IMG-20250515-WA0019

 

 

ತಾಳುವಿಕೆಗಿಂತ ತಪವಿಲ್ಲ ಎಂಬ ಮಾತಿಗೆ ಹೇಮರಡ್ಡಿಮಲ್ಲಮ್ಮ ನಿದರ್ಶನ ಎಂದು ವಾರಣಾಸಿಯ ಕಾಶೀ ಜ್ಞಾನಸಿಂಹಾಸನ ಮಹಾಪೀಠದ ಶ್ರೀಶ್ರೀಶ್ರೀ 1008 ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯಭಗವತ್ಪಾದರು ಅಭಿಪ್ರಾಯಿಸಿದರು.

ಬಡಗನಾಡು ಹೇಮರಡ್ಡಿ ವೀರಶೈವ ಜನಾಂಗಸಂಘದ ಬಾಸೂರು ಘಟಕದ ನೇತೃತ್ವದಲ್ಲಿ ಹಿರೇನಲ್ಲೂರು ಹೋಬಳಿ ಬಾಸೂರು ಕ್ರೀಡಾಂಗಣದಲ್ಲಿ ಎರಡುದಿನಗಳ ಕಾಲ ಆಯೋಜಿಸಿದ್ದ ಜಿಲ್ಲಾಮಟ್ಟದ ಶಿವಶರಣೆ ಶ್ರೀ ಹೇಮರಡ್ಡಿಮಲ್ಲಮ್ಮರ ಜಯಂತ್ಯುತ್ಸವದ ದಿವ್ಯ ಸಾನಿಧ್ಯವಹಿಸಿ ಅವರು ಆಶೀರ್ವಚನ ನೀಡಿದರು.

ತಾಳಿದವನು ಬಾಳಿಯಾನು ಎಂಬ ಗಾದೆ ಮಾತಿದೆ. ಹಳಿದು ಹಂಗಿಸುವ ಹಗೆಮಾತು ತಾಳು, ಬುತ್ತಿಯನ್ನು ಬಿಚ್ಚಿಕೊಡುವವರೆಗೂ ತಾಳು ಎಂಬುದು ಜನಪ್ರಿಯ ನುಡಿಗಟ್ಟು. ನಿಂದನೆ ಸಹನೆ ಮಾಡಿಕೊಂಡವರು ಮಹಾಪುರುಷರಾಗಿದ್ದಾರೆ. ಸಾಧು ಸಂತರು ತಾಳ್ಮೆ ಎಂಬ ತಪದಿಂದಲೇ ದೊಡ್ಡರಾಗಿದ್ದಾರೆ. ಸಾಧ್ವಿ ಶಿರೋಮಣಿ ಮಲ್ಲಮ್ಮ ತಾಳುವಿಕೆಯ ಪ್ರತೀಕ ಎನಿಸಿಕೊಂಡಿದ್ದು ಮಹಿಳಾ ಸಂಕುಲಕ್ಕೆ ಆದರ್ಶಪ್ರಾಯ ಎಂದರು.

ಮಲ್ಲಮ್ಮ ಅನುಭವಿಸಿದ ಸಂಸಾರಿಕ ಕಷ್ಟನಷ್ಟ, ಸಾಧಿಸಿದ ಧಾರ್ಮಿಕ ಅಭ್ಯುದಯ ಗಮನೀಯ. ಸಾಮಾನ್ಯ ಗೃಹಸ್ಥ ಜೀವನ ಸಾಗಿಸಿ ಸಹನಾಗುಣ ಪರಾಕಷ್ಠೆಗೆ ಹೋದಾಗ ಶ್ರೀಶೈಲ ಮಲ್ಲಯ್ಯನೆ ಬಂದು ನೆರವಾದ ಐತಿಹ್ಯವಿದೆ. ಮೈದುನ ವೇಮನನ ಕಾಮ ವಾಸನೆಸುಟ್ಟು ಆತನನ್ನು ಯೋಗಿಯಾಗಿ ಪರಿವರ್ತಿಸಿದ ಸಹನಾಗುಣ ಲೋಕಪ್ರಸಿದ್ಧಿ ಎಂದರು.

ಭಾರತದ ವಿವಿಧ ಕ್ಷೇತ್ರಗಳಲ್ಲಿ ಹಿಂದಿನಿಂದಲೂ ಅನೇಕ ಮಹಿಳೆಯರು ಸಾಧನೆ ಮಾಡಿದ್ದಾರೆ. ಧಾರ್ಮಿಕ ಕ್ಷೇತ್ರದಲ್ಲೂ ಹಿರಿಮೆ ಕಡಿಮೆ ಇಲ್ಲ. ಕಾಶ್ಮೀರದ ಲಲ್ಲೇಶ್ವರಿ, ಅಕ್ಕಮಹಾದೇವಿ, ಗುಡ್ಡಾಪುರ ದಾನಮ್ಮ… ಇಂತವರ ಸಾಲಿನಲ್ಲಿ ನಿಲ್ಲಬಹುದಾದ ಹೇಮರಡ್ಡಿಮಲ್ಲಮ್ಮ ಸಹನಾಶಕ್ತಿಯಿಂದ ಸಂಘರ್ಷ ಜಯಿಸಿದವಳು. ವ್ಯಕ್ತಿ ಶಕ್ತಿಯಾಗಿ ಬೆಳೆದು ಸಮಾಜಕ್ಕೆ ಮಾರ್ಗದರ್ಶನ ಮಾಡುವ ಸ್ಥಿತಿ ತಲುಪಿದ್ದು ಲಿಂಗಪೂಜೆ ಮತ್ತು ಸಹನಾಶಕ್ತಿಯ ಗುಣದಿಂದ ಎಂದ ಕಾಶೀ ಜಗದ್ಗುರುಗಳು, ಬ್ರಹ್ಮನಿಗೆ ಸೃಷ್ಟಿ, ವಿಷ್ಣುವಿಗೆ ಪಾಲನೆಯಶಕ್ತಿ ಬರಲು ಲಿಂಗಪೂಜೆ ಪರಂಪರೆಯೆ ಕಾರಣವೆಂಬ ಶ್ಲೋಕವನ್ನು ಉಲ್ಲೇಖಿಸಿದರು.

