ಆಗಸ್ಟ್ 21ರಂದು ಕೊಪ್ಪ ತಾಲ್ಲೂಕಿನಲ್ಲಿ ನಡೆದಿದ್ದ ಮನೆ ದರೋಡೆ ಪ್ರಕರಣದಲ್ಲಿ ವಶಕ್ಕೆ ಪಡೆದಿದ್ದ ಕಾರಿನಲ್ಲಿ ಕೋಟ್ಯಾಂತರ ಮೌಲ್ಯದ ಚಿನ್ನಾಭರಣ ಮತ್ತು ನಗದು ಪತ್ತೆಯಾಗಿದೆ.
ಕಳೆದ ಮೂರು ತಿಂಗಳಿಂದ ಕೊಪ್ಪ ಪೊಲೀಸ್ ಠಾಣೆಯಲ್ಲಿ ನಿಂತಿದ್ದ ಕಾರಿನಲ್ಲಿ ಈ ಚಿನ್ನಾಭರಣ ಪತ್ತೆಯಾಗಿದೆ.
ಆಗಸ್ಟ್ 21ರಂದು ಬೆಳಗಿನ ಜಾವ ಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ಹರಂದೂರು ಗ್ರಾಮದ ಮಣಿಪುರ ಎಸ್ಟೇಟ್ನ, ಮಾಜಿ ಸಚಿವ ಗೋವಿಂದೇಗೌಡ ಅವರ ಪುತ್ರ ಹಾಗೂ ಎಸ್ಟೇಟ್ ಮಾಲೀಕ ಹೆಚ್.ಜಿ. ವೆಂಕಟೇಶ್ ಮನೆಯಲ್ಲಿ ಕಳ್ಳತನ ನಡೆದಿತ್ತು. 6 ಲಕ್ಷ ನಗದು ಮತ್ತು 37,50,000 ರೂ. ಮೌಲ್ಯದ ಚಿನ್ನ, ಬೆಳ್ಳಿ ಆಭರಣಗಳನ್ನು ಕದ್ದು ಆರೋಪಿಗಳು ಪರಾರಿಯಾಗಿದ್ದರು.
ಮನೆಯಲ್ಲಿ ಸೆಕ್ಯೂರಿಟಿ ಕೆಲಸಕ್ಕೆ ಸೇರಿದ್ದ ನೇಪಾಳ ಮೂಲದ ವ್ಯಕ್ತಿ ಮತ್ತು ಆತನ ಪತ್ನಿ ಸೇರಿ ಮನೆದರೋಡೆಗೆ ಸ್ಕೆಚ್ ಹಾಕಿದ್ದರು. ವೆಂಕಟೇಶ್ ಕುಟುಂಬ ಮದುವೆ ಸಮಾರಂಭಕ್ಕೆ ಬೆಂಗಳೂರಿಗೆ ತೆರಳಿದ್ದಾಗ ತಮ್ಮ ಸಹಚರರನ್ನು ಕರೆಸಿಕೊಂಡು ನೇಪಾಳ ಮೂಲದ ವ್ಯಕ್ತಿಗಳು ಮನೆದರೋಡೆ ನಡೆಸಿ ಎಸ್ಕೇಪ್ ಆಗಿದ್ದರು.
ಪ್ರಕರಣ ಸಂಬಂಧ ಆರೋಪಿಗಳಿಗೆ ಬಲೆ ಬೀಸಿದ್ದ ಪೊಲೀಸರು, ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಮೂವರು ಆರೋಪಿಗಳನ್ನು ಬಂಧಿಸಿದ್ದರು. ನೇಪಾಳದ ರಾಜೇಂದ್ರ, ಏಕೇಂದ್ರ ಕುಟಲ್ ಬದ್ವಾಲ್, ಕರಂ ಸಿಂಗ್ ಬಹಾದ್ದೂರ್ ಎಂಬುವರನ್ನು ಅರೆಸ್ಟ್ ಮಾಡಿ ಆಗಲೇ ಒಂದೂವರೆ ಕೋಟಿ ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣಗಳು ಮತ್ತು ಕೃತ್ಯಕ್ಕೆ ಬಳಸಿದ ಎರಡು ಕಾರುಗಳನ್ನ ಜಪ್ತಿ ಮಾಡಿದ್ದರು.
ಜಪ್ತಿ ಮಾಡಿದ ಕಾರಿನ ಮಾಲೀಕರು ನ್ಯಾಯಾಲಯದಿಂದ ಆದೇಶ ಪಡೆದು ಕಾರನ್ನು ಪಡೆಯಲು ಕೊಪ್ಪ ಠಾಣೆಗೆ ಬಂದಿದ್ದರು. ಈ ವೇಳೆ ಕಾರನ್ನು ಪೊಲೀಸರು ಮತ್ತೊಮ್ಮೆ ಕೂಲಂಕುಶವಾಗಿ ಪರಿಶೀಲನೆ ನಡೆಸುವಾಗ ಕಾರಿನ ಸೀಟಿನಡಿಯಲ್ಲಿ ಬಚ್ಚಿಟ್ಟಿದ ಚಿನ್ನಾಭರಣ ಮತ್ತು ನಗದು ಪತ್ತೆಯಾಗಿದೆ.
ಪರಿಶೀಲನೆ ವೇಳೆ ಕಾರಿನ ಸೀಟ್ ಅಡಿಯಲ್ಲಿ 595 ಗ್ರಾಂ ಚಿನ್ನ, 589 ಗ್ರಾಂ ಬೆಳ್ಳಿ, 3,41,150 ರೂ. ಹಣ ಪತ್ತೆಯಾಗಿದೆ. ವಶಕ್ಕೆ ಪಡೆಯಲಾದ ಹಣ ಮತ್ತು ವಸ್ತುಗಳ ಮೌಲ್ಯ ಕೋಟಿಗೂ ಅಧಿಕ ಎನ್ನಲಾಗಿದ್ದು, ಕೊಪ್ಪದಲ್ಲಿ ಕಳ್ಳತನವಾಗಿದ್ದ ಮೌಲ್ಯಕ್ಕಿಂತ ಅಧಿಕ ಚಿನ್ನ ಮತ್ತು ಬೆಳ್ಳಿ ಈ ವೇಳೆ ಪತ್ತೆಯಾಗಿದೆ. ಹೀಗಾಗಿ ಗ್ಯಾಂಗ್ ಇನ್ನೂ ಹಲವೆಡೆ ದರೋಡೆ ಮಾಡಿರುವ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ.
ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿ ವಿಚಾರಣೆಗೆ ಮುಂದಾಗಿದ್ದಾರೆ.



