ಪತಿ ಮೃತಪಟ್ಟು 10 ದಿನ ಕಳೆದರೂ ಅದರ ಅರಿವಿಲ್ಲದೆ ವೃದ್ಧ ಪತ್ನಿ ಶವದ ಜೊತೆಯೇ ಕಾಲ ಕಳೆದಿರುವ ಹೃದಯವಿದ್ರಾವಕ ಘಟನೆ ಮೂಡಿಗೆರೆ ತಾಲೂಕಿನ ಬಣಕಲ್ ಪಟ್ಟಣದಲ್ಲಿ ನಡೆದಿದೆ.
ಮೂಡಿಗೆರೆ ತಾಲ್ಲೂಕಿನ ಬಣಕಲ್ ಪಟ್ಟಣದ ಸಿರಿಲ್ ಮೋನೀಸ್ (77 ವರ್ಷ) ತಮ್ಮ ಮನೆಯಲ್ಲಿ ಸಾವನ್ನಪ್ಪಿದ್ದು ಮೋನಿಶ್ ಅವರ ಪತ್ನಿ ಸಿಸಿಲ್ ಅದರ ಅರಿವಿಲ್ಲದೆ ಪತಿಯ ಶವದ ಜೊತೆಯೇ 10 ದಿನಗಳು ದಿನದೊಡ್ಡಿದ್ದಾರೆ.
ಸಿರಿಲ್ ಮೊನಿಸ್ ದಂಪತಿಗಳ ಪುತ್ರ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು ಪುತ್ರಿ ವಿದೇಶದಲ್ಲಿದ್ದಾರೆ. ಸಿರಿಲ್ ಮೋನೀಸ್ ಅನಾರೋಗ್ಯದಿಂದ ಬಳಲುತ್ತಿದ್ದರು ಎನ್ನಲಾಗಿದೆ. ಕೆಲ ದಿನಗಳ ಹಿಂದಷ್ಟೇ ಪುತ್ರ ಬೆಂಗಳೂರಿನಿಂದ ಊರಿಗೆ ಬಂದು ಹಿಂದಿರುಗಿದ್ದರು.
ಮೃತ ಸಿರಿಲ್ ಮೋನಿಸ್ ಅವರ ಪತ್ನಿ ಮಾನಸಿಕ ಅಸ್ವಸ್ಥರಾಗಿದ್ದು ತನ್ನ ಪತಿ ಮೃತಪಟ್ಟಿದ್ದರೂ ಅದನ್ನು ಗುರುತಿಸಿ ಬೇರೆಯವರಿಗೆ ತಿಳಿಸಲು ಸಾಧ್ಯವಾಗಿಲ್ಲ. ಮಗ ಬೆಂಗಳೂರಿನಿಂದ ಕರೆ ಮಾಡಿದಾಗ ಅಪ್ಪನ ಬಗ್ಗೆ ವಿಚಾರಿಸಿದರೆ ಚೆನ್ನಾಗಿದ್ದಾರೆ ಎಂದೇ ತಿಳಿಸಿದ್ದಾರೆ. ಆದರೆ ಮೃತ ಶರೀರ ಕೊಳೆತು ವಾಸನೆ ಬರಲು ಪ್ರಾರಂಭಿಸಿದಾಗ ಅನುಮಾನಗೊಂಡ ಅಕ್ಕಪಕ್ಕದ ನಿವಾಸಿಗಳು ಗಮನಿಸಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ.
ಪೊಲೀಸರ ಸ್ಥಳಕ್ಕೆ ಬಂದು ನಂತರ ಸಮಾಜ ಸೇವಕ ಆರೀಫ್ ಬಣಕಲ್ ಅವರ ಸಹಾಯದಿಂದ ಕೊಳೆತ ಶವವನ್ನು ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ.



