ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರ ಗ್ರಾಮದ ಸುತ್ತಮುತ್ತ ಕಾಡಾನೆ ಹಾವಳಿ ಮಿತಿಮೀರಿದೆ. ನಿರಂತರವಾಗಿ ರೈತರ ತೋಟಗಳಿಗೆ ಲಗ್ಗೆ ಇಡುತ್ತಿರುವ ಕಾಡಾನೆ ಅಪಾರ ಪ್ರಮಾಣದ ಬೆಳೆನಷ್ಟ ಉಂಟುಮಾಡುತ್ತಿದೆ.
ಕೊಟ್ಟಿಗೆಹಾರದ ರೈತ ರಿಚರ್ಡ್ ಲೋಬೊ ಹಾಗೂ ಸುತ್ತಮುತ್ತಲಿನ ರೈತರ ತೋಟಗಳಿಗೆ ಕಳೆದ ಕೆಲವು ದಿನಗಳಿಂದ ಕಾಡಾನೆಗಳು ಹಗಲು-ರಾತ್ರಿ ದಾಳಿ ನಡೆಸುತ್ತಿವೆ. ಮಂಗಳವಾರ ರಾತ್ರಿ ಬಂದು ತೋಟದಲ್ಲಿದ್ದ ಅಡಿಕೆ, ಕಾಫಿ ಹಾಗೂ ಏಲಕ್ಕಿ ಗಿಡಗಳನ್ನು ಪುಡಿ ಮಾಡಿದ್ದು, ಅಪಾರ ಮೌಲ್ಯದ ಬೆಳೆ ನಾಶವಾಗಿದೆ. ವರ್ಷಪೂರ್ತಿ ಶ್ರಮಿಸಿ ಬೆಳೆ ಬೆಳೆದ ರೈತರು ಇದೀಗ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಆನೆ ದಾಳಿಯಿಂದ ಹಲವಾರು ಗಿಡಗಳು ನೆಲಸಮವಾಗಿದ್ದು, ತೋಟದ ಭಾಗಶಃ ಬೇಲಿ ಹಾನಿಗೊಳಗಾಗಿದೆ . ಸ್ಥಳೀಯರು ಹಾಗೂ ರೈತರು ಕಾಡಾನೆಗಳ ಅಟ್ಟಹಾಸದಿಂದ ಭಯಭೀತರಾಗಿದ್ದು, ರಾತ್ರಿ ನಿದ್ರೆ ಕಳೆದುಕೊಂಡಿದ್ದಾರೆ.
ಗ್ರಾಮಸ್ಥರು ಅರಣ್ಯ ಇಲಾಖೆಯು ತಕ್ಷಣ ಕ್ರಮ ಕೈಗೊಂಡು ಕಾಡಾನೆ ತೊಲಗಿಸಲು ಮತ್ತು ರೈತನಿಗೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ.



