ಸಾಮಥ್ರ್ಯವಿದ್ದರೂ ಪ್ರಚೋಚನೆ ಇದ್ದರೆ ಮಾತ್ರ ಮಹಿಳೆಯಿಂದ ಸಾಧನೆ ಸಾಧ್ಯ ಎಂದು ಕೆಎಫ್‍ಡಿಸಿ ವಲಯಾರಣ್ಯಾಧಿಕಾರಿ ಸ್ಮಿತಾದರ್ಶನ್ ಅಭಿಪ್ರಾಯಿಸಿದರು.
ಅಕ್ಕಮಹಾದೇವಿ ಮಹಿಳಾ ಸಂಘದ ಬಸವನಹಳ್ಳಿಯ ಶರಣೆ ಗಂಗಾಂಬಿಕೆ ತಂಡ ನಗರದ ಶ್ರೀಜಗದ್ಗುರು ರೇಣುಕಾಚಾರ್ಯ ಸಮುದಾಯ ಭವನದಲ್ಲಿ ಆಯೋಜಿಸಿದ್ದ ‘ಕಾರ್ತೀಕ ಹುಣ್ಣಿಮೆ’ ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯರಲ್ಲಿ ಸಹಜವಾಗಿಯೆ ಹೆಚ್ಚಿನ ಸಾಮಥ್ರ್ಯ ಜೊತೆಗೆ ಹಿಂಜರಿಕೆಯೂ ಇರುತ್ತದೆ. ಸಾಮಾಜಿಕ ವ್ಯವಸ್ಥೆಯಲ್ಲಿ ಕಟ್ಟುಪಾಡುಗಳಿಗೆ ಒಳಪಟ್ಟ ಹೆಣ್ಣಿಗೆ ಹಿಂಜರಿಕೆ ಸಹಜ. ಯಾರಾದರೂ ಸಾಮಥ್ರ್ಯವನ್ನು ಗುರುತಿಸಿ ಪ್ರೋತ್ಸಾಹಿಸಿ-ಪ್ರಚೋದಿಸಿದಾಗ ಮಾತ್ರ ಆಕೆ ಮುಂದೆ ಅಡಿ ಇಡುತ್ತಾಳೆ. ಸಾಮಾನ್ಯವಾಗಿ ಕುಟುಂಬ ಆಕೆಯನ್ನು ಚೆನ್ನಾಗಿ ಅರಿತಿರುವುದರಿಂದ ಪ್ರೇರೇಪಣೆ ನೀಡುತ್ತದೆ. ಇಂತಹ ವೇದಿಕೆಗಳೂ ಅವಕಾಶಗಳನ್ನು ಕಲ್ಪಿಸಿ ಕೊಡುತ್ತಿರುವುದು ಮಹಿಳೆಯರ ಸಬಲೀಕರಣಕ್ಕೆ ಪೂರಕ ಎಂದರು.
ಸಮಾಜದಲ್ಲಿ ಹೆಣ್ಣು ಅನೇಕ ಪಾತ್ರಗಳನ್ನು ನಿರ್ವಹಿಸಬೇಕಾಗುತ್ತದೆ. ಗೃಹಿಣಿ ಎಂದರೆ ವೇತನ ರಹಿತ ಕಾರ್ಯ. ಆಕೆಗೆ ರಜೆ ಎಂಬುದೇ ಇಲ್ಲ. ಮನೆ-ಮಂದಿಗೆಲ್ಲ ರಜೆ ಇದ್ದಾಗ ತಾಯಿಗೆ ಕೆಲಸ ಹೆಚ್ಚು. ತಾಳ್ಮೆ ಮತ್ತು ಸಹನೆ ಆಕೆಯ ಶಕ್ತಿ. ಧೈರ್ಯವಾಗಿ ಮುನ್ನಡೆಯುವ ಸಾಮಥ್ರ್ಯವನ್ನು ಹೆಣ್ಣು ಬೆಳೆಸಿಕೊಳ್ಳಬೇಕು. ಯಾವುದೋ ಒಂದು ಘಟನೆಯನ್ನು ಹಿಡಿದುಕೊಂಡು ಏನೋ ಆಗುತ್ತದೆಂಬ ಗುಮಾನಿಯಿಂದ ಹಿಂಜರಿಕೆ ಸಲ್ಲದು. ಆಸಕ್ತಿ ಇರುವ ಕ್ಷೇತ್ರದತ್ತ ಮುನ್ನುಗ್ಗಬೇಕು ಎಂದ ಸ್ಮಿತಾ, ಅರಣ್ಯ ಇಲಾಖೆ ಸೇರಿದ ಮೇಲೆ ಹಲವರು ಕಾಡಿನಲ್ಲಿ ಒಬ್ಬರೆ ಓಡಾಡುವುದು ಸಾಧ್ಯವೇ ಎಂದು ಪ್ರಶ್ನಿಸುತ್ತಲೇ ಇದ್ದಾರೆ. ವಾಸ್ತವವಾಗಿ ಹೆಣ್ಣಿಗೆ ಶಕ್ತಿ, ಧೈರ್ಯ ಹೆಚ್ಚು. ಆದರೆ ನಮ್ಮ ಸಮಾಜದಲ್ಲಿ ಹಿಂದಿನಿಂದಲೂ ತಾರತಮ್ಯ ತೋರುತ್ತಲೇ ಬಂದಿರುವುದು ಹಿಂಜರಿಕೆಗೆ ಕಾರಣವೆಂದರು.
