ಸರ್ಕಾರಿ ಶಾಲೆಗಳಲ್ಲಿ ದಿನದಿಂದ ದಿನಕ್ಕೆ ದಾಖಲಾತಿ ಕಡಿಮೆಯಾಗುತ್ತಿರುವ ಈ ಸಂದರ್ಭದಲ್ಲಿ ಈ ಶಾಲೆಯಲ್ಲಿ ಮಾತ್ರ ಮಕ್ಕಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಇದು ಮೂಡಿಗೆರೆ ತಾಲ್ಲೂಕಿನ ಬಣಕಲ್ ಹೋಬಳಿ ಬಾನಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ. ಸರ್ವೇಸಾಧಾರಣವಾಗಿ ಮಲೆನಾಡು ಭಾಗದ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಬಹುತೇಕ ಕಡೆ ಐದರಿಂದ ಹತ್ತು ಮಕ್ಕಳು ಕಾಣಸಿಕ್ಕರೆ ಹೆಚ್ಚು ಎನ್ನುವಂತಾಗಿದೆ. ಆದರೆ ಬಾನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಅನೇಕ ವರ್ಷಗಳಿಂದಲೂ ಮಕ್ಕಳ ಸಂಖ್ಯೆ ಕಡಿಮೆಯಾಗಿಲ್ಲ. ಕಿರಿಯ ಪ್ರಾಥಮಿಕ ಶಾಲೆಯಾದರೂ ಸಹ ಪ್ರತಿವರ್ಷ ಸರಾಸರಿ 50ಕ್ಕಿಂತಲೂ ಹೆಚ್ಚು ಮಕ್ಕಳು ಈ ಶಾಲೆಯಲ್ಲಿ ಇರುತ್ತಾರೆ. ಇಲ್ಲಿನ ಶಿಕ್ಷಕರು ಶಾಲೆಯ ಮಕ್ಕಳಲ್ಲಿ ಕೇವಲ ಪುಸ್ತಕದ ವಿಷಯಗಳನ್ನು ಮಾತ್ರ ಕಲಿಸುವುದಕ್ಕೆ ಸೀಮಿತವಾಗದೇ ಮಕ್ಕಳ ಪ್ರತಿಭೆಗೆ ಪ್ರೋತ್ಸಾಹ ನೀಡುತ್ತಾ ಬರುತ್ತಿದ್ದಾರೆ. ಶಿಸ್ತು, ಸಮಯ ಪಾಲನೆ, ಜೀವನ ಮೌಲ್ಯಗಳು, ಉತ್ತಮ ನಡವಳಿಕೆಗಳನ್ನು ಕಲಿಸುತ್ತಾ ಸದಾ ಕ್ರಿಯಾಶೀಲರಾಗಿರುವಂತೆ ಪ್ರೋತ್ಸಾಹ ನೀಡುತ್ತಾ ಬರುತ್ತಿದ್ದಾರೆ.
ಶಾಲೆಯ ಭೌತಿಕ ಪರಿಸರ, ಶಾಲಾ ವಾತಾವರಣವನ್ನು ಸುಂದರಗೊಳಿಸಲು, ಶಿಕ್ಷಣ ಇಲಾಖೆ, ಪೋಷಕರು, ಗ್ರಾಮಸ್ಥರು, ದಾನಿಗಳು, ಹಳೇವಿದ್ಯಾರ್ಥಿಗಳು, ಗ್ರಾಮಪಂಚಾಯಿತಿ, ಸಂಘ ಸಂಸ್ಥೆಗಳ ಸಹಕಾರ ಪಡೆದು ಇಡೀ ಶಾಲೆಗೆ ಸುಣ್ಣಬಣ್ಣ ಬಳಿಸಿ ವರ್ಲಿ ಆರ್ಟ್ಸ್ನಿಂದ ಚಿತ್ತಾರಗಳನ್ನು ಮೂಡಿಸಿ ಶಾಲೆಯ ಚಿತ್ರಣವನ್ನು ಅದ್ಭುತಗೊಳಿಸಿದ್ದಾರೆ. ಮೂಡಿಗೆರೆ ತಾಲ್ಲೂಕಿನಲ್ಲಿ ನಲಿ-ಕಲಿ ಶಿಕ್ಷಣ ಪದ್ಧತಿಯನ್ನು ಬಹಳ ಯಶಸ್ವಿಯಾಗಿ ಅಳವಡಿಸಿಕೊಂಡು ಕಾರ್ಯರೂಪಕ್ಕೆ ತಂದಿರುತ್ತಾರೆ.
