ಚಿಕ್ಕಮಗಳೂರು ತಾಲ್ಲೂಕಿನ ಆಲ್ದೂರು ಪಟ್ಟಣದಲ್ಲಿ ರಸ್ತೆಯ ಉಬ್ಬು ಜೀವವೊಂದನ್ನು ಬಲಿ ತೆಗೆದುಕೊಂಡಿದೆ.
ಆಲ್ದೂರು ಮೂಡಿಗೆರೆ ರಸ್ತೆಯಲ್ಲಿ ಪೂರ್ಣಪ್ರಜ್ಞಾ ಶಾಲೆಯ ಸಮೀಪ ರಸ್ತೆಯ ಹಂಪ್ ದಾಟುವಾಗ ಸ್ಕೂಟಿಯಿಂದ ಬಿದ್ದು ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಮೃತರನ್ನು ಆಲ್ದೂರಿನ ಶ್ರೀಮತಿ ಅಶ್ರಫ್ ಉನ್ನೀಸ್ ಎಂದು ಗುರುತಿಸಲಾಗಿದೆ.
ಭಾನುವಾರ ಮೊಹಮ್ಮದ್ ಮುಸ್ತಾಫ ಅವರು ಅಶ್ರಫ್ ಉನ್ನೀಸ ಅವರನ್ನು ಸ್ಕೂಟಿಯಲ್ಲಿ ಕೂರಿಸಿಕೊಂಡು ಮೂಡಿಗೆರೆಯಿಂದ ಆಲ್ದೂರಿಗೆ ಬರುತ್ತಿದ್ದರು. ಈ ಸಂದರ್ಭದಲ್ಲಿ ಆಲ್ದೂರಿನ ಪೂರ್ಣಪ್ರಜ್ಞಾ ಶಾಲೆಯ ಸಮೀಪ ರಸ್ತೆಯ ಹಂಪ್ ಮೂಲಕ ಸಾಗುವಾಗ ಸ್ಕೂಟಿಯ ಹಿಂಬದಿ ಕುಳಿತ್ತಿದ್ದ ಅಶ್ರಫ್ ಉನ್ನೀಸ ಅವರು ಸ್ಕೂಟಿಯಿಂದ ಕೆಳಗೆ ಬಿದ್ದಿದ್ದಾರೆ. ಸ್ಕೂಟಿಯಿಂದ ಬಿದ್ದ ರಭಸಕ್ಕೆ ಅವರ ತಲೆ ರಸ್ತೆಗೆ ತಾಗಿ ತೀವ್ರ ಪೆಟ್ಟಾಗಿ ಸಾವಿಗೀಡಾಗಿದ್ದಾರೆ.
ಅವೈಜ್ಞಾನಿಕ ಹಂಪ್ :
ಆಲ್ದೂರು ಪೂರ್ಣಪ್ರಜ್ಞಾ ಶಾಲೆಯ ಸಮೀಪ ಅನೇಕ ವರ್ಷಗಳಿಂದ ಇರುವ ರಸ್ತೆಯ ಹಂಪ್ ಅವೈಜ್ಞಾನಿಕವಾಗಿದೆ. ನಿಗದಿಗಿಂತ ಅತಿಹೆಚ್ಚು ಎತ್ತರವಿರುವ ಹಂಪ್ ಪ್ರಯಾಣಿಕರಿಗೆ ಕಂಠಕವಾಗಿ ಪರಿಣಮಿಸುತ್ತಿದೆ. ಈ ಹಂಪ್ ಬಗ್ಗೆ ಅರಿವಿಲ್ಲದೇ ಬರುವ ಪ್ರಯಾಣಿಕರು ಇದ್ದಕ್ಕಿದಂತೆ ಎದುರಾಗುವ ಎತ್ತರದ ಹಂಪ್ ಕಂಡು ಹೌಹಾರುತ್ತಾರೆ. ಹಂಪ್ ನೋಡಿ ಏಕಾಏಕಿ ಬ್ರೇಕ್ ಹಾಕಿದಾಗ ವಾಹನದಲ್ಲಿ ಕುಳಿತವರು ತಬ್ಬಿಬ್ಬಾಗುತ್ತಿದ್ದಾರೆ. ಸಮೀಪದಲ್ಲಿ ಶಾಲೆ ಇದೆ ಮತ್ತು ರಸ್ತೆಯ ತಿರುವು ಇದೆ ಎಂದು ಬಹಳ ವರ್ಷಗಳ ಹಿಂದೆ ಅಳವಡಿಸಿರುವ ಈ ಹಂಪ್ ಅವೈಜ್ಞಾನಿಕವಾಗಿದೆ. ಈ ಹಂಪ್ ಅನ್ನು ತೆರವುಗೊಳಿಸಿ ವೈಜ್ಞಾನಿಕ ರೀತಿಯಲ್ಲಿ ಹಂಪ್ಸ್ ಅಳವಡಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.



