ಮೂಡಿಗೆರೆ ತಾಲೂಕಿನಲ್ಲಿ ಕಾಡಾನೆ ಹಾವಳಿಯಿಂದ ರೈತರು ಬೆಳೆದ ಬೆಳೆ ನಷ್ಟವಾಗುತ್ತಿದ್ದು, ಮಾನವನ ಜೀವಕ್ಕೂ ಗ್ಯಾರಂಟಿ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ನ.29ರಂದು ಬಣಕಲ್‍ನಲ್ಲಿ ಕಾಂಗ್ರೆಸ್ ಸರಕಾರದ ಪಂಚ ಗ್ಯಾರಂಟಿ ಯೋಜನೆಗಳ ಹೋಬಳಿ ಮಟ್ಟದ ಸಮಾವೇಶ ಆಯೋಜಿಸಿರುವುದು ಖಂಡನೀಯ ಎಂದು ಭಾರತೀಯ ಕಿಸಾನ್ ಸಂಘದ ತಾಲೂಕು ಅಧ್ಯಕ್ಷ ಸಂಜಯ್ ಕೊಟ್ಟಿಗೆಹಾರ ಹೇಳಿದರು.
ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ 1 ವಾರದಿಂದ ಬೇಲೂರು ಕಡೆಯಿಂದ ಬಂದಿರುವ ಕಾಡಾನೆಗಳು ಮೂಡಿಗೆರೆ ತಾಲೂಕಿನಲ್ಲಿ ರೈತರ ಜಮೀನಿಗೆ ನುಗ್ಗಿ ಬೆಳೆಗಳನ್ನು ನಾಶಪಡಿಸುತ್ತಿವೆ. ರೈತರು ಬೆಳೆದ ಬೆಳೆ ಹಾಗೂ ಜೀವಕ್ಕೆ ರಕ್ಷಣೆ ಇಲ್ಲದಿದ್ದರೂ ಶಾಸಕಿ ನಯನಾ ಮೋಟಮ್ಮ ಅವರು ರೈತರ ಸಮಸ್ಯೆಗಳಿಗೆ ಸ್ಪಂದಿಸದೆ ಗ್ಯಾರಂಟಿ ಯೋಜನೆ ಸಮಾವೇಶದಲ್ಲಿ ಪಾಲ್ಗೊಳ್ಳಲು ಮುಂದಾಗಿರುವುದು ನಾಚಿಕೆಗೇಡಿನ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಮಾವೇಶದಲ್ಲಿ ಕಾರ್ಯಕರ್ತರಿಗೆ ಬಾಡೂಟದ ವ್ಯವಸ್ಥೆ ಮಾಡಲಾಗಿದ್ದು, ಮತ್ತೊಂದೆಡೆ ರೈತರು ಬೆಳೆ ಹಾಗೂ ಬದುಕು ಉಳಿಸಿಕೊಳ್ಳಲು ಹೋರಾಟ ನಡೆಸುತ್ತಿದ್ದಾರೆ. ರೈತರ ಸಂಕಷ್ಟದ ಬಗ್ಗೆ ಕಾಳಜಿ ವಹಿಸದೆ ಸಮಾವೇಶ ನಡೆಸುವುದು ಎಷ್ಟು ಸರಿ? ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವವರೆಗೂ ಸಮಾವೇಶ ನಡೆಸಲು ಅವಕಾಶ ನೀಡುವುದಿಲ್ಲ. ಒಂದು ವೇಳೆ ಸಮಾವೇಶ ನಡೆಸಲು ಮುಂದಾದರೆ ಭಾರತೀಯ ಕಿಸಾನ್ ಸಂಘ ಹಾಗೂ ರೈತರು ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸುವ ಮೂಲಕ ಕಾರ್ಯಕ್ರಮಕ್ಕೆ ವಿರೋಧ ವ್ಯಕ್ತಪಡಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.


