ಟಿಎಪಿಸಿಎಂಎಸ್ ಚುನಾವಣೆಯಲ್ಲಿ ರೈತರ ಅಭಿವೃದ್ಧಿಗಾಗಿ ಶ್ರಮಿಸುವ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘದ ಮತ್ತು ಗ್ರೀನ್ ಆರ್ಮಿ ಇಂಡಿಯಾದ ಜಿಲ್ಲಾ ಕಾರ್ಯಾಧ್ಯಕ್ಷ ಬಿ.ಸಿ.ದಯಾಕರ್ ಮನವಿ ಮಾಡಿದರು.
ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರೈತರ ಹಿತ ಹಾಗೂ ಅಭಿವೃದ್ಧಿಗಾಗಿ ಹಿಂದೆ ಹಿರಿಯರು ಟಿಎಪಿಸಿಎಂಎಸ್ ಸಂಸ್ಥೆ ಹುಟ್ಟುಹಾಕಿದ್ದು, ದೊಡ್ಡ ಮಟ್ಟದಲ್ಲಿ ಕಟ್ಟಿ ಬೆಳೆಸಲಾಗಿದೆ. ಅಂತಹ ಸಂಸ್ಥೆಯಲ್ಲಿ 2013ರಲ್ಲಿ ನಕಲಿ ರಸಗೊಬ್ಬರ ಹಗರಣ ಹಾಗೂ ವಿವಿಧ ಕಾಮಗಾರಿಯಲ್ಲಿ ಅವ್ಯವಹಾರ ನಡೆಸಿರುವುದು ಕೂಡ ರೈತರಿಗೆ ತಿಳಿಯದ ವಿಚಾರವಲ್ಲ. ಸಂಸ್ಥೆಯನ್ನು ರಾಜಕೀಯ ಹಾಗೂ ಅಧಿಕಾರಕ್ಕಾಗಿ ಬಳಸಿಕೊಳ್ಳುವವರನ್ನು ಚುನಾವಣೆಯಲ್ಲಿ ಗೆಲ್ಲಿಸಬಾರದು.
ಜತೆಗೆ ಯಾವುದೇ ಆಮಿಷಕ್ಕೆ ಒಳಗಾಗದೆ ಉತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕೆಂದು ಮನವಿ ಮಾಡಿದರು.
ಜಿಲ್ಲಾ ಉಪಾಧ್ಯಕ್ಷ ಪಿ.ಕೆ.ನಾಗೇಶ್‍ಗೌಡ ಮಾತನಾಡಿ, 2013ರಲ್ಲಿ ಟಿಎಪಿಸಿಎಂಎಸ್ ಸಂಸ್ಥೆಯಿಂದ ವಿತರಿಸಿದ ಗೋಕುಲ, ಕಾಮಧೇನು ಮತ್ತು ಗುದ್ದಲಿ ಮಿಕ್ಸ್ಚರ್ ರಸಗೊಬ್ಬರ ಗುಣಮಟ್ಟ ಕಡಿಮೆ ಇದ್ದ ಬಗ್ಗೆ ಲ್ಯಾಬ್‍ನಲ್ಲಿ ಪರೀಕ್ಷೆಗೆ ಸಾಬೀತಾಗಿತ್ತು. ಇದನ್ನು ಅಂದಿನ ಆಡಳಿತ ಮಂಡಳಿ ಮುಚ್ಚಿಹಾಕುವ ಪ್ರಯತ್ನ ನಡೆಸಿತ್ತು. ಅಲ್ಲದೇ ಅನೇಕ ಕಾಮಗಾರಿ ಕಳಪೆಯಾಗಿದ್ದರಿಂದ ಈ ವಿಚಾರದ ಬಗ್ಗೆ ಎಂ.ಎಂ.ಲಕ್ಷ್ಮಣ್‍ಗೌಡ ಅವರನ್ನು ದೋಷಿ ಎಂದು ಯಾರೂ ಹೇಳಿರಲಿಲ್ಲ. ಬದಲಾಗಿ ನಿರ್ಮಿತಿ ಕೇಂದ್ರ ಮತ್ತು ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಲು ರೈತರು ಆಗ್ರಹಿಸಿದ್ದರು ಆದರೆ ಈಗ ಲಕ್ಷ್ಮಣ್‍ಗೌಡ ಅವರು ತಾನು ನಿರ್ದೋಷಿ ಎಂದು ಹೇಳಿಕೊಳ್ಳುತ್ತಿರುವುದು ಹಾಸ್ವಾಸ್ಪಧವಾಗಿದೆ. ಟಿಎಪಿಸಿಎಂಎಸ್ ಉತ್ತಮ ಆಡಳಿತಕ್ಕೆ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕೆಂದು ಮನವಿ ಮಾಡಿದರು.
ಜಿಲ್ಲಾ ಸಂಚಾಲಕ ಬಿ.ಆರ್.ಸುಧೀರ್, ತಾಲೂಕು ಸಂಚಾಲಕ ಡಿ.ಬಿ.ಜಯಪಾಲ್ ಉಪಸ್ಥಿತರಿದ್ದರು.



