ಮದುವೆ ಸಮಾರಂಭದಲ್ಲಿ ಭಾಗಿಯಾಗಲು ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಬಂದಿದ್ದ ನಾಲ್ವರು ಯುವಕರು ತುಂಗಾ ನದಿಯಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ತೀರ್ಥಹಳ್ಳಿ ತಾಲೂಕಿನ ಮಹಿಷಿ ಗ್ರಾಮದ ಬಳಿ ನಡೆದಿದೆ. ಮೃತರನ್ನು ಬೆಂಗಳೂರು ಮೂಲದ 31 ವರ್ಷದ ಕಾರ್ತಿಕ್, 30 ವರ್ಷದ ಪವನ್, 19 ವರ್ಷದ ಚೇತನ್ ಹಾಗೂ 19 ವರ್ಷದ ನಕುಲ್ ಎಂದು ಗುರುತಿಸಲಾಗಿದೆ.
ವಿವಾಹ ಸಮಾರಂಭಕ್ಕೆ ಆಗಮಿಸಿದ್ದ ಯುವಕರ ತಂಡ ಈಜಾಡುವ ಸಲುವಾಗಿ ಮೊದಲಿಗೆ ಅಕ್ಕಪಕ್ಕ ಯಾವುದಾದರೂ ನದಿ ಇರುವ ಬಗ್ಗೆ ಗೂಗಲ್ ನಲ್ಲಿ ಸರ್ಚ್ ಮಾಡಿದ್ದಾರೆ. ಮಹಿಷಿ ಗ್ರಾಮದ ಬಳಿ ತುಂಗಾ ನದಿ ಹರಿಯುವ ಬಗ್ಗೆ ತಿಳಿದುಕೊಂಡು ಈಜಾಡಲು ತೆರಳಿದ್ದಾರೆ. ಇನ್ನು ಈಜಾಡುವಾಗ ನೀರಿನಲ್ಲಿ ಮುಳುಗುತ್ತಿದ್ದ ಒಬ್ಬ ಸ್ನೇಹಿತನನ್ನು ರಕ್ಷಿಸಲು ಹೋಗಿ ಒಬ್ಬೊಬ್ಬರಂತೆ ಮೂವರು ಸಹ ಮುಳುಗಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಹುಡುಕಾಟ ನಡೆಸಿದ್ದು ಒಬ್ಬನ ಮೃತದೇಹ ಪತ್ತೆಯಾಗಿದೆ.
ಬೆಂಗಳೂರಿನ ಇಟ್ಟಮಡುವಿನ ಪವನ್, ಕತ್ರಿಗುಪ್ಪೆಯ ಕಾರ್ತಿಕ್ ಮತ್ತು ತಲಘಟ್ಟಪುರದ ನಕುಲ್ ಕಾನೂನು ವ್ಯಾಸಂಗ ಮಾಡುತ್ತಿದ್ದು ಚೇತನ್ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು.
ಮುಳುಗು ತಜ್ಞ ಈಶ್ವರ್ ಮಲ್ಪೆ ನೇತೃತ್ವದ ತಂಡ ಹಾಗೂ ಸ್ಥಳೀಯರ ನೆರವಿನಿಂದ ನಾಲ್ವರ ಮೃತದೇಹಗಳನ್ನು ನದಿಯಿಂದ ಹೊರತೆಗೆಯಲಾಗಿದೆ.
ಮೃತದೇಹಗಳನ್ನು ತೀರ್ಥಹಳ್ಳಿಯ ಜೆಸಿ ಆಸ್ಪತ್ರೆಗೆ ರವಾನಿಸಲಾಗಿದ್ದು, ತೀರ್ಥಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


