ಜನವರಿ 2ರಿಂದ ಹವಾಮಾನದಲ್ಲಿ ತೀವ್ರ ಬದಲಾವಣೆ ಕಂಡುಬಂದಿದ್ದು, ಮೋಡಕವಿದ ವಾತಾವರಣ ಸೃಷ್ಟಿಯಾಗಿದೆ. ಬುಧವಾರ ಮಲೆನಾಡಿನ ಅನೇಕ ಭಾಗಗಳಲ್ಲಿ ಬಿರುಸಿನ ಮಳೆ ಸುರಿದಿದೆ.
ಚಿಕ್ಕಮಗಳೂರು ಜಿಲ್ಲೆಯ ವಿವಿಧ ಕಡೆಗಳಲ್ಲಿ ನಿನ್ನೆ ರಾತ್ರಿ ಜಡಿ ಮಳೆ ಸುರಿದಿದೆ. ಜಿಲ್ಲೆಯ ಸಾರಗೋಡು, ಬಾಳೆಹೊನ್ನೂರು, ಬಸ್ರೀಕಟ್ಟೆ, ತನುಡಿ ಸುತ್ತಮುತ್ತ 60 ರಿಂದ 90 ಸೆಂಟ್ಸ್ ಮಳೆಯಾಗಿದೆ. ಚಿಕ್ಕಮಗಳೂರು, ಮಲ್ಲಂದೂರು ಸುತ್ತಮುತ್ತ ಪ್ರದೇಶಗಳಲ್ಲಿ 10 ರಿಂದ 20 ಸೆಂಟ್ಸ್ ಮಳೆಯಾಗಿದೆ. ಮೂಡಿಗೆರೆ, ಬಣಕಲ್, ಆಲ್ದೂರು ಸುತ್ತಮುತ್ತಲೂ ಹಗುರದಿಂದ ಸಾಧಾರಣ ಮಳೆಯಾಗಿದೆ.
ಗುರುವಾರ ಬೆಳಿಗ್ಗೆಯೇ ಮಳೆ ಪ್ರಾರಂಭವಾಗಿದ್ದು, ಮಲೆನಾಡಿನಾಡ್ಯಂತ ತುಂತುರು ಮಳೆ ಸುರಿಯುತ್ತಿದೆ. ವಾತಾವರಣ ದಿಢೀರ್ ಆಗಿ ಬದಲಾಗಿದ್ದು, ಬಹುತೇಕ ಮೋಡಕವಿದು ಹಗುರವಾದ ಮಳೆ ಪ್ರಾರಂಭವಾಗಿದೆ.
ರಾಜ್ಯದ ಕೊಡಗು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಜನವರಿ 9ರ ವರೆಗೆ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ.
ಮೈಸೂರು, ಮಂಡ್ಯ, ಚಾಮರಾಜನಗರ, ರಾಮನಗರ, ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ ಜಿಲ್ಲೆಗಳಲ್ಲಿ ಮೋಡ ಹಾಗೂ ಅಲ್ಲಲ್ಲಿ ತುಂತುರು ಮಳೆಯ ಮುನ್ಸೂಚನೆ ಇದೆ.
ಅರಬ್ಬಿ ಸಮುದ್ರದಲ್ಲಿ ನಿಮ್ನ ಒತ್ತಡದ ಜೊತೆಗೆ ಗಾಳಿಯ ಅನಿಯಮಿತ ಚಲನೆಯ ಕಾರಣ ಮುಂಗಾರು ಮಳೆಯ ರೀತಿಯ ವಾತಾವರಣ ಉಂಟಾಗಿದೆ.
ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಜನವರಿ 9ರ ತನಕ ಈ ಮಳೆಯ ವಾತಾವರಣ ಮುಂದುವರಿಯುವ ಲಕ್ಷಣಗಳಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಮಲೆನಾಡಿನಾದ್ಯಂತ ಈಗ ಕಾಫಿ, ಅಡಿಕೆ ಕೊಯ್ಲು ನಡೆಯುತ್ತಿದ್ದು, ಕೆಲವು ಕಡೆ ಭತ್ತದ ಕೊಯ್ಲು ಮತ್ತು ಒಕ್ಕಲಾಟ ನಡೆಯುತ್ತಿದೆ. ಬದಲಾದ ಹವಾಮಾನದಿಂದ ಬೆಳೆಗಾರರಲ್ಲಿ ಆತಂಕ ಮೂಡಿದೆ. ಕಾಫಿ ಗಿಡದಲ್ಲಿ ಹಣ್ಣಾಗಿದ್ದು ಈಗ ಜೋರಾಗಿ ಮಳೆಬಂದರೆ ಹಣ್ಣುಗಳು ನೆಲಸೇರುವ ಸಾಧ್ಯತೆಯಿದೆ. ಹಾಗೆಯೇ ಕಣದಲ್ಲಿರುವ ಕಾಫಿ ಮತ್ತು ಭತ್ತಕ್ಕೆ ಮಳೆಯಿಂದ ತುಂಬಾ ಹಾನಿಯಾಗುವ ಸಾಧ್ಯತೆಯಿದೆ. ಹಾಗೆಯೇ ಕಾಫಿ ಅಕಾಲಿಕವಾಗಿ ಹೂವಾಗಿ ಮುಂದಿನ ವರ್ಷದ ಬೆಳೆನಷ್ಟ ಆಗುವ ಸಾಧ್ಯತೆ ಇದೆ. ಹಾಗಾಗಿ ಜೋರಾದ ಮಳೆ ಬಾರದಿರಲಿ ಎಂದು ರೈತಾಪಿ ವರ್ಗ ಪ್ರಾರ್ಥಿಸುತ್ತಿದೆ.



