ಕಾಫಿ ತೋಟಗಳಲ್ಲಿ ದುಡಿಯುವ ಕಾರ್ಮಿಕರೊಂದಿಗೆ ಅಂತರಾಷ್ಟ್ರೀಯ ಕಾಫಿ ದಿನಾಚರಣೆಯನ್ನು ಆಚರಿಸುವ ಮೂಲಕ ಬೇಲೂರು ತಾಲೂಕು ಅರೇಹಳ್ಳಿ ಹೋಬಳಿಯ ಕಾನಳ್ಳಿ ಕಾಫಿ ಎಸ್ಟೇಟ್‌ನಲ್ಲಿ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾನಳ್ಳಿ ಕಾಫಿ ಎಸ್ಟೇಟ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಸ್ಟೇಟ್ ಮಾಲೀಕ ಹಾಗೂ ಕೆಜಿಎಫ್ ಮಾಜಿ ಅಧ್ಯಕ್ಷ ಹಾಗೂ 7 ಬೀನ್ ಟೀಮ್ ನ ಉಪಾಧ್ಯಕ್ಷ ತೀರ್ಥ ಮಲ್ಲೇಶ್ ನೇತೃತ್ವದಲ್ಲಿ ಕಾರ್ಯಕ್ರಮ ಜರುಗಿತು.

ಈ ಸಂದರ್ಭದಲ್ಲಿ ಮಾತನಾಡಿದ ತೀರ್ಥಮಲ್ಲೇಶ್ ಭಾರತದಲ್ಲಿ ವಾರ್ಷಿಕವಾಗಿ ಸುಮಾರು 4.75 ಲಕ್ಷ ಮೆಟ್ರಿಕ್ ಟನ್ ಕಾಫಿ ಉತ್ಪಾದನೆಯಾಗುತ್ತಿದ್ದು, ಪ್ರಪಂಚದ ಕಾಫಿ ಬೆಳೆಯುವ ಸುಮಾರು 70 ದೇಶಗಳ ಪೈಕಿ ಭಾರತ 7ನೇ ಸ್ಥಾನದಲ್ಲಿದೆ.
ದೇಶದಲ್ಲಿ ಕಾಫಿ ಉತ್ಪಾದನೆಗೆ ಹೋಲಿಸಿದರೆ ದೇಶೀಯ ಬಳಕೆ ಇನ್ನೂ ಕಡಿಮೆಯಾಗಿದೆ. ಭಾರತದಲ್ಲಿ ಪ್ರತಿ ಗಂಟೆಗೆ ಸುಮಾರು 30 ಲಕ್ಷ ಕಪ್‌ಗಳಷ್ಟು ಕಾಫಿ ಸೇವನೆಯಾಗುತ್ತಿದ್ದರೂ, ವಾರ್ಷಿಕ ಸರಾಸರಿ ಕಾಫಿ ಬಳಕೆ ಪ್ರತಿ ವ್ಯಕ್ತಿಗೆ ಸುಮಾರು 10 ಗ್ರಾಂನಷ್ಟಿದೆ. ದೇಶದಲ್ಲಿ ಉತ್ಪಾದನೆಯಾಗುವ ಕಾಫಿಯನ್ನೇ ಹೆಚ್ಚಿನ ಪ್ರಮಾಣದಲ್ಲಿ ದೇಶೀಯವಾಗಿ ಬಳಕೆ ಮಾಡಿದರೆ ಭಾರತದಲ್ಲಿಯೇ ಬೃಹತ್ ಕಾಫಿ ಮಾರುಕಟ್ಟೆಯನ್ನು ನಿರ್ಮಿಸಿ ಕಾಫಿಯ ಮೌಲ್ಯವರ್ಧನೆ ಸಾಧ್ಯವಾಗುತ್ತದೆ.
ಕಾಫಿ ಉದ್ಯಮದ ಬೆಳವಣಿಗೆಯಲ್ಲಿ ತೋಟಗಳಲ್ಲಿ ತಳಮಟ್ಟದಲ್ಲಿ ದುಡಿಯುವ ಕಾರ್ಮಿಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಅವರ ಪರಿಶ್ರಮದಿಂದಲೇ ಕಾಫಿ ಉತ್ಪಾದನೆ ಸಾಧ್ಯವಾಗುತ್ತಿದ್ದು, ಕಾರ್ಮಿಕರ ಕೊಡುಗೆಯನ್ನು ಗೌರವಿಸುವ ಉದ್ದೇಶದಿಂದ ಈ ಬಾರಿ ಕಾಫಿ ದಿನಾಚರಣೆಯನ್ನು ಅವರೊಂದಿಗೆ ಆಚರಿಸಲಾಗುತ್ತಿದೆ ಎಂದು ಹೇಳಿದರು.
