
ಚಿಕ್ಕಮಗಳೂರು ಜಿಲ್ಲಾ ಪದವಿ ಪೂರ್ವ ಕಾಲೇಜು ಕಬ್ಬಡಿ ಪಂದ್ಯಾವಳಿಯ ಬಾಲಕರ ವಿಭಾಗದಲ್ಲಿ ಕಡೂರು ಸರ್ಕಾರಿ ಪ.ಪೂ.ತಂಡ ಮತ್ತು ಬಾಲಕಿಯರ ವಿಭಾಗದಲ್ಲಿ ಮೂಡಿಗೆರೆ ಸರ್ಕಾರಿ ಬಾಲಕಿಯರ ಪ.ಪೂ.ಕಾಲೇಜು ತಂಡ ಪ್ರಥಮಸ್ಥಾನ ಗಳಿಸಿದೆ.
ಚಿಕ್ಕಮಗಳೂರು ಎಸ್‍ಟಿಜೆ ಮಹಿಳಾ ಪದವಿಪೂರ್ವ ಕಾಲೇಜು ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲಾ ಮಟ್ಟದ ಕಬ್ಬಡಿ ಪಂದ್ಯಾವಳಿಗೆ ಎಸ್‍ಟಿಜೆ ಮಹಿಳಾ ಕಾಲೇಜು ಪ್ರಾಂಶುಪಾಲರುಗಳಾದ ಪ್ರೊ.ಭಾರತಿ ಮತ್ತು ಶಿವನಗೌಡ ಚಾಲನೆ ನೀಡಿದರು. ಎಂಟು ತಾಲ್ಲೂಕುಗಳಿಂದ ಬಾಲಕ ಹಾಗೂ ಬಾಲಕಿಯರ ವಿಭಾಗದ ಒಟ್ಟು 16ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು.
ಕಬ್ಬಡಿ ಪಂದ್ಯಾವಳಿಯ ಸಂಯೋಜಕ ಎಸ್‍ಟಿಜೆ ಮಹಿಳಾ ಪ.ಪೂ.ಕಾಲೇಜು ದೈಹಿಕ ಶಿಕ್ಷಣ ಉಪನ್ಯಾಸಕ ವೆಂಕಟೇಶ್ ನೇತೃತ್ವದಲ್ಲಿ ಬೆಳಗ್ಗೆ ಆರಂಭಗೊಂಡ ಪಂದ್ಯವನ್ನು ವೀಕ್ಷಿಸಲು ಕಿಕ್ಕಿರಿದ ಜನಸಂದಣಿ ಏರ್ಪಟ್ಟಿತ್ತು. ಆರಂಭಿಕ ಬಾಲಕರ ವಿಭಾಗದ ಪಂದ್ಯ ಕೊಪ್ಪ ಮತ್ತು ಮೂಡಿಗೆರೆ ನಡುವೆ ಬಿರುಸಿನಿಂದ ಎರಡೂ ಪಂದ್ಯಗಳಲ್ಲೂ ಟೈಆಗಿದ್ದು ಪ್ರೇಕ್ಷಕರ ಆಸಕ್ತಿ ಹೆಚ್ಚಿಸಿತ್ತು. ಬಾಲಕಿಯರ ವಿಭಾಗದಲ್ಲಿ ಅತಿಥೇಯ ಎಸ್‍ಟಿಜೆ ತಂಡ ಕಣಕ್ಕಿಳಿದಾಗ ಹರ್ಷೋದ್ಘಾರ ಮುಗಿಲು ಮುಟ್ಟುತ್ತಿತ್ತು. ಮೂಡಿಗೆರೆ ತಂಡವನ್ನು ಪ್ರತಿನಿಧಿಸಿದ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲೂ ಪಾಲ್ಗೊಂಡಿದ್ದ ಸೋದರಿಯರು ಗಮನಸೆಳೆದರು.
ಬಾಲಕಿಯರ ವಿಭಾಗದಲ್ಲಿ ಮೂಡಿಗೆರೆ ಜಿಜೆಸಿ 40 ಅಂಕಗಳನ್ನು ಗಳಿಸಿದ್ದು 20ಅಂಕಗಳ ಅಂತರದಲ್ಲಿ ಅತಿಥೇಯ ಎಸ್‍ಟಿಜೆ ಮಹಿಳಾ ಪ.ಪೂ. ತಂಡವನ್ನು ದ್ವಿತೀಯ ಸ್ಥಾನಕ್ಕೆ ಸೀಮಿತಗೊಳಿಸಿತು.
ವಿಭಾಗದಲ್ಲಿ ಕಡೂರು ಜಿಜೆಸಿ 15ಅಂಕಗಳಿಸುವ ಮೂಲಕ ವಿನ್ನರ್ ಆದರೆ, 10ಅಂಕಗಳಿಸಿದ ಮೂಡಿಗೆರೆ ಜಿಜೆಸಿ ತಂಡ ರನ್ನರ್ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು.
