ಆಧುನಿಕ ಯುಗದಲ್ಲಿ ಎಲ್ಲರೂ ಸಾಮರಸ್ಯದಿಂದ ಬದುಕು ಸಾಗಿಸುತ್ತಿದ್ದಾರೆ. ಇದಕ್ಕೆ ಕಾರಣ ಅಂಬೇಡ್ಕರ್ ಅವರು. ಆದರೆ ಕೆಳವರ್ಗ, ಶೋಷಿತರು, ಮಹಿಳೆಯರ ಮೇಲೆ ಇಂದಿಗೂ ದೌರ್ಜನ್ಯ ನಡೆಯುತ್ತಿದೆ. ಇದು ಶಾಶ್ವತವಾಗಿ ನಿಲ್ಲುವ ತನಕ ಬಿಡಬಾರದು. ಈ ಸಮಾಜದಲ್ಲಿ ಸರ್ವ ಧರ್ಮ ಸಮನ್ವಯ, ಸಮ ಸಮಾಜ ಮಾತ್ರ ಬೇಕಾಗಿದೆ ಎಂದು ಖ್ಯಾತ ಹಾಸ್ಯ ನಟ ಸಾಧು ಕೋಕಿಲಾ ಹೇಳಿದರು.
ಅವರು ಶುಕ್ರವಾರ ಸಂಜೆ ಮೂಡಿಗೆರೆ ಲಯನ್ಸ್ ವೃತ್ತದಲ್ಲಿ ಭೀಮ ಕೋರೆಂಗಾವ್ ಆಚರಣ ಸಂಘದ ವತಿಯಿಂದ ಏರ್ಪಡಿಸಿದ್ದ 207ನೇ ಭೀಮಾ ಕೋರೆಂಗಾವ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಬಡವರು, ಶೋಷಿತರಿಗೆ ಸಹಾಯ ಮಾಡಿದಾಗ ಮಾತ್ರ ದೇವರು ಸ್ವರ್ಗದ ಬಾಗಿಲು ತೆರೆಯುತ್ತಾನೆಯೇ ಹೊರತು, ಕೆಟ್ಟ ದಾರಿಯಲ್ಲಿ ನಡೆಯುವವರಿಗಲ್ಲ. ಹಾಗಾಗಿ ದೇವಸ್ಥಾನಗಳಲ್ಲಿ ದುರ್ಘಟನೆ ಸಂಭವಿಸಿ ಸಾವಿನ ಸಂಖ್ಯೆ ಹೆಚ್ಚಾಗಲು ಕಾರಣವಾಗಿದೆ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವಿಧಾನ ಪರಿಷತ್ ಉಪ ಸಭಾಪತಿ ಎಂ.ಕೆ.ಪ್ರಾಣೇಶ್ ಅವರು ; ಮಾನವನ ಜನ್ಮವೇ ಶ್ರೀಮಂತವಾದದ್ದು. ಆ ಜನ್ಮ ಪಡೆದ ಮಾನವ ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದೆಂದು ಡಾ.ಬಿ.ಆರ್.ಅಂಬೇಡ್ಕರ್ ಅವರು ಇಡೀ ಜಗತ್ತಿಗೆ ತೋರಿಸಿಕೊಟ್ಟಿದ್ದಾರೆಂದು ಹೇಳಿದರು. ಅಂಬೇಡ್ಕರ್ ಅವರು ತುಳಿತಕ್ಕೊಳಗಾದ ಎಲ್ಲಾ ಜನಾಂಗದ ಮಹಾ ನಾಯಕರೆನಿಸಿಕೊಂಡಿದ್ದಾರೆ. ಈ ಸಮಾಜದಲ್ಲಿರುವ ಕಟ್ಟ ಕಡೆಯ ವ್ಯಕ್ತಿಯನ್ನು ಸಮಾಜಮುಖಿಯಾಗಿ ಯಾವಾಗ ತರುತ್ತೇವೋ, ಆಗ ಅಂಬೇಡ್ಕರ್ ಅವರ ಕನಸು ನನಸಾಗಲು ಸಾಧ್ಯ ಎಂದು ಹೇಳಿದರು.