ಅಕ್ಕಮಹಾದೇವಿ 12ನೆಯ ಶತಮಾನದಲ್ಲಿ ಬಹುದೊಡ್ಡ ಸಾಧನೆ ಮಾಡಿದ ಅನುಭಾವಿ. ಕವಿಯತ್ರಿಯಷ್ಟೇ ಅಲ್ಲ ಯೋಗಿನಿಯೂ ಹೌದು. ಆ ಕಾಲದಲ್ಲೂ ಹೆಣ್ಣಿಗೆ ವಿಪರೀತ ಅಡೆತಡೆಗಳಿದ್ದವು. ಅಕ್ಕ ಅವನ್ನೆಲ್ಲ ಶಾಂತಿ ಮತ್ತು ಸಹನೆಯಿಂದ ಸಹಿಸಿದ್ದರಿಂದರೆ ಮಹಿಳೆಯರಿಗೆ ಇಂದೂ ಮಾದರಿಯಾಗಿದ್ದಾಳೆ. ಮಹಿಳೆಯರು ಮಹಾರಾಣಿಯಾಗಿ, ಸ್ವಾತಂತ್ರ್ಯಯೋಧರಾಗಿ, ಸಾಹಿತಿಗಳಾಗಿ, ಸಮಾಜಸೇವಕಿಯಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಅವರೆಲ್ಲರೂ ನಮಗೆ ಮಾದರಿಯಗಬೇಕು. ಮಹಿಳೆ ದೊಡ್ಡ ಕನಸ್ಸನ್ನು ಕಾಣಬೇಕು ಎಂದ ಸ್ಮಿತಾ, ಆಕಾಶಕ್ಕೆ ಏಣಿಹಾಕಿದರೆ ಮರವನ್ನಾದರೂ ಏರಬಹುದು ಎಂದರು.
ಪರಿಸರ ಸಂರಕ್ಷಣೆಯಲ್ಲಿ ಹೆಣ್ಣಿನ ಪಾತ್ರ ದೊಡ್ಡದಿದೆ. ಸಣ್ಣ ಸಣ್ಣ ಕೆಲಸಗಳೂ ಉತ್ತಮ ಫಲಿತಾಂಶ ನೀಡುತ್ತದೆ. ಮನೆಯಲ್ಲಿ ಪೇಪರ್, ನೀರು, ವಿದ್ಯುತ್ ಹಿತಮಿತ ಬಳಕೆ. ಮನಯಂಗಳದಲ್ಲಿ ಕೈತೋಟ. ಹೂವು, ಹಣ್ಣು, ತರಕಾರಿ ಪಾಟ್‍ನಲ್ಲಿ ಬೆಳೆಯುವುದು ಇಂತಹ ಚಿಕ್ಕಪುಟ್ಟ ಸಂಗತಿಗಳು ಹೆಣ್ಣಿಗೆ ಸಂತೋಷವನ್ನು ನೀಡುತ್ತದೆ ಎಂದ ವಲಯಾರಣ್ಯಾಧಿಕಾರಿ ಸ್ಮಿತಾದರ್ಶನ್, ಕಾಡು ಕಾಪಾಡುವುದು ನಮ್ಮೆಲ್ಲರ ಮೂಲಭೂತ ಜವಾಬ್ದಾರಿ ಎಂಬುದನ್ನು ಅರ್ಥಮಾಡಿಕೊಳ್ಳಬೇಕೆಂದರು.
