
ಮೂಡಿಗೆರೆ ಪಟ್ಟಣ ಪತ್ರಿಕಾ ಸಂಘದ ಕಚೇರಿಯಲ್ಲಿ ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಸನ್ನಕುಮಾರ್ ಅಧ್ಯಕ್ಷತೆಯಲ್ಲಿ ಶುಕ್ರವಾರ ಸಂಜೆ ತೋಟಗಾರಿಕೆ ಇಲಾಖೆಯೊಂದಿಗೆ ತಿಂಗಳ ಬೆಳಕು ಮಾಹಿತಿ ಮತ್ತು ಚರ್ಚೆ ಕಾರ್ಯಕ್ರಮ ನಡೆಯಿತು.
ಸಭೆಯಲ್ಲಿ ರೈತ ಮುಖಂಡರು ಹಾಗೂ ಕೃಷಿಕರು ಸಭೆಯಲ್ಲಿ ಅಡಕೆ ಎಲೆಚುಕ್ಕಿ ರೋಗ, ತಾಳೆಬೆಳೆ, ಬೆಳೆ ವಿಮೆ, ಜೇನು ಸಾಕಾಣಿಕೆ, ಕಾಳುಮೆಣಸು, ಸೇರಿದಂತೆ ವಿವಿಧ ತೋಟಗಾರಿಕೆ ಬೆಳೆಗಳ ಬಗ್ಗೆ ಗಂಭೀರ ಚರ್ಚೆ ನಡೆಸಿದರು.
ಬಳಿಕ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕಿ ಎ.ಬಿ.ಶ್ವೇತಾ ಮಾತನಾಡಿ, ಮೂಡಿಗೆರೆ ಮತ್ತು ಕಳಸ ತಾಲೂಕು ವ್ಯಾಪ್ತಿಯಲ್ಲಿ ತೋಟಗಾರಿಕೆ ಬೆಳೆಗಳ ವಿಸ್ತೀರ್ಣ 31038 ಹೆಕ್ಟೇರ್ ಇದೆ. 13902 ಹೆಕ್ಟೇರ್ ಪ್ರದೇಶದಲ್ಲಿ ಅಡಕೆ, 17376 ಹೆಕ್ಟೇರ್ ನಲ್ಲಿ ಕಾಳು ಮೆಣಸು ಬೆಳೆಯಲಾಗುತ್ತಿದೆ. ರಾಜ್ಯದಲ್ಲಿಯೇ ಮೂಡಿಗೆರೆ ಮತ್ತು ಕಳಸ ತಾಲೂಕಿನಲ್ಲಿ ಅಧಿಕವಾಗಿ ಅಡಕೆ ಎಲೆ ಚುಕ್ಕಿ ರೋಗ ಕಾಣಿಸಿಕೊಂಡಿದೆ. ಹಾಗಾಗಿ ಎಲೆಚುಕ್ಕಿ ರೋಗಕ್ಕಾಗಿ ರಾಜ್ಯ ಮತ್ತು ಕೇಂದ್ರ ಸರಕಾರದಿಂದ ಅನುದಾನ ಒದಗಿಸಲಾಗಿದೆ. ರೈತರು ಎಲೆಚುಕ್ಕಿ ರೋಗ ನಿವಾರಣೆಗಾಗಿ 1 ಹೆಕ್ಟೇರ್‍ಗೆ 1500 ಯಿಂದ 3000 ರೂ ವರೆಗೆ ಸಹಾಯಧನ ನೀಡುವ ಅವಕಾಶವಿದೆ. ಇದಕ್ಕೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಹೇಳಿದರು.
2025-26ನೇ ಸಾಲಿನಲ್ಲಿ ತಾಳೆ ಬೆಳೆ ಬೆಳೆಯಲು ಸರಕಾರ ಸೌಲಭ್ಯ ಒದಗಿಸಿದೆ. ಹಾಗಾಗಿ ಪಾಳು ಬಿಟ್ಟಿರುವ ಭತ್ತದ ಗದ್ದೆಯಲ್ಲಿ ರೈತರು ತಾಳೆ ಬೆಳೆ ಬೆಳೆಯಬಹುದು. 4 ವರ್ಷದವರೆಗೆ ಬೆಳೆ ನಿರ್ವಹಣೆಗೆ ಸಹಾಯಧನ ನೀಡಲಾಗುತ್ತದೆ. ಅಲ್ಲದೇ ಅಂತರ್ ಬೆಳೆ, ಬೋರ್‍ವೆಲ್, ಎರೆಹುಳು ತೊಟ್ಟಿ, ಡೀಸೆಲ್ ಪಂಪ್‍ಸೆಟ್‍ಗೆ ಸಹಾಯಧನವಿದೆ. ಕಾಳುಮೆಣಸು ಹಾಗೂ ಅಡಕೆ ಬೆಳೆಗೆ ರೈತರು ಹನಿ ನೀರಾವರಿ ಮಾಡಿಕೊಂಡರೆ 12 ವರ್ಷ ಸಹಾಯಧನ ನೀಡುವ ಅವಕಾಶವಿದೆ. ಕೃಷಿ ಯಾಂತ್ರೀಕರಣ ಯೋಜನೆಯಡಿಯಲ್ಲಿ ಕೃಷಿಗೆ ಬಳಸುವ ಯಂತ್ರಗಳಿಗೆ ಜನರಲ್‍ಗೆ ಶೇ.40, ಎಸ್ಸೀ ಎಸ್ಟಿ ಮತ್ತು ಮಹಿಳಾ ಫಲಾನುಭವಿಗಳಿಗೆ ಶೇ.50 ಸಬ್ಸಿಡಿ ದೊರೆಯುತ್ತದೆ. ರೈತರು ಯಂತ್ರಗಳನ್ನು ಕೊಂಡುಕೊಂಡು ಅದರ ದಾಖಲೆ ನೀಡಿದರೆ ರೈತರಿಗೆ ಖಾತೆಗೆ ನೇರವಾಗಿ ಸಬ್ಸಿಡಿ ಹಣ ಬರುತ್ತದೆ. ಇದಕ್ಕೆ ಈಗಾಗಲೇ ಅರ್ಜಿ ಆಹ್ವಾನಿಸಿದ್ದು, ಜು.8 ಕ್ಕೆ ಕೊನೆ ದಿನವಾಗಿದೆ ಎಂದು ಹೇಳಿದರು.
