ನಾಯಿದಾಳಿಯಿಂದ ಜಿಂಕೆಯೊಂದು ಸಾವನ್ನಪ್ಪಿದ ಘಟನೆ ನಡೆದಿದೆ. ಮೂಡಿಗೆರೆ ತಾಲ್ಲೂಕಿನ ಬಣಕಲ್ ಹೋಬಳಿಯ ಮತ್ತಿಕಟ್ಟೆ ಸಮೀಪ ಬುಧವಾರ ಈ ಘಟನೆ ನಡೆದಿದೆ. ನಾಯಿ ಅಟ್ಟಾಡಿಸಿದ ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದ ಜಿಂಕೆಯನ್ನು ರಕ್ಷಿಸಲು ನಡೆಸಿದ ಪ್ರಯತ್ನ ವಿಫಲವಾಗಿದೆ.
ತೀವ್ರ ಗಾಯಗೊಂಡಿದ್ದ ಜಿಂಕೆಯನ್ನು ಸಮಾಜಸೇವಕ ಅರೀಫ್ ಬಣಕಲ್ ಅವರ ನೇತೃತ್ವದಲ್ಲಿ ಗ್ರಾಮಸ್ಥರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿಗಳು ಸುರಕ್ಷಿತವಾಗಿ ಹಿಡಿದು ಪಶು ಚಿಕಿತ್ಸಾಲಯಕ್ಕೆ ಕರೆತಂದರು. ಪಶು ವೈದ್ಯರು ತುರ್ತು ಚಿಕಿತ್ಸೆ ನೀಡಿದರೂ, ಜಿಂಕೆಯ ಗಾಯಗಳು ಗಂಭೀರವಾಗಿದ್ದರಿಂದ ಅದು ಪ್ರಾಣ ಉಳಿಸಿಕೊಳ್ಳಲಿಲ್ಲ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.



