ಹಾಸನ ಜಿಲ್ಲೆಯ ಬೇಲೂರು ಭಾಗದಿಂದ ಕಾಡಾನೆಗಳನ್ನು ಚಿಕ್ಕಮಗಳೂರು ಜಿಲ್ಲೆಯ ಭಾಗಕ್ಕೆ ಅಟ್ಟಿದ್ದಕ್ಕೆ ಸರ್ಕಾರದ ವಿರುದ್ಧ ಸ್ಥಳೀಯ ಶಾಸಕರು ಅಸಮಾಧಾನ ಹೊರಹಾಕಿದ್ದಾರೆ. ಕಾಂಗ್ರೆಸ್ನ ಮೂವರು ಶಾಸಕರು ರಾಜೀನಾಮೆ ನೀಡುವುದಾಗಿ ಸಹ ಎಚ್ಚರಿಕೆ ನೀಡಿದ್ದಾರೆ.
ಕಾಡಾನೆಗಳನ್ನು ಹಾಸನ ಭಾಗದಿಂದ ಚಿಕ್ಕಮಗಳೂರು ಭಾಗಕ್ಕೆ ಓಡಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರು ಶಾಸಕ ತಮ್ಮಯ್ಯ, ಮೂಡಿಗೆರೆ ಶಾಸಕಿ ನಯನ ಮೋಟಮ್ಮ, ಶೃಂಗೇರಿ ಶಾಸಕ ರಾಜೇಗೌಡ ಅವರು ರಾಜೀನಾಮೆ ಎಚ್ಚರಿಕೆ ನೀಡಿದ್ದಾರೆ.
ಜಿಲ್ಲೆಯಲ್ಲಿ ಮಾನವ ಪ್ರಾಣಿ ಸಂಘರ್ಷ ದಿನೇ ದಿನೇ ಹೆಚ್ಚಾಗುತ್ತಿದೆ. 2 ವರ್ಷದಲ್ಲಿ 16 ಜನ ಸಾವನ್ನಪ್ಪಿದ್ದಾರೆ. 58 ರಲ್ಲಿ 2 ಕಾಡಾನೆ ಸೆರೆಯಾಗಿದೆ, 56 ಆನೆಗಳನ್ನ ಭದ್ರಾ ಅಭಯಾರಣ್ಯಕ್ಕೆ ಕಳಿಸುತ್ತೇವೆ ಎಂದಿದ್ದರು. ನಮ್ಮ ಜಿಲ್ಲೆಗೆ ಕಳಿಸುವುದು ಬೇಡ ಎಂದು ನಾವು ಪತ್ರ ನೀಡಿದ್ದೇವೆ. ಈಗ ನಮಗೆ ಗೊತ್ತಿಲ್ಲದಂತೆ ಆನೆಗಳನ್ನ ಓಡಿಸಿದ್ದಾರೆ. ಅಧಿಕಾರಿಗಳ ಮೇಲೆ ಒತ್ತಡ ತಂದು ಆನೆ ಓಡಿಸಿದ್ದಾರೆ. ಮುತ್ತೋಡಿಯಲ್ಲಿ 450ಕ್ಕೂ ಹೆಚ್ಚು ಆನೆಗಳಿವೆ. ಯಾವುದೇ ಕಾರಣಕ್ಕೂ ನಮ್ಮ ಭಾಗಕ್ಕೆ ಆನೆಗಳನ್ನು ಓಡಿಸಬಾರದು. ಕೆಲವು ವೇಳೆ ಆನೆಗಳು ಬರುತ್ತವೆ, ಹೋಗುತ್ತವೆ. ಅದಕ್ಕೆ ತೊಂದತೆ ಇಲ್ಲ, ಬಲವಂತವಾಗಿ ಓಡಿಸುವುದಕ್ಕೆ ನಮ್ಮ ವಿರೋಧವಿದೆ.
