ಆರು ಜನ ನಕ್ಸಲರು ಶರಣಾಗತಿ ಹಿನ್ನೆಲೆ ನಕ್ಸಲರ ಗನ್ ಗಳು ಪತ್ತೆಯಾಗಿವೆ. ಕೊಪ್ಪ ತಾಲ್ಲೂಕಿನ ಜಯಪುರ ಸಮೀಪದ ಕಿತ್ತಲೇಗಂಡಿ ಕಾಡಿನಲ್ಲಿ 5 ಗನ್ ಗಳು ಪತ್ತೆಯಾಗಿವೆ.
ನಕ್ಸಲರು ಇರಿಸಿದ್ದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಎರಡು ದಿನಗಳ ನಿರಂತರ ಹುಡುಕಾಟದ ನಂತರ ಪೊಲೀಸರಿಗೆ ಮೇಗೂರು ಅರಣ್ಯ ಪ್ರದೇಶದಲ್ಲಿ ಆರು ಬಂದೂಕು ಹಾಗೂ ಮದ್ದು ಗುಂಡು ದೊರೆತಿವೆ. ಅಂತೆಯೇ ಒಂದು ಎ.ಕೆ-56, ಮೂರು 303 ರೈಫಲ್, ಹನ್ನೆರಡು ಬೋರ್ ಎಸ್‌ಬಿಬಿಎಲ್, ಒಂದು ಸ್ವದೇಶ ನಿರ್ಮಿತ ಬಂದೂಕು ಸಿಕ್ಕಿದೆ. 7.62 ಎಂಎಂ ಎ.ಕೆ. ಮದ್ದುಗುಂಡು-11, 303- ರೈಫಲ್ ಮದ್ದುಗುಂಡು – 133, 12 ಬೋರ್ ಕಾರ್ಟ್ರಿಡ್ಜಸ್ – 24, ಸ್ವದೇಶ ನಿರ್ಮಿತ ಪಿಸ್ತೂಲ್ ಮದ್ದುಗುಂಡುಗಳು – 8 ಸೇರಿ ಒಟ್ಟು 176 ಮದ್ದುಗುಂಡು, ಎ.ಕೆ-56 ಖಾಲಿ ಮ್ಯಾಗ್ಜಿನ್ – 01 ದೊರೆತಿದೆ.
ಜಯಪುರ ಠಾಣಾ ವ್ಯಾಪ್ತಿಯಲ್ಲಿ ಗನ್ ಗಳು ಪತ್ತೆಯಾಗಿವೆ.
ಇತ್ತೀಚೆಗೆ ಆರುಜನ ನಕ್ಸಲರು ಮುಖ್ಯವಾಹಿನಿಗೆ ಬಂದು ನೇರವಾಗಿ ಮುಖ್ಯಮಂತ್ರಿಗಳ ಎದುರೇ ಶರಣಾಗಿದ್ದರು.
ಅವರ ಬಳಿ ಇದ್ದ ಶಸ್ತ್ರಾಸ್ತ್ರಗಳನ್ನು ಯಾಕೆ ಸರ್ಕಾರಕ್ಕೆ ಒಪ್ಪಿಸಿಲ್ಲ ಎಂಬ ಅನುಮಾನಗಳು ಮೂಡಿದ್ದವು. ಇದರ ಬಗ್ಗೆ ನಿನ್ನೆ ಸ್ವತಃ ಮುಖ್ಯಮಂತ್ರಿಗಳು ಮತ್ತು ಗೃಹ ಸಚಿವರು ಹೇಳಿಕೆ ನೀಡಿದ್ದರು.
ಇದೀಗ ಬಂದೂಕುಗಳನ್ನು ವಶಪಡೆಯುವ ಮೂಲಕ ಸಂಶಯಗಳಿಗೆ ತೆರೆ ಎಳೆಯಲಾಗಿದೆ.
ಜಯಪುರ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಶಸ್ತ್ರಾಸ್ತ್ರ ಕಾಯ್ದೆಯ ಸೆಕ್ಷನ್ 251 (1) (ಬಿ), 7 ಮತ್ತು 25 (1ಎ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ ಅಮಟೆ ತಿಳಿಸಿದ್ದಾರೆ. ಬುಧವಾರ ಮುಖ್ಯವಾಹಿನಿಗೆ ಬಂದ ನಕ್ಸಲರು, ಅದೇ ಮೇಗೂರು ಅರಣ್ಯದಿಂದ ಹೊರ ಬಂದಿದ್ದರು. ನಕ್ಸಲರು ಶರಣಾಗುವ ಮೊದಲು ಕೊನೆಯ ಸಭೆ ನಡೆಸಿದ್ದ ಮೇಗೂರು ಅರಣ್ಯ ಪ್ರದೇಶದಲ್ಲಿ ಪೊಲೀಸ್ ತಂಡ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿತ್ತು. ಕೊಪ್ಪ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಮಂಜುನಾಥ್ ನೇತೃತ್ವದ ತಂಡ ಶಸ್ತ್ರಾಸ್ತ್ರಗಳನ್ನು ಪತ್ತೆಹಚ್ಚಿತ್ತು.