ಹವಾಮಾನ ಆಧಾರಿತ ಬೆಳೆವಿಮೆಗೆ ಕಳೆದ ನಾಲ್ಕೈದು ವರ್ಷದಿಂದ ನಮ್ಮ ತಾಲೂಕಿನಲ್ಲಿ ಅತೀ ಹೆಚ್ಚು ನೊಂದಣಿ ಮಾಡಿಸಿಕೊಳ್ಳುತ್ತಿದ್ದಾರೆ. ಈ ವರ್ಷವೂ ಜೂ.24ರಿಂದ ನೊಂದಣಿ ಪ್ರಾರಂಭಗೊಂಡಿದ್ದು, ಜುಳೈ 31 ಕೊನೆ ದಿನವಾಗಿದೆ. ಅಡಕೆಗೆ ವಿಮೆ ಮೊತ್ತ ಪ್ರತಿ ಎಕರೆಗೆ 51200 ರೂ, ಇದಕ್ಕೆ ವಿಮಾ ಕಂತು 2560ರೂ ಕಟ್ಟಬೇಕು. ಕಾಳುಮೆಣಸು ವಿಮೆ ಮೊತ್ತ ಪ್ರತಿ ಎಕರೆಗೆ ರೂ. 18800, ವಿಮ ಮೊತ್ತವಿದ್ದು, ಇದಕ್ಕೆ ವಿಮಾ ಕಂತು ಎಕರೆಗೆ 940ರೂ ಕಟ್ಟಬೇಕು. ತಾಲೂಕಿನಲ್ಲಿ ಅತಿಯಾದ ಮಳೆಯಿಂದಾಗಿ ಈ ಸೌಲಭ್ಯ ಪಡೆದರೆ ರೈತರಿಗೆ ಅನುಕೂಲವಾಗುತ್ತದೆ. ಉದ್ಯೋಗ ಖಾತ್ರಿ ಯೋಜನೆಯಿಂದ ಕಾಳು ಮೆಣಸು, ಅಡಕೆಗೆ ಸಣ್ಣ, ಅತೀ ಸಣ್ಣ ರೈತರು ಹಾಗೂ ಬಿಪಿಎಲ್ ಕಾರ್ಡ್ ಫಲಾನುಭವಿಗಳಿಗೆ ಸೌಲಭ್ಯ ನೀಡಲಾಗುತ್ತಿದೆ. ಇದರಲ್ಲಿ ಸಾಕಷ್ಟು ಸಣ್ಣ ರೈತರು ಪ್ರಯೋಜನ ಪಡೆಯುತ್ತಿದ್ದಾರೆ ಇನ್ನೂ ಹೆಚ್ಚಿನ ರೈತರು ಈ ಸೌಲಭ್ಯ ಪಡೆಯಬೇಕೆಂದು ಹೇಳಿದರು.
ತೋಟಗಾರಿಕಾ ಇಲಾಖೆಯ ಅಧಿಕಾರಿ ರಾಮಯ್ಯ, ರೈತ ಸಂಘದ ಮುಖಂಡ ಎಸ್.ಪಿ.ರಾಜು, ಕೃಷಿಕರಾದ ಕೆ.ಎಚ್.ವೆಂಕಟೇಶ್, ಗಿರೀಶ್ ಹೆಸಗಲ್, ರವಿ ಬಡವನದಿಣ್ಣೆ, ಗಿರೀಶ್ ಚಕ್ಕುಡಿಗೆ ಸೇರಿದಂತೆ ಪತ್ರಕರ್ತರು ಉಪಸ್ಥಿತರಿದ್ದರು.
Don’t allow oil palm cultivation. It will spoil the soil health and environment