡಕ್ಕೆ ಸಿಲುಕಿ ಮಾನಸಿಕ ಮತ್ತು ದೈಹಿಕವಾಗಿ ಕುಬ್ಜನಾಗುತ್ತಿದ್ದಾನೆ. ನೆಮ್ಮದಿ, ಶಾಂತಿ, ತಾಳ್ಮೆ ಮನುಷ್ಯನ ಬದುಕಿನಿಂದ ದೂರ ಸರಿದು ಪುಸ್ತಕಗಳಲ್ಲಿ ಮಾತ್ರ ಕಂಡು ಬರುವ ಪದಗಳಾಗಿವೆ. ಆಧುನಿಕತೆ ನಾಗರಿಕತೆ ಯಂತ್ರ ತಂತ್ರಗಾರಿಕೆ ಗಟ್ಟಿಯಾಗುತ್ತಿದೆ. ವಿಜ್ಞಾನ ಬೆಳೆಯುತ್ತಿದೆ ಅನೇಕ ರೀತಿಯ ಹೊಸ ಆವಿಷ್ಕಾರಗಳು ಹೆಚ್ಚಾಗುತ್ತಿವೆ. ಹೊಸ ರೀತಿಯ ಸಂಶೋಧನೆಗಳು ನಡೆಯುತ್ತಿದೆ. ಅನೇಕ ವಿದ್ವಾಂಸರು, ವೈದ್ಯರು ಪ್ರಸಿದ್ಧಿಯನ್ನು ಪಡೆದಿದ್ದಾರೆ. ಆದರೆ  ಅನೇಕ ರೀತಿಯ ಕಾಯಿಲೆಗಳಿಗೆ ಮಾನವ ಬಲಿಯಾಗುತ್ತಿದ್ದಾನೆ. ದಿನೇ ದಿನೇ ರೋಗಗಳು ಹೊಸ ರೀತಿಯ ತಿರುವನ್ನು ಪಡೆಯುತ್ತಿದೆ. ಕಾರಣ ಹತ್ತು ಹಲವಾರು.
ನಾವು ದಾರಿಯಲ್ಲಿ ನಡೆದುಕೊಂಡು ಹೋಗುತ್ತಿರುವ ಸಂದರ್ಭದಲ್ಲಿ ಮಾರು ಮಾರಿಗೂ ಬೇಕರಿಗಳನ್ನು ಕಾಣುತ್ತೇವೆ. ಹಾಗೇ ಒಂದೆರಡು ಹೆಜ್ಜೆಯನ್ನು ಹಾಕಿದ ತಕ್ಷಣ ಬಾರ್ ರೆಸ್ಟೋರೆಂಟ್ ಗಳನ್ನು ಕಾಣಬಹುದು. ಮತ್ತೆರಡು ಹೆಜ್ಜೆ ಹಾಕಿದ ತಕ್ಷಣ ಮೆಡಿಕಲ್ ಸ್ಟೋರ್ ಗಳು ತಲೆಯೆತ್ತಿವೆ. ಏಕೆ ಹೀಗೆ? ಒಂದಕ್ಕೊಂದು ಹೆಣೆದು ಕೊಂಡಿವೆ ಎಂದು ಯೋಚಿಸಿದಾಗ ಮಾನವ ಇಂದು ತನ್ನ ಜೀವನ ವ್ಯಾಪ್ತಿಯನ್ನು ಮೀರಿ ಜೀವಿಸಲು ಹೊರಟಿದ್ದಾನೆ. ಜಾಗತೀಕರಣದ ಪರಿಣಾಮವಾಗಿ ಅನೇಕ ರೀತಿಯ ಸಂಬಂಧಗಳನ್ನು ದೂರ ಮಾಡಿ ಯಾಂತ್ರಿಕವಾಗಿ ಬದುಕಲು ಪ್ರಾರಂಭಿಸಿದ್ದಾನೆ. ಭಾಷೆ, ರೀತಿ, ನೀತಿ ಮುಖ್ಯವಾಗಿ ಆಹಾರ ಪದ್ಧತಿಯಲ್ಲಿ ವಿದೇಶಿ ಆಹಾರವನ್ನು ಸೇವಿಸಲು ಹಾತೊರೆಯುತ್ತಿದ್ದಾನೆ. ಬೇಕರಿ ತಿಂಡಿಗಳನ್ನು ಇಷ್ಟಪಡುತ್ತಿದ್ದಾರೆ.
