ಮೂಡಿಗೆರೆ ತಾಲ್ಲೂಕಿನ ಗೋಣಿಬೀಡು ಸಮೀಪದ ಜಿ.ಹೊಸಳ್ಳಿ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಕಾಡಾನೆ ಹಾವಳಿ ಮಿತಿಮೀರಿದೆ.
ಗುಂಪು ಗುಂಪಾಗಿ ಗ್ರಾಮಕ್ಕೆ ಲಗ್ಗೆ ಇಡುತ್ತಿರುವ ಕಾಡಾನೆಗಳಿಂದ ಊರಿನ ಜನರು ಜೀವಭಯದಲ್ಲಿ ಬದುಕು ಸಾಗಿಸುತ್ತಿದ್ದಾರೆ. ಅಪಾರ ಬೆಳೆನಷ್ಟ ಅನುಭವಿಸುತ್ತಿದ್ದಾರೆ.
ಜಿ.ಹೂಸಳ್ಳಿ ಗ್ರಾಮಕ್ಕೆ ಕಳೆದ 3 ದಿನದ ಹಿಂದೆ 11 ಕಾಡಾನೆಗಳು ಗುಂಪಾಗಿ ನುಗ್ಗಿ ಕಾಫಿ ತೋಟ, ಭತ್ತದ ಗದ್ದೆಗಳನ್ನು ಧ್ವಂಸಗೊಳಿಸಿವೆ. ಗ್ರಾಮಸ್ಥರು, ವಿದ್ಯಾರ್ಥಿಗಳು” ಮನೆಯಿಂದ ಹೊರಬರಲಾಗದೆ ಜೀವಭಯದಿಂದ ಮನೆಯಲ್ಲಿ ಇದ್ದಾರೆ.
ಜಿ.ಹೊಸಳ್ಳಿ ಗ್ರಾಮದ ನಾಗರಾಜ್, ದೀಪಕ್, ಚಂದ್ರಿಕಾ, ಮಂಜುನಾಥ್, ಸತ್ಯನಾರಾಯಣ ಮತ್ತು ಕೃಷ್ಣಮೂರ್ತಿ ಎಂಬುವವರ ಕಾಫಿ ತೋಟದಲ್ಲಿ ಫಸಲಿಗೆ ಬಂದಿರುವ ಅಡಿಕೆ, ಕಾಳುಮೆಣಸು, ಮತ್ತಿತರ ಗಿಡಗಳನ್ನು ನಾಶಪಡಿಸಿವೆ. ಒಮ್ಮೆಲೆ 11 ಕಾಡಾನೆ ಹಿಂಡು ಗ್ರಾಮದ ಭತ್ತದ ಗದ್ದೆಯಲ್ಲಿ ಅತ್ತಿತ್ತ ತಿರುಗಾಡಿದ್ದರಿಂದ ರೈತರು ವರ್ಷಪೂರ್ತಿ ಕಷ್ಟಪಟ್ಟು ಬೆಳೆದ ಭತ್ತದ ಪೈರು ನೆಲಕಚ್ಚಿದೆ.
ನಾಗರಾಜು ಎಂಬುವವರಿಗೆ ಸೇರಿದ ಸುಮಾರು 2 ಎಕರೆ ಗದ್ದೆಯನ್ನು ಕಾಡಾನೆಗಳು ಸಂಪೂರ್ಣ ನಿರ್ನಾಮ ಮಾಡಿವೆ.
ದೀಪಕ್ ಅವರ ತೋಟದಲ್ಲಿ ಶೇಖರಿಸಿಟ್ಟಿದ್ದ ತಲಾ 4 ಸಾವಿರ ರೂ. ಬೆಲೆ ಬಾಳುವ 13 ಪೈಪ್ ಗಳನ್ನು ತುಳಿದು ನುಜ್ಜುಗುಜ್ಜು ಮಾಡಿದೆ. ರಾತ್ರಿ ವೇಳೆ ಜನವಸತಿ ಪ್ರದೇಶದತ್ತ ಲಗ್ಗೆಯಿಡುತ್ತದೆ. ಇದರಿಂದ ಗ್ರಾಮಸ್ಥರು ತೀವ್ರ ಭಯಭೀತರಾಗಿ ಮನೆಯಿಂದ ಹೊರ ಬರುತ್ತಿಲ್ಲ.