ಬರಹಗಾರ ಡಾ.ವಿಠಲ್ ವಗ್ಗನ್ ಮಾತನಾಡಿ, ವಿಶ್ವದಲ್ಲಿ ಹಲವಾರು ದೇಶದ ಮೇಲೆ ಬ್ರಿಟೀಷ್ ಸರಕಾರ ಅಧಿಕಾರ ಚಲಾಯಿಸುತ್ತಿತ್ತು. ನೂರಾರು ಯುದ್ಧ ಗೆದ್ದಿದೆ. ಆದರೆ ಬ್ರಿಟೀಷರ ಚರಿತ್ರೆಯಲ್ಲಿಯೇ ಸುವರ್ಣ ಅಕ್ಷರಗಳಿಂದ ಬರೆದಿರುವ ಯಾವುದಾದರೂ ಯುದ್ಧ ಇದ್ದರೆ, ಅದು ಭೀಮ ಕೋರೆಂಗಾವ್ ಮಹಾನ್ ಯುದ್ಧ. ಈ ದೇಶದಲ್ಲಿ ಹೆಣ್ಣು, ಮಣ್ಣು, ಹೊನ್ನು, ಅಧಿಕಾರಕ್ಕಾಗಿ ಯುದ್ಧ ನಡೆದಿವೆ. ಆದರೆ ಸ್ವಾಭಿಮಾನಕ್ಕಾಗಿ ನಡೆದ ಯುದ್ಧವೇ ಭೀಮ ಕೋರೆಂಗಾವ್ ಎಂದು ಎಲ್ಲರಲ್ಲೂ ಜಾಗೃತಿ ಮೂಡಿಸಬೇಕಿದೆ ಎಂದು ಹೇಳಿದರು.
ಮಾಜಿ ಸಚಿವ ಬಿ.ಬಿ.ನಿಂಗಯ್ಯ, ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ, ತಹಸೀಲ್ದಾರ್ ರಾಜಶೇಖರ್ ಮೂರ್ತಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಸುಂದ್ರೇಶ್ ಕನ್ನಾಪುರ ವಹಿಸಿದ್ದರು. ಉಪಾಧ್ಯಕ್ಷ ಹರೀಶ್ ಕೆಲ್ಲೂರು, ಡಿಎಸ್‍ಎಸ್ ಜಿಲ್ಲಾಧ್ಯಕ್ಷ ಸುಂದ್ರೇಶ್ ಹೊಯ್ಸಳಲು, ಎಂ.ಎಸ್.ಅನಂತ್, ಅಂಗಡಿ ಚಂದ್ರು, ಹಾಲಯ್ಯ, ದೀಪಕ್ ದೊಡ್ಡಯ್ಯ, ಜ್ಯೋತಿ ವಿಠಲ್, ಪ್ರಭಾಕರ್ ಬಿನ್ನಡಿ, ರಮೇಶ್ ಕೆಳಗೂರು, ಮುತ್ತಪ್ಪ, ಹೂವಪ್ಪ, ಪಿ.ಕೆ.ಮಂಜುನಾಥ್, ಹರೀಶ್ ಸಬ್ಬೇನಹಳ್ಳಿ, ಗಿರೀಶ್ ಮಾಗರವಳ್ಳಿ, ವಕೀಲ ಚಂದ್ರಶೇಖರ್ ಮತ್ತಿತರರಿದ್ದರು.

ಸಭಾ ಕಾರ್ಯಕ್ರಮಕ್ಕೂ ಮುನ್ನ ಮೂಡಿಗೆರೆ ಪಟ್ಟಣದಲ್ಲಿ ಕಲಾತಂಡಗಳೊಂದಿಗೆ ಬೃಹತ್ ಮೆರವಣಿಗೆ ನಡೆಸಲಾಯಿತು. ಕಾರ್ಯಕ್ರಮಕ್ಕೆ ಸಾವಿರಾರು ಜನರು ಭಾಗವಹಿಸಿದ್ದರು.



