ಕಳಸ ತಾಲ್ಲೂಕಿನಲ್ಲಿ ವಿವಿಧೆಡೆ ಒಟ್ಟು 35 ಕೋಟಿ ರೂಪಾಯಿ ವೆಚ್ಚದಲ್ಲಿ 5 ಪ್ರಮುಖ ಸೇತುವೆಗಳ ನಿರ್ಮಾಣಕ್ಕೆ ಅನುಮೋದನೆ ದೊರೆತಿದೆ ಎಂದು ಶಾಸಕಿ ನಯನಾ ಮೋಟಮ್ಮ ಮಾಹಿತಿ ನೀಡಿದ್ದಾರೆ.
ತಾಲ್ಲೂಕಿನ ನೆಲ್ಲಿಬೀಡು-ಕಟ್ಟಿನಮನೆ ಸೇತುವೆಗೆ 17.5 ಕೋಟಿ ರೂಪಾಯಿ ಮಂಜೂರು ಆಗಿದೆ. ಇದರಿಂದ ಆ ಭಾಗದ ನೂರಾರು ಗ್ರಾಮಸ್ಥರಿಗೆ ಅನುಕೂಲ ಆಗಲಿದೆ ಎಂದು ಅವರು ತಿಳಿಸಿದರು.
ಬಾಳೆಹೊಳೆ ಸಮೀಪದ ಕಗ್ಗನಳ್ಳ-ಬಿಳುಗೂರು ಸಂಪರ್ಕಕ್ಕೆ 9 ಕೋಟಿ ವೆಚ್ಚದ ತೂಗುಸೇತುವೆ ನಿರ್ಮಾಣಕ್ಕೂ ಅನುಮೋದನೆ ಸಿಕ್ಕಿದೆ. ಬಾಳೆಹೊಳೆ-ಬಾಳೆಹೊನ್ನೂರು ರಸ್ತೆಯ ಕಗ್ಗನಳ್ಳದಲ್ಲಿ 3.5 ಕೋಟಿ ವೆಚ್ಚದಲ್ಲಿ ರಾಜ್ಯ ಹೆದ್ದಾರಿಯಲ್ಲಿ ಮತ್ತೊಂದು ಸೇತುವೆ ಮತ್ತು ನೆಲ್ಲಿಬೀಡಿನಲ್ಲಿ ಭದ್ರಾ ನದಿ ಉಕ್ಕುತ್ತಿದ್ದ ಪ್ರದೇಶದಲ್ಲಿ 2.5 ಕೋಟಿ ವೆಚ್ಚದಲ್ಲಿ ಇನ್ನೊಂದು ಸೇತುವೆ ನಿರ್ಮಾಣ ಆಗಲಿದೆ ಎಂದು ಅವರು ತಿಳಿಸಿದರು.
ಕಳಸ ತಾಲ್ಲೂಕು ಕೇಂದ್ರಕ್ಕಾಗಿ 5 ಕೋಟಿ ವೆಚ್ಚದಲ್ಲಿ ಪ್ರಜಾಸೌಧ ನಿರ್ಮಾಣ ಸದ್ಯದಲ್ಲೇ ಆರಂಭವಾಗಲಿದೆ. ಈಗಿನ ತಾಲ್ಲೂಕು ಕಚೇರಿಯನ್ನು ಅರಳಿಕಟ್ಟೆ ಪಕ್ಕದ ಸರ್ಕಾರಿ ಶಾಲೆಗೆ ಸ್ಥಳಂತರಿಸಲಾಗುತ್ತದೆ. ಕಳಸ ತಾಲ್ಲೂಕಿಗೆ ದೊಡ್ಡ ಮಟ್ಟದ ಅನುದಾನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸಹಕಾರದಿಂದ ತರಲಾಗುತ್ತಿದೆ ಎಂದರು.
ಮಹಾಲ್‍ಗೋಡು ಗ್ರಾಮದಲ್ಲಿ 3 ಕೋಟಿ ವೆಚ್ಚದ ಸೇತುವೆ ಕಾಮಗಾರಿ ಈಗಾಗಲೇ ಆರಂಭವಾಗಿದೆ. ಕಳಸ ತಾಲ್ಲೂಕಿನ ಬಹುತೇಕ ಸೇತುವೆಗಳ ಬೇಡಿಕೆ ಈಡೇರಿಸಲಾಗುತ್ತಿದೆ ಎಂದೂ ಅವರು ತಿಳಿಸಿದ್ದಾರೆ.