ಕೂಲಿ ಕಾರ್ಮಿಕರು ಮತ್ತು ರೈತರು ಕಾಫಿ ತೋಟ ಹಾಗೂ ಭತ್ತದ ಗದ್ದೆಗೆ ಕೆಲಸಕ್ಕೆ ಹೋಗಲು ಸಾಧ್ಯವಾಗಿಲ್ಲ. ಕಾಡಾನೆ ಹಿಂಡು ಗ್ರಾಮಕ್ಕೆ ಲಗ್ಗೆಯಿಟ್ಟು ಜಮೀನು ಮತ್ತು ಬೆಳೆಯನ್ನು ಹಾನಿ ಮಾಡುತ್ತಿರುವ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಗ್ರಾಮಸ್ಥರು ಮಾಹಿತಿ ನೀಡಿದ ಬಳಿಕ ಅರಣ್ಯ ಇಲಾಖೆಯ ಕಾಡಾನೆ ನಿಯಂತ್ರಿಸುವ ಟಾಸ್ಕ್‌ಫೋರ್ಸ್ ತಂಡ ಗ್ರಾಮಕ್ಕೆ ಭೇಟಿ ನೀಡಿದೆ. ಈ ತಂಡದಲ್ಲಿ ಕಾಡಾನೆಗಳನ್ನು ಓಡಿಸಲು ಟಾರ್ಟ್, ಪಟಾಕಿ ಸೇರಿದಂತೆ ಯಾವುದೆ ಸಲಕರಣೆಗಳಿಲ್ಲ. ಟಾಸ್ಕ್ಫೋರ್ಸ್ ತಂಡದ ವಾಹನದ ಬ್ರೇಡ್‌ಸೆಟ್ ತುಂಡಾಗಿದೆ. ಕೆಟ್ಟು ಹೋದ ವಾಹನದಲ್ಲಿ ಟಾಸ್ ಪೋರ್ಸ್ ತಂಡ ಜೀವ ಭಯದಲ್ಲಿ ‘ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವಾಹನವನ್ನು ರಿಪೇರಿ ಮಾಡಿಸದೆ ಅಧಿಕಾರಿಗಳು ತಂಡವನ್ನು ಕಾಡಾನೆ ನಿಯಂತ್ರಿಸಲು ಕಳಿಸುತ್ತಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿಯಿಂದ ಕಾಡಾನೆ ಟಾಸ್ಕ್‌ಫೋರ್ಸ್ ತಂಡದವರಿಗೆ ರಕ್ಷಣೆ ಇಲ್ಲದೆ ಕರ್ತವ್ಯ ನಿರ್ವಹಿಸಬೇಕಾದ ಸನ್ನಿವೇಶ ಎದುರಿಸುತ್ತಿದ್ದಾರೆ. ಬೆಳೆಹಾನಿಯಿಂದ ರೈತರು ಕಂಗಾಲಾಗಿದ್ದಾರೆ. ಮುಂದಿನ ದಿನಗಳನ್ನು ನೆನೆದು ಪರಿತಪಿಸುತ್ತಿದ್ದಾರೆ.
ಕಾಡಾನೆಗಳ ಹಾವಳಿಯಿಂದ ಗೋಣಿಬೀಡು ಹೊಸಳ್ಳಿ ಸುತ್ತಮುತ್ತಲ ಗ್ರಾಮಗಳ ಜನರು ತಮ್ಮ ನೆಮ್ಮದಿ ಕಳೆದುಕೊಂಡಿದ್ದಾರೆ. ಸರ್ಕಾರ ಕೂಡಲೇ ಕ್ರಮ ವಹಿಸಿ ಇಲ್ಲಿರುವ ಕಾಡಾನೆಗಳನ್ನು ಅಭಯಾರಣ್ಯಗಳಿಗೆ ಅಟ್ಟುವುದೋ ಅಥವಾ ಹಿಡಿದ ಬೇರೆಡೆಗೆ ಸಾಗಿಸುವ ಕೆಲಸ ಮಾಡಬೇಕು. ಇಲ್ಲದೇ ಇದ್ದರೆ ಜನರು ಸರ್ಕಾರದ ವಿರುದ್ಧ ದಂಗೆಯೇಳುವ ದಿನಗಳು ದೂರವಿಲ್ಲ.
* ರಂಜಿತ್ ಜಿ.ಹೊಸಳ್ಳಿ