ಪ್ರಾಚೀನ ಕಾಲದಲ್ಲಿ ಆರೋಗ್ಯ ಬಹಳ ಚೆನ್ನಾಗಿತ್ತು ನಮ್ಮ ಅಜ್ಜ ಅಜ್ಜಿ 100 ವರ್ಷಕ್ಕಿಂತ ಹೆಚ್ಚು ವರ್ಷ ಬದುಕುತ್ತಿದ್ದರು. ಅವರ ಆರೋಗ್ಯದ ಗುಟ್ಟು ಶುದ್ಧವಾದ ಗಾಳಿ, ಸಮತೋಲನ ಆಹಾರ, ಸೊಪ್ಪು ತರಕಾರಿಗಳನ್ನು ಹೆಚ್ಚು ಸೇವಿಸುತ್ತಿದ್ದರು, ಅಲ್ಲದೆ ಮೈಮುರಿದು ಕಷ್ಟಪಟ್ಟು ಕೆಲಸ ನಿರ್ವಹಿಸುತ್ತಿದ್ದರು. ಆದರೆ ಇಂದಿನ ಆಧುನಿಕ ಜಗತ್ತಿನಲ್ಲಿ ಹೆಚ್ಚಿನ ಜನ ಮೋಜು-ಮಸ್ತಿಯಲ್ಲೇ ಕಾಲ ಕಳೆಯುತ್ತಿದ್ದಾರೆ. ಒಂದು ವರ್ಗ ತಿನ್ನಲಿಕ್ಕಾಗಿ ಹುಟ್ಟಿದ್ದೇವೆ ಎಂಬ ಮನಸ್ಥಿತಿಯವರು ಇದ್ದರೆ ಕೆಲವರು ಒಂದು ಹೊತ್ತು ಊಟಕ್ಕೂ ಕಷ್ಟ ಪಡುವ ಜನರನ್ನು ಕಾಣಬಹುದು. ಇಂತಹ ಸಮುದಾಯದವರು ಅನೇಕ ರೀತಿಯ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಹಳೇಯ ಮೌಲ್ಯಗಳು  ತಿರಸ್ಕೃತಗೊಂಡು ಹೊಸ ಮೌಲ್ಯಗಳು ರೂಪುಗೊಂಡಿರುವ ಅತಂತ್ರ ಸ್ಥಿತಿಯಲ್ಲಿದ್ದಾರೆ. ಮೂಲ ಬೇರನ್ನು ಕಂಡುಕೊಂಡಾಗ ಆಧುನಿಕ ಸಮಾಜದಲ್ಲಿ ಸಾಮರಸ್ಯ ಸ್ಥಾಪನೆ ಸಾಧ್ಯವಾಗುತ್ತದೆ. ಇದುವರೆಗೆ ಕಾಣೆಯಾಗಿದ್ದ ಮನಶಾಂತಿಯನ್ನು ಪಡೆದುಕೊಳ್ಳಲು ನೆರವಾಗುತ್ತದೆ.
ಆದರೆ ಇಂದು ಯೋಗ ಶಿಕ್ಷಣ ಧಾರ್ಮಿಕರಣಗೊಂಡಿದೆ. ಯೋಗ ಶಿಕ್ಷಣ ಪದ್ಧತಿ ಎಂದರೆ ಹಿಂದೂ ಧರ್ಮದ ಭಾಗವೆಂದೇ ಬಿಂಬಿಸಲಾಗುತ್ತಿದೆ. ಯೋಗ ಎಂಬ ವೈಜ್ಞಾನಿಕ ಶಿಕ್ಷಣ ಪದ್ಧತಿಯನ್ನು ಧಾರ್ಮಿಕಕರಣಗೊಳಿಸಿ, ಮೌಢ್ಯವನ್ನು ಬಿತ್ತಲಾಗುತ್ತಿದೆ.  ಜೊತೆಗೆ ಯೋಗ ಶಿಕ್ಷಣ ವ್ಯಾಪಾರೀಕರಣಗೊಂಡಿದೆ. ಯೋಗಾ ಅಭ್ಯಾಸದಿಂದ ಬಹುಜನರು ದೂರ ಇರುವಂತೆ ಧರ್ಮದ ಬಣ್ಣ ಬಳಿಯಲಾಗಿದೆ. ಇದು ಭಾರತದ ದೊಡ್ಡ ದುರಂತವೇ ಸರಿ. ಆದರೆ ಭಾರತದ ಯೋಗ ಪದ್ಧತಿಯನ್ನು ವಿಶ್ವದ ಅನೇಕ ರಾಷ್ಟ್ರಗಳು ಒಪ್ಪಿಕೊಂಡು ದಿನಂಪ್ರತಿ ಯೋಗಾಭ್ಯಾಸ ಮಾಡುತ್ತಾ, ಅನೇಕ ಕಾಯಿಲೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳುತ್ತಿದ್ದಾರೆ. ವಿಶ್ವಸಂಸ್ಥೆಯ ಘೋಷಣೆಯಂತೆ ಜೂನ್ 21 ನ್ನು ವಿಶ್ವ ಯೋಗ ದಿನವೆಂದು ಆಚರಿಸುತ್ತಿದ್ದಾರೆ. ಕಾರಣ ಯೋಗ ಪದ್ಧತಿ ಯಿಂದ ಆರೋಗ್ಯದ ಸಮಸ್ಯೆಗಳಿಗೆ ಪರಿಹಾರ ದೊರೆಯುವ ಕಾರಣದಿಂದಾಗಿ.