ಹಿಂದೂ ಸಮಾಜ ಬಹಳ ವಿಶಾಲವಾದದ್ದು ಅದರಲ್ಲಿ ವೀರಶೈವಲಿಂಗಾಯತ ಸಮೂಹ ವಿಶಿಷ್ಟವಾದದ್ದು. ಇಷ್ಟಲಿಂಗ ಪೂಜೆಯ ಸಂಸ್ಕಾರಯುತ ಬದುಕು ಲೋಕ ಕಲ್ಯಾಣಕ್ಕೆ ಸಹಕಾರಿ ಎಂದ ಕಾಶೀ ಜಗದ್ಗುರುಗಳು, ಹೇಮರಡ್ಡಿಮಲ್ಲಮ್ಮ ಪರಂಪರೆಯ ಸಮೂಹ ಸಂಘಟಿತವಾಗಿ ಸಾರ್ಥಕ ಸ್ಮರಣೆ ಹಮ್ಮಿಕೊಳ್ಳುತ್ತಿದೆ ಎಂದರು.

ಚಿತ್ರದುರ್ಗದ ಅಪರ ಜಿಲ್ಲಾಧಿಕಾರಿ ಬಾಸೂರು ಮೂಲದ ಬಿ.ಟಿ.ಕುಮಾರಸ್ವಾಮಿ ಉಪನ್ಯಾಸ ನೀಡಿ, ಜ್ಞಾನ ಸಂಪಾದಿಸಿ ಅಜ್ಞಾನದ ಕತ್ತಲನ್ನು ತೊಲಗಿಸಬೇಕು. ಕಾಯಕ ಮತ್ತು ದಾಸೋಹ ಅದ್ಭುತವಾದ ಸಂಗತಿ. ಇವು ಉತ್ಪಾದನೆ ಮತ್ತು ಹಂಚಿಕೆಯನ್ನು ಸೂಚಿಸುತ್ತವೆ. ನಡೆ ಮತ್ತು ನುಡಿ ಒಂದೇ ಆದ ಬದುಕು ಆದರ್ಶಮಯ. ಇಂದು ಮಾನವೀಯತೆ ಮೌಲ್ಯಗಳು ಕುಸಿದಿರುವ ಸಂದರ್ಭ. ಆಸ್ತಿ, ಹಣ, ಅಧಿಕಾರದ ಬಿಸಿಲಕುದುರೆಯೇರಿ ಓಡುತ್ತಿದ್ದೇವೆ. ಅರಿವೆ ಗುರು ಎಂಬುದನ್ನು ಮರೆತು ಮೊಬೈಲನ್ನೆ ಗುರುವೆಂದು ಪರಿಗಣಿಸಿದ್ದೇವೆ. ಇಂತಹ ಸಂದರ್ಭದಲ್ಲಿ ಸಾತ್ವಿಕ ಸಹನಾಶೀಲ ಹೇಮರಡ್ಡಿ ಮಲ್ಲಮ್ಮನ ಆದರ್ಶಗಳು ನಮಗೆ ಅತ್ಯಗತ್ಯ ಎಂದರು.

ಶ್ರೀಶೈಲ ಹಾಗೂ ಉಜ್ಜಯಿನಿ ಶ್ರೀಜಗದ್ಗುರುಗಳು ದಿವ್ಯ ಸಾನಿಧ್ಯವಹಿಸಿದ್ದರು. ಹುಣಸಘಟ್ಟದ ಶ್ರೀಗುರುಮೂರ್ತಿ ಶಿವಾಚಾರ್ಯರು ಮತ್ತು ಬೀರೂರು ರಂಭಾಪುರಿಖಾಸಾ ಶಾಸಾಮಠದ ಶ್ರೀರುದ್ರಮುನಿ ಶಿವಾಚಾರ್ಯರು ಸಮಾರಂಭದ ಸಮ್ಮುಖವಹಿಸಿದ್ದರು. ಘಟಕದ ಅಧ್ಯಕ್ಷ ಬಿ.ಕೆ.ವಸಂತಕುಮಾರ್ ಅಧ್ಯಕ್ಷತೆವಹಿಸಿದ್ದರು. ಪದಾಧಿಕಾರಿಗಳಾದ ರೇವಣಸಿದ್ದಪ್ಪ, ಮುರುಗೇಶ್, ತಿಪ್ಪೇಸ್ವಾಮಿ, ಬಿ.ಎಸ್.ಪ್ರಭು, ನಾಗಭೂಷಣ ಮತ್ತಿತರರು ವೇದಿಕೆಯಲ್ಲಿದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