ಅಂತಿಮ ಉಪಪಂದ್ಯದ ಬಾಲಕರ ವಿಭಾಗದಲ್ಲಿ ಕಡೂರು ಮತ್ತು ತರೀಕೆರೆ ತಂಡ ತೀವ್ರ ಪೈಪೋಟಿಯ ನಡುವೆ ಸೆಣಸಿದ್ದು ಕಡೂರು ತಂಡ ಅಂತಿಮಸುತ್ತಿನ ಪ್ರವೇಶ ಪಡೆದು ಅಲ್ಲೂ ಅಗ್ರಸ್ಥಾನಕ್ಕೆ ಪಾತ್ರವಾಯಿತು. ಮೂಡಿಗೆರೆ ಮತ್ತು ಎನ್.ಆರ್.ಪುರ ತಾಲ್ಲೂಕು ತಂಡಗಳ ನಡುವೆ ಸ್ಪರ್ಧೆಯಲ್ಲಿ ಮೂಡಿಗೆರೆ ತಂಡ ಮುನ್ನಡೆ ಸಾಧಿಸಿತು.
ಬಾಲಕಿಯರ ವಿಭಾಗದ ಅಂತಿಮ ಉಪಪಂದ್ಯದಲ್ಲಿ ಎಸ್‍ಟಿಜೆ ಮತ್ತು ಕಡೂರು ತಂಡಗಳು ಸೆಣಸಿದ್ದು, ಎಸ್‍ಟಿಜೆ ತಂಡ ವಿಜೇತರಾಗಿ ಅಂತಿಮಸುತ್ತಿಗೆ ಆಯ್ಕೆಯಾದರು. ಅದೇ ರೀತಿ ಮೂಡಿಗೆರೆ ಮತ್ತು ಅಜ್ಜಂಪುರ ತಂಡಗಳ ನಡುವೆ ಪೈಪೋಟಿ ಏರ್ಪಟ್ಟಿದ್ದು ಮೂಡಿಗೆರೆ ತಂಡ ಸುಲಭ ಜಯಸಾಧಿಸಿ ಅಂತಿಮ ಪಂದ್ಯಾವಳಿಗೆ ಪ್ರವೇಶ ಪಡೆದು ಅಲ್ಲೂ ಪ್ರಥಮಸ್ಥಾನ ತನ್ನದಾಗಿಸಿಕೊಂಡಿತು.
ಸಂಜೆ ಜಿಲ್ಲಾ ಆಟದ ಮೈದಾನದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಜಿಲ್ಲಾ ಕಬ್ಬಡಿ ಅಸೋಸಿಯೇಷನ್ ಅಧ್ಯಕ್ಷ ಕುಮಾರೇಗೌಡ, ಮೂಗ್ತಿಹಳ್ಳಿ ಸರ್ಕಾರಿ ಪ.ಪೂ.ಕಾಲೇಜು ಪ್ರಾಂಶುಪಾಲ ಶಿವಕುಮಾರ್ ಮತ್ತು ಮೂಡಿಗೆರೆ ಪ.ಪೂ.ಕಾಲೇಜು ಪ್ರಾಂಶುಪಾಲ ಪೂರ್ಣೇಶ್ ಬಹುಮಾನ ವಿತರಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ತಂಡವನ್ನು ರಚಿಸಿದ್ದು ಬಾಲಕಿಯರ ವಿಭಾಗದಲ್ಲಿ ಅರ್ಪಿತಾ, ಅಂಕಿತಾ, ಕವನ, ರಜಿನಿ, ಹಂಸಾ, ಸಾನಿಕಾ, ದೀಕ್ಷಾ, ಕಾವ್ಯ, ತನುಶ್ರೀ, ಚಂದನಾ, ರಚನಾ ಮತ್ತು ದೀಪಿಕಾ ಮತ್ತು
ಬಾಲಕರ ವಿಭಾಗದಲ್ಲಿ ದೀಪಕ್, ತರುಣ್, ರಕ್ಷಿತ್, ದಿಲೀಪ್, ಯಶವಂತ, ರಾಕೇಶ್, ಯೋಗೀಶ್, ಧನುಷ್, ಜೀವನ್, ಉಮೇಶ್, ವರ್ಷಿತ್ ಮತ್ತು ಅನುದೀಪ್ ಆಯ್ಕೆಗೊಂಡಿದ್ದಾರೆಂದು ಕ್ರೀಡಾಕೂಟದ ಸಂಯೋಜಕ ವೆಂಕಟೇಶ್ ತಿಳಿಸಿದ್ದಾರೆ.
ವರದಿ ; ಪ್ರಭುಲಿಂಗಶಾಸ್ತ್ರಿ, ಚಿಕ್ಕಮಗಳೂರು