ಯೋಗ ಎಂದರೆ  ಕೇವಾಲ ಅಂಗ ಸಾಧನೆಯಲ್ಲ. ಜಗತ್ತಿನಲ್ಲಿ ದುಡಿಯುವ ಪ್ರತಿಯೊಬ್ಬ ಶ್ರಮಜೀವಿಯು ಕಾಯಕ ಯೋಗಿಯೇ.  ರಾಷ್ಟ್ರಕವಿ ಕುವೆಂಪುರವರು ತಮ್ಮ ಬರಹದ ಸಾಲಿನಲ್ಲಿ ನೇಗಿಲು ಹಿಡಿದು ಹೊಲದೊಳು ಆಡುತ್ತಾ ಉಳುವ “ಯೋಗಿ” ಯ ನೋಡಲ್ಲಿ ಎಂದಿದ್ದಾರೆ. ಕಾಯಕ ಮಾಡುವ ಪ್ರತಿಯೊಂದು ಶ್ರಮಜೀವಿಯು ಕಾಯಕ ಯೋಗಿಯೇ ಎಂಬುದು ಇದರ ಅರ್ಥ. ಯೋಗ ಪದ್ಧತಿಯಲ್ಲಿರುವ ಅಷ್ಟಾಂಗ ಮಾರ್ಗಗಳಾದ ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ,  ಧ್ಯಾನ, ಸಮಾಧಿ ಈ ಎಂಟು ಅಂಗಗಳನ್ನು ಶ್ರದ್ಧೆಯಿಂದ ಯಾರು ಪಾಲಿಸುತ್ತಾರೋ ಅವರೇ ನಿಜವಾದ ಯೋಗಿಗಳು. ಈ ದೃಷ್ಟಿಯಿಂದ ಯೋಗವೆಂದರೆ, ಕೇವಲ ಅಂಗ ಸಾಧನೆ ಅಲ್ಲ, ಇದು ಹೊಸ ಜೀವನ ವಿಧಾನವನ್ನು ರೂಪಿಸಿಕೊಳ್ಳಲು ನೆರವಾಗುವ ಪದ್ಧತಿಯಾಗಿದೆ. ಮಾನಸಿಕ ಹಾಗೂ ದೈಹಿಕ  ಕ್ಷೇಮಗಳೆರಡೂ ಇದರಿಂದ ಸಾಧಿತವಾಗುತ್ತದೆ. ಅದಕ್ಕೆ ಇದನ್ನು ಬೌದ್ಧಿಕವಾಗಿ ವಿವರಿಸುವುದು ಕಷ್ಟ. ಅಭ್ಯಾಸದ ಮತ್ತು ಅನುಭವಗಳ ಮೂಲಕವೇ ಇದರ ಅರಿವನ್ನು ಪಡೆದುಕೊಳ್ಳಬೇಕು ಆದ್ದರಿಂದ “ಯೋಗ ಆರೋಗ್ಯ ಶಿಕ್ಷಣ ಪದ್ಧತಿಯೇ ಹೊರತು, ಧಾರ್ಮಿಕ ಶಿಕ್ಷಣ ಪದ್ಧತಿ ಯಲ್ಲ”.
                              ✍️ ಹರೀಶ್ ನಲ್ಕೆ M.A .P.G.D.in YOGA (P.h.d)   ಯೋಗ ತರಬೇತುದಾರರು

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