ವಿದ್ಯುತ್ ಸ್ಪರ್ಶದಿಂದ ಮೂರು ಹಸುಗಳು ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.
ಚಿಕ್ಕಮಗಳೂರು ತಾಲ್ಲೂಕಿನ ಕೆಳಮಲ್ಲಂದೂರು ಗ್ರಾಮದಲ್ಲಿ ಮಂಗಳವಾರ ಈ ದುರ್ಘಟನೆ ನಡೆದಿದೆ.
ಕೆಳಮಲ್ಲಂದೂರು ಗ್ರಾಮದ ಕೃಷಿಕ ಸಿ.ಎಸ್. ಗೋಪಾಲಗೌಡ ಎಂಬುವವರಿಗೆ ಸೇರಿದ ಮೂರು ಜರ್ಸಿ ಹಸಗಳು ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿವೆ.
ವಿದ್ಯುತ್ ತಂತಿ ತುಂಡಾಗಿ ಬಿದ್ದಿದ್ದರಿಂದ ಆಕಸ್ಮಿಕ ವಿದ್ಯುತ್ ತಗುಲಿ ಹಸುಗಳು ಅಸುನೀಗಿವೆ ಎಂದು ಹೇಳಲಾಗುತ್ತಿದೆ. ಘಟನೆ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.
ಕುಟುಂಬಕ್ಕೆ ಆರ್ಥಿಕ ಆಧಾರಸ್ತಂಭವಾಗಿದ್ದ ಮೂರು ಹಸುಗಳು ಏಕಕಾಲದಲ್ಲಿ ಸಾವನ್ನಪ್ಪಿದ್ದು, ಸುಮಾರು 2 ಲಕ್ಷಕ್ಕೂ ಅಧಿಕ ನಷ್ಟವುಂಟಾಗಿದೆ. ಪ್ರೀತಿಯಿಂದ ಸಾಕಿ ಸಲಹಿದ್ದ ಹಸುಗಳು ಸಾವನ್ನಪ್ಪಿರುವುದರಿಂದ ರೈತ ಗೋಪಾಲಗೌಡ ಕುಟುಂಬದವರು ಕಂಗಾಲಾಗಿದ್ದಾರೆ.
ಸ್ಥಳಕ್ಕೆ ಮೆಸ್ಕಾಂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರೈತರಿಗೆ ಆಗಿರುವ ನಷ್ಟಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.