ಅಕ್ಕಮಹಾದೇವಿ ಮಹಿಳಾ ಸಂಘದ ಅಧ್ಯಕ್ಷೆ ಆಶಾಮಲ್ಲೇಶ್ ಸಮಾರಂಭದ ಅಧ್ಯಕ್ಷತೆವಹಿಸಿದ್ದು ಕನ್ನಡ ರಾಜ್ಯೋತ್ಸವದ ಶುಭಾಶಯಕೋರಿದರು.
ನಿರ್ದೇಶಕಿ ವೀಣಾಜಗದೀಶ್ ಪ್ರಾಸ್ತಾವಿಸಿ ಪ್ರತಿತಿಂಗಳು ಆಸಕ್ತಿಯಿಂದ ಹುಣ್ಣಿಮೆ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳಬೇಕು. ಅಪೂರ್ವ ಅವಕಾಶವನ್ನು ಬಳಸಿಕೊಂಡು ಸುಪ್ತ ಪ್ರತಿಭೆಯನ್ನು ಹೊರ ಹಾಕಬಹುದೆಂದರು.
ಉಪಾಧ್ಯಕ್ಷೆ ಕುಸುಮಾರಾಜಶೇಖರ್, ಕಾರ್ಯದರ್ಶಿ ಆಶಾಹೇಮಂತ್, ಖಜಾಂಚಿ ಪಾರ್ವತಿಬಸವರಾಜು, ಸಹಕಾರ್ಯದರ್ಶಿ ಮಧುಮತಿಕುಮಾರ್, ಸಂಘಟನಾಕಾರ್ಯದರ್ಶಿ ಮಂಜುಳಮ್ಮ ಉಪಸ್ಥಿತರಿದ್ದರು.
ಹಿರಿಯಸದಸ್ಯರಾದ ಸುಶೀಲಮ್ಮ ಮತ್ತು ಚಂದ್ರಮ್ಮ ವೇದಘೋಷ ಮಾಡಿದ್ದು, ಪಾರ್ವತಿಮಲ್ಲಿಕಾರ್ಜುನ್ ನಿರೂಪಿಸಿದರು. ಸ್ವಣಾರುದ್ರೇಶ್ ಮತ್ತು ಶಾಂತರಾಜಶೇಖರ್ ಪ್ರಾರ್ಥಿಸಿದರು. ಜಯಸುಧಾ ಸ್ವಾಗತಿಸಿ, ರುಕ್ಮಿಣಿಹರೀಶ್ ವಂದಿಸಿದರು.
ಸುಧಾಕಿಶನ್ ಅತಿಥಿ ಪರಿಚಯಿಸಿ, ಶೈಲಾಶಿವು ಮತ್ತು ಶಶಿಕಲಾನಂಜುಂಡಸ್ವಾಮಿ ತಂಡ ನಾಡಗೀತೆ ಹಾಡಿದರು.
ಜಯಾಪುಟ್ಟಸ್ವಾಮಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕನ್ನಡ ರಸಪ್ರಶ್ನೆ ಕಾರ್ಯಕ್ರಮ ನಡೆಸಿಕೊಟ್ಟರು. ಪ್ರಮೀಳಾ, ನಮ್ರತಾ, ಸುಮಾ ಮತ್ತು ಸವಿತಾ ತಂಡದ ಜಾನಪದ ನೃತ್ಯ ಸೇರಿದಂತೆ ಸಾಂಸ್ಕøತಿಕ ಕಾರ್ಯಕ್ರಮ ಆಕರ್ಷಿಕವಾಗಿದ್ದು, ವಿವಿಧ ಆಟೋಟಸ್ಪರ್ಧಾ ವಿಜೇತರಿಗೆ ವೀಣಾಜಗದೀಶ್ ಬಹುಮಾನ ವಿತರಿಸಿದರು.
ವರದಿ : ಪ್ರಭುಲಿಂಗಶಾಸ್ತ್ರಿ



