 
                
ಹಿರಿಯ ಕಾಫಿಬೆಳೆಗಾರ ಕರ್ನಾಟಕ ಪ್ಲಾಂಟರ್ಸ್ ಅಸೋಸಿಯೇಷನ್ (ಕೆಪಿಎ) ಮಾಜಿ ಅಧ್ಯಕ್ಷ ಎ.ಎಸ್.ಶಂಕರೇಗೌಡ (67) ಗುರುವಾರ ಬೆಳಗಿನ ಜಾವ ವಿಧಿವಶರಾದರು.
ಚಿಕ್ಕಮಗಳೂರು ಗಾಲ್ಫ್ ಕ್ಲಬ್ ಗೌರವಕಾರ್ಯದರ್ಶಿಯಾಗಿದ್ದ ಅವರು ಕೆಲಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು. ಹಿರೇಕೊಳಲೆಯ ಚಂದ್ರಗಿರಿ ತೋಟದ ಸ್ವಗೃಹದಲ್ಲಿ ಗುರುವಾರ ಮುಂಜಾನೆ ನಿಧನಹೊಂದಿದ್ದಾರೆ.
ಶುಕ್ರವಾರ ಮೃತರ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಿದ್ದು, ಮಧ್ಯಾಹ್ನ 2.30ಕ್ಕೆ ತೋಟದಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ.
ಎ.ಎಸ್.ಶಂಕರೇಗೌಡ ಅವರು ಪತ್ನಿ ಮಧು, ಪುತ್ರರಾದ ವರುಣ್ ಮತ್ತು ವನೀಶ್ ಸೇರಿದಂತೆ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ. ಕಾಫಿ ಕೃಷಿಯ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದ ಶಂಕರೇಗೌಡರು, ಕರ್ನಾಟಕ ಪ್ಲಾಂಟರ್ಸ್ ಅಸೋಸಿಯೇಷನ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಕಾಫಿ ಬೆಳೆಗಾರರ ಪರವಾಗಿ ಸರ್ಕಾರದ ಮಟ್ಟದಲ್ಲಿ ಅನೇಕ ಸವಲತ್ತುಗಳು ಸಿಗುವುದರಲ್ಲಿ ಹೆಚ್ಚಿನ ಪ್ರಯತ್ನ ನಡೆಸಿದ್ದರು. ಕಾಫಿ ಉದ್ದಿಮೆಯ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದರು.
ಚಿಕ್ಕಮಗಳೂರು ರೋಟರಿ ಕ್ಲಬ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಯೂನಿವರ್ಸಲ್ ಕಾಫಿ ಫೌಂಡೇಶನ್ ಸ್ಥಾಪಕ ಸದಸ್ಯರು. ಜೀವನಸಂಧ್ಯಾ ವೃದ್ಧಾಶ್ರಮ ಸ್ಥಾಪನೆಗೆ ಶ್ರಮಿಸಿದ್ದು ವಿವಿಧ ಸಂಘಸಂಸ್ಥೆಗಳ ಒಡನಾಟ ಹೊಂದಿದ್ದರು.
ಶಾಸಕ ಎಚ್.ಡಿ.ತಮ್ಮಯ್ಯ, ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ, ಚಿಕ್ಕಮಗಳೂರು ಗಾಲ್ಫ್ ಕ್ಲಬ್ ಅಧ್ಯಕ್ಷ ಎ.ಬಿ.ಸುದರ್ಶನ್, ಮಾಧ್ಯಮ ಸಂಸ್ಕøತಿ ಪ್ರತಿಷ್ಠಾನದ ಅಧ್ಯಕ್ಷ ಪ್ರಭುಲಿಂಗಶಾಸ್ತ್ರಿ, ಶ್ರೀಜಗದ್ಗುರು ರೇಣುಕಾಚಾರ್ಯ ಟ್ರಸ್ಟ್ ಕಾರ್ಯದರ್ಶಿ ಮಲ್ಲಿಕಾರ್ಜುನ್ ಮತ್ತು ಖಜಾಂಚಿ ಯು.ಎಂ.ಬಸವರಾಜು ಮತ್ತಿತರರು ಶಂಕರೇಗೌಡರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.


 
 

 
                                                         
                                                         
                                                         
                                                         
                                                         
                                                        