ಈ ಶಾಲೆಯನ್ನು ಒಂದು ಮಾದರಿ ಸರ್ಕಾರಿ ಶಾಲೆಯಾಗಿಸುವಲ್ಲಿ ಶಾಲೆಯ ಶಿಕ್ಷಕರ ಪಾತ್ರ ಪ್ರಮುಖವಾಗಿದೆ. ಶಾಲೆಯ ವಿದ್ಯಾರ್ಥಿಗಳು ಪ್ರತಿಭಾ ಕಾರಂಜಿಯಲ್ಲಿ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಬಹುಮಾನಗಳನ್ನು ಗಳಿಸುತ್ತಿದ್ದು, ಜಾನಪದ ನೃತ್ಯದಲ್ಲಿ 4 ಬಾರಿ ಜಿಲ್ಲಾಮಟ್ಟದಲ್ಲಿ ಪ್ರದರ್ಶನ ನೀಡಿರುತ್ತಾರೆ.
ಈ ಶಾಲೆಯಲ್ಲಿ ಕಳೆದ 15 ವರ್ಷಗಳಿಂದ ಶಿಕ್ಷಕಿಯಾಗಿರುವ ಹಾಲಿ ಶಾಲೆಯ ಮುಖ್ಯ ಶಿಕ್ಷಕಿಯಾಗಿರುವ ಶ್ರೀಮತಿ ಜೆ.ಎಂ. ಇಂಪಾ ಅವರ ಮುತುವರ್ಜಿಯಿಂದ ಈ ಶಾಲೆ ಒಂದು ಮಾದರಿ ಶಾಲೆಯಾಗಿ ಗುರುತಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವನ್ನು ಇವರು ಮಾಡುತ್ತಿದ್ದಾರೆ.
ಈ ಬಾರಿಯ ಶಿಕ್ಷಕರ ದಿನದ ಸಂದರ್ಭದಲ್ಲಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯನ್ನು ಗಳಿಸಿದವರಲ್ಲಿ ಜೆ.ಎಂ. ಇಂಪಾ ಸಹ ಒಬ್ಬರು. ಇಂಪಾ ಮೂಡಿಗೆರೆ ತಾಲ್ಲೂಕು ಜಾಣಿಗೆ ಗ್ರಾಮದ ಮಂಜುನಾಥಗೌಡ ಮತ್ತು ಜಯಲಕ್ಷ್ಮಿ ಯವರ ಪುತ್ರಿ. ಪತಿ ಸವೀನ್ ಮತ್ತು ಮಕ್ಕಳೊಂದಿಗೆ ಮೂಡಿಗೆರೆ ಪಟ್ಟಣದಲ್ಲಿ ವಾಸವಾಗಿದ್ದಾರೆ.
ಸರ್ಕಾರಿ ಶಾಲೆಯನ್ನು ಜನರು ಉಪೇಕ್ಷೆ ಮಾಡುತ್ತಾ ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಕಳುಹಿಸಲು ಆಸಕ್ತಿ ತೋರುತ್ತಿರುವ ಸಂದರ್ಭದಲ್ಲಿ ಸರ್ಕಾರಿ ಶಾಲೆಯನ್ನು ಉಳಿಸುವ ಕಾರ್ಯದಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾಗಿದೆ. ಈ ನಿಟ್ಟಿನಲ್ಲಿ ಇಂಪಾ ಅವರಂತೆ ಸೇವಾ ಮನೋಭಾವನೆಯ ಶಿಕ್ಷಕರನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿರುವುದು ಶ್ಲಾಘನೀಯವಾಗಿದೆ.