ಶ್ರೀಮತಿ ಪೂರ್ಣಿಮಾ ತೀರ್ಥಮಲ್ಲೇಶ್ ಮಾತನಾಡಿ, ಮುಂಬೈನಂತಹ ಮಹಾನಗರಗಳಲ್ಲಿ ನಡೆಯುವ ರೇವ್ ಪಾರ್ಟಿಗಳಲ್ಲಿಯೂ ಕಾಫಿ ಸೇವನೆ ವ್ಯಾಪಕವಾಗುತ್ತಿರುವುದು ಗಮನಾರ್ಹವಾಗಿದೆ. ಮುಂದಿನ ದಿನಗಳಲ್ಲಿ ಕಾಫಿಗೆ ಭಾರತದಲ್ಲಿಯೇ ಉತ್ತಮ ಮಾರುಕಟ್ಟೆ ಸೃಷ್ಟಿಯಾಗುವ ಸಾಧ್ಯತೆಗಳಿದ್ದು, ದೇಶೀಯವಾಗಿ ಕಾಫಿ ಬಳಕೆಯನ್ನು ಹೆಚ್ಚಿಸುವ ಮೂಲಕ ಕಾಫಿ ಉದ್ಯಮಕ್ಕೆ ಮತ್ತಷ್ಟು ಉತ್ತೇಜನ ನೀಡಬಹುದು ಎಂದರು.
ಕಾನಳ್ಳಿ ಕಾಫಿ ಎಸ್ಟೇಟ್‌ನಲ್ಲಿ ಅಸ್ಸಾಂ ಮೂಲದ ಹಲವು ಕಾರ್ಮಿಕರು ಕೆಲಸ ಮಾಡುತ್ತಿದ್ದು, ಸಾಮಾನ್ಯವಾಗಿ ಟೀ ಸೇವಿಸುವ ಅವರಿಗೆ ಕಾಫಿಯ ಮಹತ್ವ ಹಾಗೂ ಕಾಫಿ ಸೇವನೆಯ ಕುರಿತು ಅರಿವು ಮೂಡಿಸಲಾಯಿತು. ಟೀ ಬದಲಿಗೆ ಕಾಫಿ ಸೇವಿಸುವಂತೆ ಪ್ರೋತ್ಸಾಹಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕಾರ್ಮಿಕ ಮೊಹಮ್ಮ ನೌಷಾದ್ ಆಲಿ, “ನಮ್ಮ ಕಷ್ಟಗಳಿಗೆ ಸ್ಪಂದಿಸುವ ಮಾಲಿ.. ಒಳ್ಳೆಯದಾಗಲಿ. ಇನ್ನು ಮುಂದೆ ಟೀ ಬದಲಿಗೆ ಕಾಫಿ ಕುಡಿಯಲು ಆರಂಭಿಸುತ್ತೇವೆ” ಎಂದು ಸಂತಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕಾರ್ಮಿಕ ಮೊಹಮ್ಮದ್ ನೌಷಾದ್ ಆಲಿ, “ನಮ್ಮ ಕಷ್ಟಗಳಿಗೆ ಸ್ಪಂದಿಸುವ ಮಾಲೀಕರಿಗೆ ಒಳ್ಳೆಯದಾಗಲಿ. ಇನ್ನು ಮುಂದೆ ಟೀ ಬದಲಿಗೆ ಕಾಫಿ ಕುಡಿಯಲು ಆರಂಭಿಸುತ್ತೇವೆ” ಎಂದು ಸಂತಸ ವ್ಯಕ್ತಪಡಿಸಿದರು.
ಕಾಫಿ ಉತ್ಪಾದನೆಯ ಜೊತೆಗೆ ದೇಶೀಯ ಕಾಫಿ ಬಳಕೆಯನ್ನೂ ಹೆಚ್ಚಿಸುವ ಅಗತ್ಯವಿದೆ. ಕಾಫಿ ಬೆಳೆಯುವ ರೈತರು, ತೋಟದ ಕಾರ್ಮಿಕರು ಹಾಗೂ ಕಾಫಿ ಉದ್ಯಮಕ್ಕೆ ಸಂಬಂಧಿಸಿದ ಪ್ರತಿಯೊಬ್ಬರ ಪರಿಶ್ರಮಕ್ಕೆ ಸೂಕ್ತ ಮೌಲ್ಯ ದೊರೆಯಬೇಕಾದರೆ ದೇಶೀಯ ಮಾರುಕಟ್ಟೆಯ ವಿಸ್ತರಣೆ ಅಗತ್ಯ ಎಂಬ ಸಂದೇಶ ಕಾರ್ಯಕ್ರಮದಲ್ಲಿ ವ್ಯಕ್ತವಾಯಿತು.
ಕಾರ್ಯಕ್ರಮದಲ್ಲಿ ಕಾರ್ಮಿಕರು ನೃತ್ಯ ಮಾಡಿ ಸಂಭ್ರಮಿಸಿದರು. ಬಳಿಕ ಕಾರ್ಮಿಕರಿಗೆ ಗುಣಮಟ್ಟದ ಕಾಫಿ ಪುಡಿಯಿಂದ ತಯಾರಿಸಿದ ಕಾಫಿಯನ್ನು ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ತೀರ್ಥ ಮಲ್ಲೇಶ್ ಅವರು ಕಾರ್ಮಿಕರಿಗೆ ಉಡುಗೊರೆಗಳನ್ನು ನೀಡಿ ಅವರ ಪರಿಶ್ರಮವನ್ನು ಗೌರವಿಸಿದರು. ಕಾನಳ್ಳಿ ಕಾಫಿ ಎಸ್ಟೇಟ್‌ನ ಎಲ್ಲಾ ಕಾರ್ಮಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ಅಂತರಾಷ್ಟ್ರೀಯ ಕಾಫಿ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಿದರು.