ಬೇಲೂರಲ್ಲಿ 2 ಸಾವು ಆಯ್ತು ಅಂತ ಇಲ್ಲಿಗೆ ಓಡಿಸೋದು ಸರಿಯಲ್ಲ. ಅಲ್ಲಿನ ಸಚಿವರು ಹೇಳಿದರು ಅಂತ ಇತ್ತ ಓಡಿಸೋದು ಸರಿಯಲ್ಲ. ನಾವು ಎಲ್ಲಾ ತ್ಯಾಗಕ್ಕೂ ಸಿದ್ಧರಿದ್ದೇವೆ. ನಮಗೆ ಜನ ಮುಖ್ಯ, ಜನರ ಕಣ್ಣೀರು ನೋಡಲು ಆಗುವುದಿಲ್ಲ. 20 ಲಕ್ಷ ರೂ. ಪರಿಹಾರ ಜೀವ ತಂದು ಕೊಡಲ್ಲ. ಆನೆ ಓಡಿಸೋಕೆ 3 ಸಾವಿರ ಜನ ರೆಡಿ ಇದ್ದಾರೆ. ನಾವೇ ಬೇಡ ಅಂತ ಹೇಳಿದ್ದೇವೆ. ಈಗ ಭದ್ರಾ ಅಭಯಾರಣ್ಯಕ್ಕೆ ಡ್ರೈವ್ ಮಾಡೋದನ್ನ ನಿಲ್ಲಿಸುತ್ತೇವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂದು ಶೃಂಗೇರಿ ಶಾಸಕ ರಾಜೇಗೌಡ ತಿಳಿಸಿದ್ದಾರೆ.
ಶಾಸಕಿ ನಯನ ಮೋಟಮ್ಮ ಮಾತನಾಡಿ, ನಾವು ಆನೆಗಳನ್ನು ಓಡಿಸುವುದು ಬೇಡ ಎಂದು ಅರಣ್ಯ ಸಚಿವರಿಗೆ ಪತ್ರ ನೀಡಿದ್ದೇವೆ. ಆನೆಗಳನ್ನ ನಮ್ಮ ಕಡೆ ಓಡೊಸೋದಕ್ಕೆ ನಮ್ಮ ಸಂಪೂರ್ಣ ವಿರೋಧವಿದೆ. ನಮಗೆ ಡ್ರೈವ್ ಮಾಡೋದಿಲ್ಲ ಎಂದು ಹೇಳಿ ಮತ್ತೆ ಮಾಡಿದ್ದಾರೆ. 25ಕ್ಕೆ ಸಭೆ ಕರೆದು ಹೇಗೆ ಡ್ರೈವ್ ಮಾಡಿದ್ರಿ ಎಂದು ಪ್ರಶ್ನಿಸುತ್ತೇನೆ. ನಾನು ರಾಜೀನಾಮೆ ನೀಡುತ್ತೇನೆ ಎಂದು ಹೇಳಿದ್ದೇನೆ.
ನಮಗೆ ಗೊತ್ತಿಲ್ಲದೆ ಆನೆಗಳನ್ನು ಓಡಿಸಿದ್ದಾರೆ, ಇದನ್ನು ನಾನು ಸಹಿಸಲ್ಲ. ನಾನು ರಾಜೀನಾಮೆ ಪತ್ರ ರೆಡಿ ಮಾಡಿಕೊಂಡು ಬಂದಿದ್ದೇನೆ. ಈಗ ಆನೆ ಓಡಿಸುವುದನ್ನು ನಿಲ್ಲಿಸುತ್ತೇನೆ ಎಂದಿದ್ದಾರೆ. ಇಂದು ರಾತ್ರಿ ಆನೆಗಳನ್ನ ಬೇಲೂರಿಗೆ ಓಡಿಸಬೇಕು. ಇಲ್ಲದಿದ್ದರೆ ನಾನು ರಾಜೀನಾಮೆ ನೀಡುತ್ತೇನೆ. ನಾನು ಸರ್ಕಾರಕ್ಕೆ ಉತ್ತರ ಕೊಡಬೇಕಿಲ್ಲ. ನಾನು ಜನರಿಗೆ ಉತ್ತರ ಕೊಡಬೇಕು, ಜನ ನನ್ನ ಆಯ್ಕೆ ಮಾಡಿರೋದು. ನಮ್ಮಿಂದ ಸರ್ಕಾರ, ಸರ್ಕಾರದಿಂದ ನಾವಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಇಷ್ಟು ವರ್ಷ 10-20 ಆನೆ ಬರೋದು-ಹೋಗೋದು ಮಾಮೂಲು. ಆನೆಗಳೇ ಬಂದರೆ ಅವು, ವಾಪಸ್ ಹೋಗುತ್ತವೆ. ಹೀಗೆ ಬಲವಂತವಾಗಿ ಡ್ರೈವ್ ಮಾಡೋದು ಸರಿಯಲ್ಲ. ನಾಳೆ ನನ್ನ ಕ್ಷೇತ್ರದ ಒಳಗೆ ಬರೋ ಆನೆಗಳು ಹೋಗಬೇಕು. ಇಲ್ಲದಿದ್ದರೆ ನಾಳೆ ನಾನು ರಾಜೀನಾಮೆ ಕೊಡ್ತೀನಿ ಎಂದು ಎಚ್ಚರಿಕೆ ನೀಡಿದ್ದಾರೆ.


